
ಬಾರ್ಬಡೋಸ್: ಕ್ರಿಕೆಟ್ ಇತಿಹಾಸದಲ್ಲಿ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್‌ನ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ನಡುವಿನ ಘರ್ಷಣೆ ಅಥವಾ ತಪ್ಪು ನಿರ್ಧಾರಗಳ ಸರಣಿ ಯಾವಾಗಲೂ ಚರ್ಚೆಯ ವಿಷಯ. ಇದೀಗ ಬರೋಬ್ಬರಿ ಎರಡು ದಶಕಗಳ ನಂತರ, ಸ್ಟೀವ್ ಬಕ್ನರ್ ತಾವು ಮಾಡಿದ ಒಂದು ಐತಿಹಾಸಿಕ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. 2003-04ರ ಭಾರತದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸಚಿನ್‌ಗೆ ತಾವು ನೀಡಿದ ಔಟ್ ತಪ್ಪು ಎಂದು ಬಕ್ನರ್ ಈಗ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.
ಅದು 2003-04ರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ ಟೆಸ್ಟ್ ಸರಣಿ. ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಕ್ರೀಸ್‌ಗೆ ಬಂದಾಗ ಇಡೀ ಮೈದಾನ ಅವರ ಬ್ಯಾಟಿಂಗ್ ನೋಡಲು ಕಾತರವಾಗಿತ್ತು. ಆದರೆ ಆಸ್ಟ್ರೇಲಿಯಾದ ವೇಗಿ ಜೇಸನ್ ಗಿಲ್ಲೆಸ್ಪಿ ಎಸೆದ ಚೆಂಡು ಆಫ್ ಸ್ಟಂಪ್‌ನಿಂದ ಸಾಕಷ್ಟು ಹೊರಗೆ ಹೋಗುತ್ತಿತ್ತು. ಸಚಿನ್ ಅತ್ಯಂತ ಚಾಣಾಕ್ಷತನದಿಂದ ಬ್ಯಾಟ್ ಎತ್ತಿ ಚೆಂಡನ್ನು ಬಿಟ್ಟಿದ್ದರು (Padding up). ಆದರೆ ಚೆಂಡು ಅವರ ಪ್ಯಾಡ್‌ಗೆ ಬಡಿದಿತ್ತು. ಆಸ್ಟ್ರೇಲಿಯಾ ಆಟಗಾರರು ಮನವಿ ಮಾಡಿದರೂ ಅದು ಔಟ್ ಅಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಆದರೆ, ಸ್ಟೀವ್ ಬಕ್ನರ್ ಬೆರಳೆತ್ತಿ ಸಚಿನ್ ಅವರನ್ನು ಔಟ್ ಎಂದು ಘೋಷಿಸಿದಾಗ ಇಡೀ ಕ್ರೀಡಾ ಜಗತ್ತೇ ದಂಗಾಗಿತ್ತು.
ಬಕ್ನರ್ ನಿರ್ಧಾರದಿಂದ ಸ್ವತಃ ಸಚಿನ್ ನಂಬಲಾರದಂತೆ ಅಂಪೈರ್ ಮುಖ ನೋಡಿದ್ದರು. ಕೇವಲ 3 ರನ್ ಗಳಿಸಿ ಪೆವಿಲಿಯನ್‌ಗೆ ಮರಳುವಾಗ ಅವರ ಮುಖದಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ಆ ಸಮಯದಲ್ಲಿ ಲೈವ್ ಕಾಮೆಂಟರಿ ಮಾಡುತ್ತಿದ್ದ ದಿಗ್ಗಜ ಟೋನಿ ಗ್ರೆಗ್, 'ಇದೊಂದು ಆಘಾತಕಾರಿ ತೀರ್ಪು. ಚೆಂಡು ವಿಕೆಟ್‌ಗಿಂತ ಸಾಕಷ್ಟು ಎತ್ತರದಲ್ಲಿ ಹೋಗುತ್ತಿತ್ತು' ಎಂದು ಬಕ್ನರ್ ವಿರುದ್ಧ ಕಿಡಿಕಾರಿದ್ದರು. ಅಂದು ಡಿಆರ್‌ಎಸ್ (DRS) ತಂತ್ರಜ್ಞಾನ ಇಲ್ಲದ ಕಾರಣ ಸಚಿನ್ ಅನಿವಾರ್ಯವಾಗಿ ಮೈದಾನ ಬಿಡಬೇಕಾಯಿತು.
