'ವಿರಾಟ್ ಕೊಹ್ಲಿ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿ ತಪ್ಪಿಸಿಕೊಂಡಿದ್ದು ನಾಚಿಕೆಗೇಡು'

By Naveen KodaseFirst Published Mar 2, 2024, 2:51 PM IST
Highlights

ಟೆಸ್ಟ್ ಸರಣಿಯ ಪ್ರಸಾರದ ಹಕ್ಕು ಹೊಂದಿರುವ ಜಿಯೋ ಸಿನಿಮಾ ಜತೆ ಮಾತನಾಡಿರುವ ಜೇಮ್ಸ್‌ ಆಂಡರ್‌ಸನ್, "ತಾವು ವಿಶ್ವದ ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ ಎದುರು ಆಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಧರ್ಮಶಾಲಾ(ಮಾ.03): ವೈಯುಕ್ತಿಕ ಕಾರಣ ನೀಡಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್, ವಿರಾಟ್ ಕೊಹ್ಲಿ ಅನುಪಸ್ಥಿತಿಯ ಕುರಿತಂತೆ ತುಟಿಬಿಚ್ಚಿದ್ದು, ಮಹತ್ವದ ಟೆಸ್ಟ್ ಸರಣಿಯನ್ನು ಕೊಹ್ಲಿ ತಪ್ಪಿಸಿಕೊಂಡಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಜೇಮ್ಸ್ ಆಂಡರ್‌ಸನ್ ಹಾಗೂ ವಿರಾಟ್ ಕೊಹ್ಲಿ ನಡುವಿನ ವೈರತ್ವ ಇಂದು ನಿನ್ನೆಯದಲ್ಲ. ಇಂಗ್ಲೆಂಡ್ ಅನುಭವಿ ಜೇಮ್ಸ್ ಆಂಡರ್‌ಸನ್ 10 ಬಾರಿ ವಿರಾಟ್ ಕೊಹ್ಲಿಯನ್ನು ಬಲಿ ಪಡೆದಿದ್ದಾರೆ. ಇನ್ನು ಇದೇ ವೇಳೆ ವಿರಾಟ್ ಕೊಹ್ಲಿ, ಆಂಡರ್‌ಸನ್ ಎದುರು 331 ರನ್ ಸಿಡಿಸಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ದಿಢೀರ್ ಎನ್ನುವಂತೆ ತಂಡದಿಂದ ಹಿಂದೆ ಸರಿದಿದ್ದರು. ಇದಾದ  ಕೆಲವೇ ದಿನಗಳ ಬಳಿಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅಕಾಯ್ ಎನ್ನುವ ಗಂಡು ಮಗುವನ್ನು ಸ್ವಾಗತಿಸಿದ್ದರು.

ರೋಹಿತ್ ಶರ್ಮಾ ನಾಯಕನಾಗಿ ಟೆಸ್ಟ್ ರೆಕಾರ್ಡ್ ಹೇಗಿದೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಟೆಸ್ಟ್ ಸರಣಿಯ ಪ್ರಸಾರದ ಹಕ್ಕು ಹೊಂದಿರುವ ಜಿಯೋ ಸಿನಿಮಾ ಜತೆ ಮಾತನಾಡಿರುವ ಜೇಮ್ಸ್‌ ಆಂಡರ್‌ಸನ್, "ತಾವು ವಿಶ್ವದ ಅತ್ಯುತ್ತಮ ಆಟಗಾರ ವಿರಾಟ್ ಕೊಹ್ಲಿ ಎದುರು ಆಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

"ಹೌದು, ನಾನು ಯಾವಾಗಲೂ ವಿಶ್ವದ ಅತ್ಯುತ್ತಮ ಆಟಗಾರನ ಎದುರು ಆಡಲು ಎದುರು ನೋಡುತ್ತಿರುತ್ತೇನೆ. ಆದರೆ ವಿರಾಟ್ ಕೊಹ್ಲಿ ಈ ಟೆಸ್ಟ್ ಸರಣಿಯನ್ನು ಆಡದೇ ಹೊರಗುಳಿದಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಹಲವು ವರ್ಷಗಳಿಂದ ನಮ್ಮಿಬ್ಬರ ನಡವೆ ಒಳ್ಳೆಯ ಹೋರಾಟ ಏರ್ಪಟ್ಟಿದೆ. ನಾನೊಬ್ಬನೆ ಅಲ್ಲ, ಇಡೀ ತಂಡವೇ ಅತ್ಯುತ್ತಮ ಆಟಗಾರನ ಎದುರು ಆಡಲು ಎದುರು ನೋಡುತ್ತಿದೆ" ಎಂದು ಆಂಡನ್‌ಸನ್‌ ಹೇಳಿದ್ದಾರೆ.

ಅಯ್ಯರ್, ಕಿಶನ್ ಮಾತ್ರವಲ್ಲ; ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರಿವರು..!

ನನ್ನ ಪ್ರಕಾರ, ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ಆಡದೇ ಇದ್ದಿದ್ದಕ್ಕೆ ಧನ್ಯವಾದ ಹೇಳುತ್ತಿರಬಹುದು. ಯಾಕೆಂದರೆ ಅವರು ಅಂತಹ ಗುಣಮಟ್ಟದ ಆಟಗಾರರಾಗಿದ್ದಾರೆ. ಆದರೆ ನಮ್ಮ ದೃಷ್ಟಿಯಲ್ಲಿ ಹೇಳಬೇಕೆಂದರೆ, ನಮ್ಮನ್ನು ನಾವು ಟೆಸ್ಟ್ ಮಾಡಿಕೊಳ್ಳಬೇಕಿದ್ದರೆ, ಇಂತಹ ಆಟಗಾರರ ಎದುರು ಆಡಬೇಕು. ಅವರ ಎದುರು ಬೌಲಿಂಗ್ ಮಾಡುವುದು ನಿಜಕ್ಕೂ ಸವಾಲಿನ ಸಂಗತಿ. ಅವರು ಈ ಸರಣಿ ಆಡದೇ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಂಡರ್‌ಸನ್ ಹೇಳಿದ್ದಾರೆ.

ಇನ್ನು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಹೊರತಾಗಿಯೂ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ರಾಂಚಿ ಟೆಸ್ಟ್ ಪಂದ್ಯವನ್ನು ಜಯಿಸುವ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಇಂಗ್ಲೆಂಡ್ ಹಾಗೂ ಭಾರತ ನಡುವಿನ 5ನೇ ಟೆಸ್ಟ್ ಪಂದ್ಯವು ಮಾರ್ಚ್ 07ರಂದು ಧರ್ಮಶಾಲಾದಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್, ಭಾರತ ಎದುರಿನ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದಾದ ಬಳಿಕ ಕಳೆದ ಮೂರು ಪಂದ್ಯಗಳ ಆರು ಇನಿಂಗ್ಸ್‌ಗಳಿಂದ 8 ವಿಕೆಟ್ ಕಬಳಿಸಿದ್ದಾರೆ. ಸದ್ಯ ಜೇಮ್ಸ್‌ ಆಂಡರ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 698 ವಿಕೆಟ್ ಕಬಳಿಸಿದ್ದು, ಇನ್ನು ಕೇವಲ 2 ವಿಕೆಟ್ ಕಬಳಿಸಿದರೆ 700 ವಿಕೆಟ್ ಕ್ಲಬ್ ಸೇರಲಿದ್ದಾರೆ.
 

click me!