10 ವರ್ಷಗಳ ಹಿಂದೆ ಈ ದಿನ ವಾಂಖೆಡೆ ಮೈದಾನದಲ್ಲಿ ಸಚಿನ್..ಸಚಿನ್ ಕೂಗು ಪ್ರತಿಧ್ವನಿಸುತ್ತಿತ್ತು. ಕಾರಣ ಅದು ಸಚಿನ್ ತೆಂಡೂಲ್ಕರ್ ವಿದಾಯದ ಪಂದ್ಯ. ಇದೀಗ ಅದೇ ಮೈದಾನದಲ್ಲಿ, ಅದೇ ದಿನ ವಿರಾಟ್ ಕೊಹ್ಲಿ, ಸಚಿನ್ ದಾಖಲೆ ಮುರಿದು 50ನೇ ಶತಕ ಸಿಡಿಸಿದ್ದಾರೆ. ನವೆಂಬರ್ 15 ಸಚಿನ್ ಹಾಗೂ ಕೊಹ್ಲಿಗೆ ಮಹತ್ವದ ದಿನ.
ಮುಂಬೈ(ನ.15) ಆಧುನಿಕ ಕ್ರಿಕೆಟ್‌ನ ರನ್ ಮಶಿನ್ ವಿರಾಟ್ ಕೊಹ್ಲಿಗೆ ಸಚಿನ್ ತೆಂಡೂಲ್ಕರ್ ರೋಲ್ ಮಾಡೆಲ್. ಸಚಿನ್ ಆಟವನ್ನು ನೋಡಿ ಬೆಳೆದ ವಿರಾಟ್ ಕೊಹ್ಲಿ ಕೊನೆಗೆ ಸಚಿನ್ ಜೊತೆಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡು, ಕ್ರಿಕೆಟ್ ಆಡಿದ್ದಾರೆ. ಕೊಹ್ಲಿ ಆಟಕ್ಕೆ ಸಚಿನ್ ತೆಂಡೂಲ್ಕರ್ ಶಹಬ್ಬಾಷ್ ಹೇಳಿದ್ದಾರೆ. ಸಚಿನ್ ಹಾಗೂ ಕೊಹ್ಲಿ ಕ್ರಿಕೆಟ್ ಕರಿಯರ್‌ನಲ್ಲಿ ಕೆಲ ಘಟನೆಗಳು ಕಾಕತಾಳಿಯವಾಗಿ ಸಂಭವಿಸಿದೆ. ಇದೀಗ ವಿರಾಟ್ ಕೊಹ್ಲಿಯ ದಾಖಲೆಯ 50ನೇ ಶತಕ ಕೂಡ. 10 ವರ್ಷದ ಹಿಂದೆ, ಅಂದರೆ 2013ರ ನವೆಂಬರ್ 15 ರಂದು ಸಚಿನ್ ತೆಂಂಡೂಲ್ಕರ್ ಇದೇ ವಾಂಖೆಡೆ ಮೈದಾನದಲ್ಲಿ ತಮ್ಮ ವಿದಾಯದ ಪಂದ್ಯ ಆಡಿದ್ದರು. ಕೊನೆಯ ಬಾರಿಗೆ ಮೈದಾನಕ್ಕಿಳಿದ ಸಚಿನ್ ತೆಂಡೂಲ್ಕರ್ ಹಾಫ್ ಸೆಂಚುರಿ ಸಿಡಿಸಿದ್ದರು. ಇದೀಗ ನವಂಬರ್ 15, 2023ರಲ್ಲಿ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಮುಂದೆ 50ನೇ ಶತಕ ಸಿಡಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಏಕದಿನ ಸೆಂಚುರಿ ದಾಖಲೆಯನ್ನು ಪುಡಿ ಮಾಡಿದ್ದಾರೆ.
ಸಚಿನ್ ತೆಂಡೂಲ್ಕರ್ ವಿದಾಯ ಪಂದ್ಯ ಕ್ರಿಕೆಟ್ ಇತಿಹಾಸದಲ್ಲೇ ಅವಸ್ಮರಣೀಯ ಪಂದ್ಯ. ಸಚಿನ್‌ಗೆ ಅತ್ಯಂತ ಗೌರವಪೂರ್ಣ ವಿದಾಯ ನೀಡಲಾಗಿತ್ತು. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸಚಿನ್ ವಿದಾಯದ ಪಂದ್ಯವಾಗಿತ್ತು. ನವೆಂಬರ್ 14 ರಿಂದ 16ರ ವರೆಗೆ ಈ ಪಂದ್ಯ ಆಯೋಜನೆಗೊಂಡಿತ್ತು. ನವೆಂಬರ್ 14 ರಂದೇ ಸಚಿನ್ ಬ್ಯಾಟಿಂಗ್ ಇಳಿದಿದ್ದರು. ಆದರೆ ನವೆಂಬರ್ 15 ರಂದು ಸಚಿನ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ದರು. ಟೆಸ್ಟ್ ಪಂದ್ಯದ ಮೂರನೇ ದಿನ ಅಂದರೆ ನವೆಂಬರ್ 16 ರಂದು ಸಚಿನ್ 74 ರನ್ ಸಿಡಿಸಿ ಔಟಾಗಿದ್ದರು. ಈ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 126 ರನ್ ಗೆಲುವು ದಾಖಲಿಸಿತ್ತು. ಸಚಿನ್ ವಿದಾಯ ಹೇಳಿದ್ದರು.
ಕೊಹ್ಲಿ-ಅಯ್ಯರ್ ಶತಕ ಸಂಭ್ರಮ ನಡುವೆ ವಿವಾದ,ಅಂತಿಮ ಕ್ಷಣದಲ್ಲಿ ಪಿಚ್ ಬದಲಿಸಿದ ಆರೋಪ!
ಇದೀಗ ನವೆಂಬರ್ 15, 2023ರಂದು ವಿರಾಟ್ ಕೊಹ್ಲಿ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ರೋಲ್ ಮಾಡೆಲ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಎದುರಲ್ಲೇ ಸಚಿನ್ ದಾಖಲೆ ಮುರಿದಿದ್ದಾರೆ. ಇದೂ ಕೂಡ ವಾಂಖೆಡೆ ಕ್ರೀಡಾಂಗಣ, ನವೆಂಬರ್ 15. ಕೊಹ್ಲಿ ಸೆಂಚುರಿ ಸಿಡಿಸಿ, ಸಚಿನ್ ತೆಂಡುಲ್ಕರ್‌ಗೆ ತಲೆಬಾಗಿ ನಮಸ್ಕರಿಸಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್‌ಗೆ ಗೌರವ ಸಲ್ಲಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 50 ಶತಕ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ಸೆಂಚುರಿ ದಾಖಲಿಸಿದ ವಿಶ್ವದ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಚಿನ್ ತೆಂಡೂಲ್ಕರ್ 49 ಸೆಂಚುರಿ ದಾಖಲಿಸಿದ್ದಾರೆ.
ವಾಂಖೇಡೆಯಲ್ಲಿ ರನ್ ಸುರಿಮಳೆ; ಕೊಹ್ಲಿ-ಅಯ್ಯರ್ ಶತಕ ನಂಟು, ಕಿವೀಸ್ ಗೆಲ್ಲಲು ಗುರಿ 398