ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ನಾಗಲ್ಯಾಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ. ನಾಯಕ ಮಯಾಂಕ್ ಅಗರ್‌ವಾಲ್ ಅವರ ಅಮೋಘ ಶತಕ ಮತ್ತು ಅನೀಶ್ ಕೆ.ವಿ. ಅವರ ಅರ್ಧಶತಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಅಹಮದಾಬಾದ್: ಈ ಬಾರಿ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಭಾನುವಾರ ನಡೆದ ಗುಂಪು ಹಂತದ ಕೊನೆ ಪಂದ್ಯದಲ್ಲಿ ರಾಜ್ಯ ತಂಡ ನಾಗಲ್ಯಾಂಡ್ ವಿರುದ್ದ 9 ವಿಕೆಟ್ ಗೆಲುವು ಸಾಧಿಸಿತು. 'ಸಿ' ಗುಂಪಿ ನಲ್ಲಿ 7 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 24 ಅಂಕ ಸಂಪಾದಿಸಿ ಅಗ್ರ ಸ್ಥಾನಿಯಾಯಿತು. 2ನೇ ಸ್ಥಾನಿಯಾದ ಪಂಜಾಬ್ (24 ಅಂಕ) ಕ್ವಾರ್ಟರ್ ತಲುಪಿತು.
ಮೊದಲು ಬ್ಯಾಟ್ ಮಾಡಿದ ನಾಗಲ್ಯಾಂಡ್ 48.3 ಓವರ್‌ಗಳಲ್ಲಿ 206 ರನ್‌ಗೆ ಆಲೌಟಾಯಿತು. ಚೇತನ್ ಬಿಸ್ 77, ನಾಯಕ ರೊಂಗನ್ ಜೊನಾಥನ್ 51 ರನ್ ಸಿಡಿಸಿದರು. ರಾಜ್ಯದ ಪರ ಸ್ಪಿನ್ನರ್ ಶ್ರೇಯಸ್ ಗೋಪಾಲ್ 4, ಅಭಿಲಾಶ್ ಶೆಟ್ಟಿ 2 ವಿಕೆಟ್ ಕಿತ್ತರು. ಸ್ಪರ್ಧಾತ್ಮಕ ಗುರಿಯನ್ನು ಕರ್ನಾಟಕ ತಂಡ 37.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಅಭೂತಪೂರ್ವ ಲಯದಲ್ಲಿರುವ ನಾಯಕ ಮಯಾಂಕ್ ಟೂರ್ನಿಯಲ್ಲಿ4ನೇ ಶತಕ ಸಿಡಿಸಿದರು. ಅವರು 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 116 ರನ್ ಸಿಡಿಸಿದರೆ, ಅನೀಶ್ ಕೆ.ವಿ. ಔಟಾಗದೆ 82 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
ಸ್ಕೋರ್:
ನಾಗಲ್ಯಾಂಡ್ 48.3 ಓವರಲ್ಲಿ 206/10 (ಚೇತನ್ ಔಟಾಗದೆ 77, ಜೊನಾಥನ್ 51, ಶ್ರೇಯಸ್ 4-24)
ಕರ್ನಾಟಕ 37.5 ಓವರಲ್ಲಿ 207/1 (ಮಯಂಕ್ ಔಟಾಗದೆ 116, ಅನೀಶ್ ಔಟಾಗದೆ 82, ಇಮ್ಮಿವಟಿ 1-38)
ಪಂದ್ಯಶ್ರೇಷ್ಠ: ಮಯಾಂಕ್ ಅಗರ್‌ವಾಲ್.
ಕ್ವಾರ್ಟರ್‌ನಲ್ಲಿ ಕರ್ನಾಟಕ - ಬರೋಡಾ ಫೈಟ್
ಕರ್ನಾಟಕ ತಂಡ ಜ.11ರಂದು ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಬರೋಡಾ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ವಡೋದರಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. 'ಇ' ಗುಂಪಿನಲ್ಲಿದ್ದ ಬರೋಡಾ ಆಡಿರುವ 6 ಪಂದ್ಯಗಳ ಪೈಕಿ 5ರಲ್ಲಿ ಗೆದ್ದು, 20 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ. ಜ.15, 16ಕ್ಕೆ ಸೆಮಿಫೈನಲ್, ಜ.18ಕ್ಕೆ ಫೈನಲ್ ನಡೆಯಲಿದೆ.
ಸಿಡ್ನಿ ಮೈದಾನದಲ್ಲಿ ಖಾಲಿ ಜೇಬು ತೋರಿಸಿ ಆಸೀಸ್ ಫ್ಯಾನ್ಸ್ ಬಾಯಿ ಮುಚ್ಚಿಸಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್
ವಿದರ್ಭ, ಗುಜರಾತ್ ಕ್ವಾರ್ಟ‌್ರಗೆ: ಮುಂಬೈ, ಉ.ಪ್ರದೇಶ, ಡೆಲ್ಲಿ ಹೊರಕ್ಕೆ
ಟೂರ್ನಿಯಲ್ಲಿ ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡಗಳಾದ ಕರ್ನಾಟಕ, ವಿದರ್ಭ, ಗುಜರಾತ್, ಮಹಾರಾಷ್ಟ್ರ, ಬರೋಡಾ, 2ನೇ ಸ್ಥಾನಿಯಾದ ಪಂಜಾಬ್ ನೇರವಾಗಿ ಕ್ವಾರ್ಟರ್ ಫೈನಲ್‌ಗೇರಿದವು. ಇತರ 4 ಗುಂಪುಗಳಲ್ಲಿ 2ನೇ ಸ್ಥಾನ ಪಡೆದ ಬೆಂಗಾಲ್, ಹರ್ಯಾಣ, ರಾಜಸ್ಥಾನ, ತಮಿಳುನಾಡು ಪ್ರಿ ಕ್ವಾರ್ಟರ್ ಪ್ರವೇಶಿಸಿದವು. ಆದರೆ ಮುಂಬೈ, ಉತ್ತರ ಪ್ರದೇಶ, ಜಾರ್ಖಂಡ್, ರೈಲ್ವೇಸ್, ಹೈದರಾಬಾದ್, ಸೌರಾಷ್ಟ್ರ, ಡೆಲ್ಲಿ ಮಧ್ಯಪ್ರದೇಶ ಸೇರಿ ಪ್ರಮುಖ ತಂಡಗಳು ಗುಂಪು ಹಂತದಲ್ಲೇ ಹೊರಬಿದ್ದವು.