ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸೋಲಿನ ಶಾಕ್..!

Suvarna News   | Asianet News
Published : Feb 21, 2021, 09:18 AM IST
ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸೋಲಿನ ಶಾಕ್..!

ಸಾರಾಂಶ

ವಿಜಯ್‌ ಹಜಾರೆ ಟೂರ್ನಿಯಲ್ಲಿ ಹಾಲಿಚಾಂಪಿಯನ್‌ ಕರ್ನಾಟಕ ತಂಡವು ಮೊದಲ ಪಂದ್ಯದಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಉತ್ತರ ಪ್ರದೇಶ ವಿರುದ್ದ ರಾಜ್ಯ ತಂಡ ವಿಜೆಡಿ ನಿಯಮದನ್ವಯ 9 ರನ್‌ಗಳ ಸೋಲು ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಫೆ.21): ಹಾಲಿ ಚಾಂಪಿಯನ್‌ ಕರ್ನಾಟಕ, ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ ಸೋಲಿನ ಆರಂಭ ಪಡೆದಿದೆ. ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ, ವಿಜೆಡಿ ನಿಯಮದನ್ವಯ 9 ರನ್‌ಗಳ ಸೋಲು ಅನುಭವಿಸಿತು.

ಕೆಲ ತಿಂಗಳ ಹಿಂದೆ ನಡೆದಿದ್ದ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲೂ ಸೋಲು ಕಂಡಿದ್ದ ಕರ್ನಾಟಕ, ಟೂರ್ನಿಯಲ್ಲಿ ನಾಕೌಟ್‌ ಹಂತಕ್ಕೇರಲು ಪರದಾಡಿತ್ತು. ಇದೀಗ ಈ ಟೂರ್ನಿಯಲ್ಲೂ ತಂಡದ ಕ್ವಾರ್ಟರ್‌ ಹಾದಿ ಕಠಿಣಗೊಳ್ಳುವ ಲಕ್ಷಣಗಳು ಗೋಚರಿಸಿವೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 50 ಓವರಲ್ಲಿ 8 ವಿಕೆಟ್‌ ನಷ್ಟಕ್ಕೆ 246 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಸುಲಭ ಗುರಿ ಬೆನ್ನತ್ತಿದ ಉತ್ತರ ಪ್ರದೇಶ, ನಿಧಾನ ಆರಂಭ ಪಡೆದರೂ ವಿಕೆಟ್‌ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. 45.4 ಓವರ್‌ಗಳಲ್ಲಿ ಉತ್ತರ ಪ್ರದೇಶ 4 ವಿಕೆಟ್‌ಗೆ 215 ರನ್‌ ಗಳಿಸಿದ್ದಾಗ ಮಳೆ ಸುರಿಯಿತು. ಈ ವೇಳೆ ವಿಜೆಡಿ ನಿಯಮವನ್ನು ಅಳವಡಿಸಿದಾಗ ಆತಿಥೇಯ ತಂಡಕ್ಕಿಂತ ಉತ್ತರ ಪ್ರದೇಶ 9 ರನ್‌ ಮುಂದಿತ್ತು.

ಐಪಿಎಲ್‌ಗೂ ಮುನ್ನವೇ ಎದುರಾಳಿ ತಂಡಗಳಿಗೆ ಖಡಕ್‌ ವಾರ್ನಿಂಗ್‌ ಕೊಟ್ಟ ಇಶನ್‌ ಕಿಶನ್‌..!

