
ಬೆಂಗಳೂರು: ಪೂರ್ವ ವಲಯ ತಂಡದ ಉಪನಾಯಕ, 15 ವರ್ಷದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುವಂತೆ ಮಾಡಿದ್ದಾನೆ. ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿಗೂ ಮುನ್ನ ವೈಭವ್ ಸೂರ್ಯವಂಶಿ, ಇದೀಗ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಇಲ್ಲಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕೇಂದ್ರ ವಲಯದ ಎದುರು ವೈಭವ್ ಸೂರ್ಯವಂಶಿ ಕೇವಲ 81 ಎಸೆತಗಳಲ್ಲಿ 92 ರನ್ ಚಚ್ಚಿದ್ದಾರೆ. ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
15 ವರ್ಷದ ವೈಭವ್ ಸೂರ್ಯವಂಶಿ, ಪೂರ್ವ ವಲಯದ ಪರ ಅರ್ಧಶತಕ ಸಿಡಿಸುವ ಮೂಲಕ 57 ವರ್ಷಗಳ ದೇಶಿ ಕ್ರಿಕೆಟ್ ರೆಕಾರ್ಡ್ ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ಮೂಲದ ಸ್ಪೋಟಕ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 42 ಎಸೆತಗಳನ್ನು ಎದುರಿಸಿ 3 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ ಆಕರ್ಷಕ ಅರ್ಧಶತಕ ಪೂರೈಸಿದರು. ಈ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಎನ್ನುವ 57 ವರ್ಷಗಳ ಹಿಂದಿನ ದಾಖಲೆ ಅಳಿಸಿ ಹಾಕಿದ್ದಾರೆ. ಈ ಮೊದಲು 1969 ರಲ್ಲಿ 16 ವರ್ಷ 23 ದಿನದ ಲಕ್ಷ್ಮಣ್ ಸಿಂಗ್, ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಆ ದಾಖಲೆ ಇದೀಗ ವೈಭವ್ ಸೂರ್ಯವಂಶಿ ಪಾಲಾಗಿದೆ.
ಹೀಗಿತ್ತು ನೋಡಿ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್:
Vaibhav Sooryavanshi, at 15 years & 175 days, became the youngest batter to score a Duleep Trophy half-century.
He achieved this milestone for East Zone against Central Zone in the Duleep Trophy 2026 semifinal.
Sooryavanshi smashed 92 off 81, 7 fours & 7 Sixes
His…— Cricketopia (@CricketopiaCom) August 31, 2026
ಕೇಂದ್ರ ವಲಯದ ಎದುರು ಅರ್ಧಶತಕದ ಬಳಿಕ ವೈಭವ್ ಸೂರ್ಯವಂಶಿ ಮತ್ತಷ್ಟು ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದರು. ಆದರೆ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸುವ ಅವಕಾಶವನ್ನು ವೈಭವ್ ಸೂರ್ಯವಂಶಿ ಕೈಚೆಲ್ಲಿದರು. ವೈಭವ್ ಶತಕದ ಹೊಸ್ತಿಲಲ್ಲಿದ್ದಾಗ ಹರ್ಷ್ ದುಬೆ ಬೌಲಿಂಗ್‌ನಲ್ಲಿ ಕೇಂದ್ರ ವಲಯ ತಂಡದ ವೇಗಿ ಅರ್ಶದ್ ಖಾನ್ ಅವರಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಕೇವಲ 81 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ, ತಲಾ 7 ಬೌಂಡರಿ ಹಾಗೂ 7 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 92 ರನ್ ಸಿಡಿಸಿ ಕೇವಲ 8 ರನ್ ಅಂತರದಲ್ಲಿ ಶತಕ ವಂಚಿತರಾದರು.
ಇದರ ಹೊರತಾಗಿಯೂ 15 ವರ್ಷದ ವೈಭವ್ ಮೊದಲ ವಿಕೆಟ್‌ಗೆ ಪಶ್ಚಿಮ ಬಂಗಾಳ ಮೂಲದ ಆರಂಭಿಕ ಬ್ಯಾಟರ್ ಅಭಿಮನ್ಯು ಈಶ್ವರನ್ ಜತೆ ಸೇರಿ ಬರೋಬ್ಬರಿ 161 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಸದ್ಯ ಪೂರ್ವ ವಲಯ ತಂಡವು 37 ಓವರ್ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 199 ರನ್ ಬಾರಿಸಿದ್ದು, ಅಭಿಮನ್ಯು ಈಶ್ವರನ್ 68 ಹಾಗೂ ಸುದಿಪ್ ಕುಮಾರ್ ಘರ್ಮಿ 21 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಒಂದು ವೇಳೆ ವೈಭವ್ ಸೂರ್ಯವಂಶಿ, ಇಂದು ಶತಕ ಸಿಡಿಸಿದ್ದರೇ, 15 ವರ್ಷ 175 ದಿನದ ವೈಭವ್ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಶತಕ ಸಿಡಿಸಿದ ಅತಿಕಿರಿಯ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ 93 ರನ್ ಸಿಡಿಸಿದ್ದೇ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ. ಇದೀಗ 10ನೇ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರುವ ವೈಭವ್ ಬಾರಿಸಿದ ಎರಡನೇ ಅರ್ಧಶತಕ ಇದಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.