ಇತ್ತೀಚೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಅಂಪೈರ್‌ಗಳ ಅಸೋಸಿಯೇಷನ್‌ಗೆ ನೀಡಿದ ಸಂದರ್ಶನದಲ್ಲಿ ಬಕ್ನರ್ ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 'ಸಚಿನ್‌ಗೆ ಔಟ್ ಕೊಟ್ಟಿದ್ದು ತಪ್ಪಾಗಿತ್ತು ಎಂಬ ಕಹಿಸತ್ಯ ನನಗೆ ತಿಳಿದಿದೆ. ಇಂದಿಗೂ ಜನರು ನನ್ನನ್ನು ಆ ನಿರ್ಧಾರದ ಬಗ್ಗೆ ಪ್ರಶ್ನಿಸುತ್ತಾರೆ. ಸಚಿನ್ ನಿಜವಾಗಿಯೂ ಔಟ್ ಆಗಿರಲಿಲ್ಲ. ಮನುಷ್ಯ ಸಹಜವಾಗಿ ತಪ್ಪುಗಳು ಆಗುತ್ತವೆ, ಅಂದು ನನ್ನಿಂದಲೂ ಅಂತಹದ್ದೇ ಒಂದು ದೊಡ್ಡ ಪ್ರಮಾದವಾಗಿತ್ತು' ಎಂದು ಬಕ್ನರ್ ಹೇಳಿದ್ದಾರೆ.
ಸ್ಟೀವ್ ಬಕ್ನರ್ ಸಚಿನ್ ಅವರಿಗೆ ಕೇವಲ ಈ ಪಂದ್ಯದಲ್ಲಿ ಮಾತ್ರವಲ್ಲದೆ, 2005ರಲ್ಲಿ ಪಾಕಿಸ್ತಾನದ ವಿರುದ್ಧದ ಈಡನ್ ಗಾರ್ಡನ್ ಟೆಸ್ಟ್‌ನಲ್ಲೂ ತಪ್ಪು ತೀರ್ಪು ನೀಡಿದ್ದರು. ಈ ಬಗ್ಗೆ ಒಮ್ಮೆ ಸಚಿನ್ ಅವರನ್ನು ಕೇಳಿದಾಗ, ಅವರು ನಗುತ್ತಲೇ, 'ನಾನು ಬ್ಯಾಟಿಂಗ್ ಮಾಡುವಾಗ ಬಕ್ನರ್ ಅವರಿಗೆ ಬಾಕ್ಸಿಂಗ್ ಗ್ಲೌಸ್ ಕೊಡಬೇಕು. ಆಗ ಅವರಿಗೆ ಬೆರಳು ಎತ್ತಲು ಸಾಧ್ಯವಾಗುವುದಿಲ್ಲ, ನಾನು ಅನ್ಯಾಯದಿಂದ ಪಾರಾಗಬಹುದು' ಎಂದು ತಮಾಷೆ ಮಾಡಿದ್ದರು.
ಬಕ್ನರ್ ಅವರ ಈ ಈಗಿನ ತಪ್ಪೊಪ್ಪಿಗೆಯಿಂದ ಸಚಿನ್ ಅವರ ವಿಕೆಟ್ ಮರಳಿ ಬರುವುದಿಲ್ಲವಾದರೂ, ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಅಂದು ನಡೆದಿದ್ದು ಅನ್ಯಾಯ ಎಂಬುದು ಈಗ ಅಧಿಕೃತವಾಗಿ ದೃಢಪಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.