ಉತ್ತರ ಪ್ರದೇಶದ ಆರಂಭಿಕರಾದ ಅಭಿಷೇಕ್‌ ಗೋಸ್ವಾಮಿ (54) ಹಾಗೂ ಕರಣ್‌ ಶರ್ಮಾ ಮೊದಲ ವಿಕೆಟ್‌ಗೆ 102 ರನ್‌ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ನಂತರ ಕೇವಲ 9 ರನ್‌ ಅಂತರದಲ್ಲಿ ಉತ್ತರ ಪ್ರದೇಶ 3 ವಿಕೆಟ್‌ ಕಳೆದುಕೊಂಡಿತು. ಈ ಹಂತದಲ್ಲಿ ಆಕರ್ಷಕ ಆಟವಾಡಿದ ರಿಂಕು ಸಿಂಗ್‌ (ಅಜೇಯ 62) ತಂಡಕ್ಕೆ ಆಸರೆಯಾದರು. ಉಪೇಂದ್ರ ಯಾದವ್‌ (ಅಜೇಯ 26) ರಿಂಕುಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿ ಕರ್ನಾಟಕದ ಗೆಲುವಿನ ಆಸೆಗೆ ತಣ್ಣೀರೆರೆಚಿತು.

ಆಮೆಗತಿಯ ಆಟ: ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಕರ್ನಾಟಕ ಬಹಳ ನಿಧಾನವಾಗಿ ರನ್‌ ಗಳಿಸಿತು. ನೂತನ ನಾಯಕ ಆರ್‌.ಸಮರ್ಥ್ (03) ಬೇಗನೆ ಔಟಾದರು. ದೇವದತ್‌ ಪಡಿಕ್ಕಲ್‌ (84 ಎಸೆತಗಳಲ್ಲಿ 52 ರನ್‌) ಹಾಗೂ ಸಿದ್ಧಾರ್ಥ್ ಕೆ.ವಿ (71 ಎಸೆತಗಳಲ್ಲಿ 38 ರನ್‌) ಕ್ರೀಸ್‌ನಲ್ಲಿ ಕೆಲಕಾಲ ನೆಲೆಯೂರಿದರೂ ರನ್‌ರೇಟ್‌ ಹೆಚ್ಚಿಸಲಿಲ್ಲ. ಕರುಣ್‌ ನಾಯರ್‌ (33) ಲಯಕ್ಕೆ ಮರಳುವ ಪ್ರಯತ್ನ ನಡೆಸಿದರೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಲಿಲ್ಲ. 32 ಓವರ್‌ ಮುಕ್ತಾಯದ ವೇಳೆಗೂ ಕರ್ನಾಟಕದ ಮೊತ್ತ 120 ರನ್‌ ದಾಟಿರಲಿಲ್ಲ.

ಸಿಡಿದ ಅನಿರುದ್ಧ: 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಅನಿರುದ್ಧ ಜೋಶಿ 48 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 68 ರನ್‌ ಸಿಡಿಸಿ ತಂಡ 200 ರನ್‌ ದಾಟಲು ನೆರವಾದರು. ಕೊನೆಯಲ್ಲಿ ಸುಚಿನ್‌ (12) ಹಾಗೂ ಮಿಥುನ್‌ (17) ಸ್ಫೋಟಕ ಆಟದ ಸಹಾಯದಿಂದ ಕರ್ನಾಟಕ ಗೌರವ ಮೊತ್ತ ದಾಖಲಿಸಿತು.

ನಾಳೆ ಬಿಹಾರ ಎದುರಾಳಿ: ಕರ್ನಾಟಕಕ್ಕೆ ಸೋಮವಾರ ‘ಸಿ’ ಗುಂಪಿನ 2ನೇ ಪಂದ್ಯದಲ್ಲಿ ಬಿಹಾರ ತಂಡ ಎದುರಾಗಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಪಂದ್ಯ ಬೆಂಗಳೂರಿನ ಹೊರವಲಯದಲ್ಲಿರುವ ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ.

ಸ್ಕೋರ್‌: 

ಕರ್ನಾಟಕ 50 ಓವರಲ್ಲಿ 246/8 (ಅನಿರುದ್ಧ 68, ದೇವದತ್‌ 52, ಶಿವಂ 3-40), 

ಉತ್ತರ ಪ್ರದೇಶ 45.2 ಓವರಲ್ಲಿ 215/4 (ರಿಂಕು 62*, ಅಭಿಷೇಕ್‌ 54, ಕರುಣ್‌ 1-20)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!
One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್