ಸೋಷಿಯಲ್ ಮೀಡಿಯಾವಾದ ಇನ್‌ಸ್ಟಾಗ್ರಾಂನಲ್ಲಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಅತಿಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿದ ಮೊದಲ ಭಾರತೀಯ ಕೊಹ್ಲಿ
ಏಷ್ಯಾದಲ್ಲೇ ಅತಿಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
ನವದೆಹಲಿ(ಮೇ.26): ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ 25 ಕೋಟಿ ಫಾಲೋವರ್ಸ್ಗಳನ್ನು ಹೊಂದಿದ್ದು, ಏಷ್ಯಾದಲ್ಲೇ ಅತಿಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೇ ವಿಶ್ವದಲ್ಲೇ ಅತಿಹೆಚ್ಚು ಇನ್‌ಸ್ಟಾಗ್ರಾಂ ಹಿಂಬಾಲಕರನ್ನು ಹೊಂದಿರುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಖ್ಯಾತ ಫುಟ್ಬಾಲಿಗರಾದ ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿ ಬಳಿಕ 3ನೇ ಸ್ಥಾನದಲ್ಲಿದ್ದಾರೆ.
ಪೋರ್ಚುಗಲ್ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ 58.5 ಕೋಟಿ, ಅರ್ಜೆಂಟೀನಾ ಫುಟ್ಬಾಲ್ ತಂಡದ ನಾಯಕ ಲಿಯೋನೆಲ್ ಮೆಸ್ಸಿ 46.4 ಕೋಟಿ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಟ್ವೀಟರ್ನಲ್ಲಿ ವಿರಾಟ್ ಕೊಹ್ಲಿಗೆ 55.9 ಮಿಲಿಯನ್ ಫಾಲೋವರ್ಸ್ಗಳಿದ್ದಾರೆ.
ಐಪಿಎಲ್‌ನಲ್ಲಿ ಮಿಂಚಿದ ವಿರಾಟ್ ಕೊಹ್ಲಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನದ ಮೂಲಕ ಮಿಂಚಿದ್ದಾರೆ. 2023ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 14 ಪಂದ್ಯಗಳನ್ನಾಡಿ 53.25ರ ಬ್ಯಾಟಿಂಗ್ ಸರಾಸರಿಯಲ್ಲಿ 6 ಅರ್ಧಶತಕ ಹಾಗೂ ಎರಡು ಅಮೋಘ ಶತಕಗಳ ನೆರವಿನಿಂದ 639 ರನ್ ಬಾರಿಸಿದ್ದು, ಲೀಗ್ ಹಂತ ಅತ್ಯಂದ ವೇಳೆಗೆ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್(730) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್(722) ಮೊದಲೆರಡು ಸ್ಥಾನದಲ್ಲೇ ಮುಂದುವರೆದಿದ್ದಾರೆ.
2024ರಲ್ಲೂ ಧೋನಿ ಆಡುತ್ತಾರೆ: ಡ್ವೇನ್ ಬ್ರಾವೋ
ಚೆನ್ನೈ: ತಮ್ಮ ಐಪಿಎಲ್ ನಿವೃತ್ತಿಯ ಬಗ್ಗೆ ಎಂ.ಎಸ್.ಧೋನಿ ಇನ್ನೂ ಗುಟ್ಟು ಬಿಟ್ಟುಕೊಡದಿದ್ದರೂ ಚೆನ್ನೈ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ, ಧೋನಿ ಮುಂದಿನ ವರ್ಷವೂ ಆಡುತ್ತಾರೆ ಎಂದು ಖಚಿತಪಡಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಮುಂದಿನ ಐಪಿಎಲ್ನಲ್ಲೂ ಧೋನಿ 100% ಆಡಲಿದ್ದಾರೆ. ಇಂಪ್ಯಾಕ್ಟ್ ಆಟಗಾರ ನಿಯಮ ಜಾರಿಯಲ್ಲಿರುವುದರಿಂದ ಧೋನಿಗೆ ಸಹಕಾರಿಯಾಗಬಹುದು. ಇತರರು ಲಯದಲ್ಲಿರುವುದರಿಂದ ಧೋನಿಯಿಂದ ತಂಡ ಹೆಚ್ಚೇನೂ ಬಯಸುವುದಿಲ್ಲ. ಆದರೆ ತಂಡದ ಒತ್ತಡ ನಿಭಾಯಿಸಲು ಧೋನಿ ನೆರವಾಗುತ್ತಿದ್ದಾರೆ’ ಎಂದಿದ್ದಾರೆ.
ಮುಂಬೈ vs ಗುಜರಾತ್: ಯಾರಿಗೆ IPL 2023 ಫೈನಲ್ ಅದೃಷ್ಟ?
2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 10ನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಇದೀಗ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಡಲಿದ್ದು, ಈ ಪಂದ್ಯದಲ್ಲಿ ವಿಜೇತರಾಗುವ ತಂಡವು ಮೇ 28ರಂದು ನಡೆಯಲಿರುವ ಐಪಿಎಲ್ ಫೈನಲ್‌ನಲ್ಲಿ ಕಪ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಜತೆ ಕಾದಾಡಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈಗಾಗಲೇ 4 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಐಪಿಎಲ್ ಬಳಿಕ ಏಷ್ಯಾಕಪ್ ಬಗ್ಗೆ ಅಂತಿಮ ನಿರ್ಧಾರ: ಶಾ
ನವದೆಹಲಿ: ದೀರ್ಘ ಸಮಯದಿಂದ ಗೊಂದಲಕ್ಕೆ ಕಾರಣವಾಗಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯ ದೇಶದ ಬಗ್ಗೆ ಅಂತಿಮ ನಿರ್ಧಾರವವನ್ನು ಈ ಬಾರಿ ಐಪಿಎಲ್ ಫೈನಲ್ ಬಳಿಕ ತೆಗೆದುಕೊಳ್ಳುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮುಖ್ಯಸ್ಥ ಜಯ್ ಶಾ ತಿಳಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಶಾ ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ್ದಾರೆ. ‘ಏಷ್ಯಾಕಪ್ ಆತಿಥ್ಯದ ಬಗ್ಗೆ ಈವರೆಗೆ ನಿರ್ಧಾರವಾಗಿಲ್ಲ. ಐಪಿಎಲ್ ಫೈನಲ್ ವೀಕ್ಷಣೆಗೆ ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗಳ ಅಧಿಕಾರಿಗಳು ಆಗಮಿಸಲಿದ್ದು, ಅವರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದ್ದಾರೆ.
ಈ ವರ್ಷ ಟೂರ್ನಿಯ ಆತಿಥ್ಯ ಹಕ್ಕು ಪಾಕ್ ಬಳಿ ಇದ್ದರೂ ಭಾರತ ತಂಡ ಕ್ರಿಕೆಟ್ ಆಡಲು ಪಾಕ್‌ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಹೀಗಾಗಿ ಟೂರ್ನಿಯನ್ನು ಪಾಕ್ನಲ್ಲೇ ಆಯೋಜಿಸಿ, ಭಾರತದ ಪಂದ್ಯಗಳನ್ನು ಬೇರೆಕಡೆ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ(ಪಿಸಿಸಿ) ಎಸಿಸಿಗೆ ಪ್ರಸ್ತಾಪ ಸಲ್ಲಿಸಿತ್ತು.