
ಇಂದೋರ್(ಫೆ.20): ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶನ್ ಕಿಶನ್ ವಿಜಯ್ ಹಜಾರೆ ಟೂರ್ನಿಯನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಜಾರ್ಖಂಡ್ ತಂಡದ ನಾಯಕರಾಗಿರುವ ಇಶನ್ ಕಿಶನ್ ಮಧ್ಯ ಪ್ರದೇಶ ವಿರುದ್ದ ಸಿಡಿಲಬ್ಬದ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ವಿಜಯ್ ಹಜಾರೆ ಟ್ರೋಫಿಯಲ್ಲಿ ಇಶನ್ ಕಿಶನ್ ಕೇವಲ 94 ಎಸೆತಗಳಲ್ಲಿ 19 ಬೌಂಡರಿ ಹಾಗೂ 11 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ ಸಿಡಿಲಬ್ಬರದ 173 ರನ್ ಬಾರಿಸಿ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಇಶನ್ ಕಿಶನ್ ಎದುರಾಳಿ ತಂಡಗಳಿಗೆ ಈಗಿನಿಂದಲೇ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಟಾಸ್ ಗೆದ್ದ ಮಧ್ಯಪ್ರದೇಶ ತಂಡವು ಫೀಲ್ಡಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲಿಳಿದ ಜಾರ್ಖಂಡ ತಂಡವು 10 ರನ್ ಕಲೆಹಾಕುವಷ್ಟರಲ್ಲಿ ಉತ್ಕರ್ಷ್ ಸಿಂಗ್ ವಿಕೆಟ್ ಕಳೆದುಕೊಂಡಿತು. ಆ ಬಳಿಕ ನಾಯಕ ಇಶನ್ ಕಿಶನ್ ಅಕ್ಷರಶಃ ಅಬ್ಬರಿಸಿದರು. ಪರಿಣಾಮ 40 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಕಿಶನ್, 74 ಎಸೆತಗಳನ್ನು ಎದುರಿಸಿ ಶತಕ ಪೂರ್ತಿಗೊಳಿಸಿದರು. ನೂರರಿಂದ ನೂರೈವತ್ತು ರನ್ ಬಾರಿಸಲು ಕೇವಲ 12 ಎಸೆತಗಳನ್ನು ಮಾತ್ರ ತೆಗೆದುಕೊಂಡರು. ಕೊನೆಯ 71 ರನ್ ಬಾರಿಸಲು ಇಶನ್ ಕಿಶನ್ ಕೇವಲ 20 ಎಸೆತಗಳನ್ನು ಮಾತ್ರ ತೆಗೆದುಕೊಂಡರು. ಒಂದು ಹಂತದಲ್ಲಿ ಇಶನ್ ಕಿಶನ್ ಅನಾಯಾಸವಾಗಿ ದ್ವಿಶತಕ ಬಾರಿಸಬಹುದು ಎಂದು ಲೆಕ್ಕಾಚಾರ ಹಾಕಲಾರಂಭಿಸಿದ್ದರು. ಆದರೆ ಪಂದ್ಯದ 28ನೇ ಓವರ್‌ನಲ್ಲಿ ಗೌರವ್ ಯಾದವ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
ವಿಜಯ್ ಹಜಾರೆ ಟ್ರೋಫಿ: ಹಾಲಿ ಚಾಂಪಿಯನ್ ಕರ್ನಾಟಕಕ್ಕಿಂದು ಯುಪಿ ಸವಾಲು
ಅಂತಿಮವಾಗಿ ಜಾರ್ಖಂಡ ತಂಡವು 9 ವಿಕೆಟ್ ಕಳೆದುಕೊಂಡು ಬರೋಬ್ಬರಿ 422 ರನ್ ಕಲೆಹಾಕಿತು. ಇಶನ್ ಕಿಶನ್ ಶತಕ ಮಾತ್ರವಲ್ಲದೇ ವಿರಾಟ್ ಸಿಂಗ್, ಅಂಕುಲ್ ರಾಯ್ ಹಾಗೂ ಸನಿತ್ ಕುಮಾರ್ ಆಕರ್ಷಕ ಅರ್ಧಶತಕ ಜಾರ್ಖಂಡ್ ತಂಡವು ಈ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
ಬೆಟ್ಟದಂತಹ ಗುರಿ ಬೆನ್ನತ್ತಿದ ಮಧ್ಯ ಪ್ರದೇಶ ತಂಡವು 18.4 ಓವರ್‌ಗಳಲ್ಲಿ ಕೇವಲ 98 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಇದರೊಂದಿಗೆ ಜಾರ್ಖಂಡ ತಂಡವು ದಾಖಲೆಯ 324 ರನ್‌ಗಳ ಅಂತರದ ಜಯ ದಾಖಲಿಸಿದ್ದು ಮಾತ್ರವಲ್ಲದೇ 4 ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.