ಅಂಡರ್ 19 ವಿಶ್ವಕಪ್: 5ನೇ ವಿಶ್ವಕಪ್ ಗೆಲ್ಲಲು ಯಂಗೀಸ್ತಾನ್ ರೆಡಿ

Kannadaprabha News   | Asianet News
Published : Feb 09, 2020, 10:42 AM IST
ಅಂಡರ್ 19 ವಿಶ್ವಕಪ್: 5ನೇ ವಿಶ್ವಕಪ್ ಗೆಲ್ಲಲು ಯಂಗೀಸ್ತಾನ್ ರೆಡಿ

ಸಾರಾಂಶ

ಬಹುನಿರೀಕ್ಷಿತ ಅಂಡರ್ 19 ವಿಶ್ವಕಪ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಾಂಗ್ಲಾವನ್ನು ಮಣಿಸಿ ಭಾರತ 5ನೇ ಬಾರಿಗೆ ಕಪ್ ಎತ್ತಿಹಿಡಿಯುವ ತವಕದಲ್ಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಪೋಚೆಫ್‌ಸ್ಟ್ರೋಮ್‌(ಫೆ.09): ಹಾಲಿ ಚಾಂಪಿಯನ್‌ ಭಾರತ, ದಾಖಲೆಯ 5ನೇ ಬಾರಿಗೆ ಐಸಿಸಿ ಅಂಡರ್‌-19 ವಿಶ್ವಕಪ್‌ ಗೆಲ್ಲಲು ಸಜ್ಜಾಗಿದ್ದು ಭಾನುವಾರ ಇಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಾಂಗ್ಲಾದೇಶ ಮೊದಲ ಬಾರಿಗೆ ಫೈನಲ್‌ಗೇರಿದ್ದು, ಏಷ್ಯಾದ ಎರಡು ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ.

ಪಾಕ್‌ಗೆ ಮಿಸುಕಾಡಲು ಬಿಡದ ಹುಡುಗರು, ಅಂಡರ್-19 ಫೈನಲ್‌ಗೆ ಭಾರತ

2018ರಲ್ಲಿ ವಿಶ್ವಕಪ್‌ ಗೆದ್ದ ತಂಡದಲ್ಲಿದ್ದ ಪೃಥ್ವಿ ಶಾ, ಶುಭ್‌ಮನ್‌ ಗಿಲ್‌ ಈಗಾಗಲೇ ಹಿರಿಯರ ತಂಡದಲ್ಲಿ ಆಡುತ್ತಿದ್ದು, ಈ ವರ್ಷವೂ ಕೆಲ ವಿಶೇಷ ಪ್ರತಿಭೆಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಯಶಸ್ವಿ ಜೈಸ್ವಾಲ್‌, ಲೆಗ್‌ ಸ್ಪಿನ್ನರ್‌ ರವಿ ಬಿಶ್ನಾಯ್‌, ವೇಗಿ ಕಾರ್ತಿಕ್‌ ತ್ಯಾಗಿ ಈ ಆವೃತ್ತಿಯ ತಾರೆಗಳಾಗಿ ಗುರುತಿಸಿಕೊಂಡಿದ್ದಾರೆ. ಟೂರ್ನಿಯುದ್ದಕ್ಕೂ ಆಕರ್ಷಕ ಪ್ರದರ್ಶನ ತೋರಿರುವ ಈ ಆಟಗಾರರು, ಭಾನುವಾರ ಮತ್ತೊಮ್ಮೆ ಮಿಂಚು ಹರಿಸಿದರೆ ವಿಶ್ವಕಪ್‌ ಟ್ರೋಫಿ ಭಾರತದ ಕೈಸೇರಲಿದೆ.

ಅಂಡರ್‌-19 ವಿಶ್ವಕಪ್: ಭಾರತ vs ಬಾಂಗ್ಲಾ ಫೈನಲ್‌

ಸೆಮಿಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು 10 ವಿಕೆಟ್‌ಗಳಿಂದ ಸೋಲಿಸಿದ್ದ ಭಾರತ, 7ನೇ ಬಾರಿಗೆ ಫೈನಲ್‌ನಲ್ಲಿ ಆಡಲಿದೆ. 2000ರಲ್ಲಿ ಮೊದಲ ಬಾರಿಗೆ ಚಾಂಪಿಯನ್‌ ಆಗಿದ್ದ ಭಾರತ, ಆ ನಂತರ 2008, 2012, 2018ರಲ್ಲಿ ಪ್ರಶಸ್ತಿ ಎತ್ತಿಹಿಡಿದಿತ್ತು.

2018ರ ಆವೃತ್ತಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡಿದ್ದ ಬಾಂಗ್ಲಾದೇಶ, ಈ ಬಾರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಸೆಮೀಸ್‌ನಲ್ಲಿ ನ್ಯೂಜಿಲೆಂಡ್‌ ತಂಡವನ್ನು ಬಗ್ಗುಬಡಿದ ತಂಡ, ಭಾರತಕ್ಕೂ ಆಘಾತ ನೀಡಲು ಎದುರು ನೋಡುತ್ತಿದೆ. ಬಾಂಗ್ಲಾ ವಿರುದ್ಧ ಭಾರತ ಉತ್ತಮ ದಾಖಲೆ ಹೊಂದಿದೆ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿ ಹಾಗೂ ಏಷ್ಯಾಕಪ್‌ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಗೆಲುವು ಪಡೆದಿತ್ತು.

ಟೂರ್ನಿಯುದ್ದಕ್ಕೂ ಲಯ ಕಾಪಾಡಿಕೊಂಡಿರುವ ಭಾರತ, ಎಲ್ಲಾ 5 ಪಂದ್ಯಗಳಲ್ಲಿ ಎದುರಾಳಿಯನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾಗಿದೆ. ಭಾರತ ಸತತ 5 ಗೆಲುವುಗಳನ್ನು ಕಂಡಿದ್ದರೆ, ಬಾಂಗ್ಲಾದೇಶ ಸಹ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಯಶಸ್ವಿ, ದಿವ್ಯಾನ್ಶ್, ತಿಲಕ್‌, ಧೃವ್‌, ಪ್ರಿಯಂ ಗರ್ಗ್‌ (ನಾಯಕ), ಸಿದ್ಧೇಶ್‌ ವೀರ್‌, ಅಥರ್ವ, ರವಿ ಬಿಶ್ನಾಯ್‌, ಸುಶಾಂತ್‌, ಕಾರ್ತಿಕ್‌ ತ್ಯಾಗಿ, ಆಕಾಶ್‌ ಸಿಂಗ್‌.

ಬಾಂಗ್ಲಾದೇಶ: ಪರ್ವೇಜ್‌, ತನ್ಜಿದ್‌, ಮಹಮುದುಲ್‌ ಹಸನ್‌, ತೌಹಿದ್‌, ಶಹದತ್‌, ಅಕ್ಬರ್‌ (ನಾಯಕ), ರಕಿಬುಲ್‌, ಶೊರಿಫುಲ್‌, ತನ್ಜಿಮ್‌ ಹಸನ್‌, ಹಸನ್‌ ಮುರಾದ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಭಾರತದ ಫೈನಲ್‌ ಹಾದಿ

ವಿರುದ್ಧ ಫಲಿತಾಂಶ

ಶ್ರೀಲಂಕಾ 90 ರನ್‌ ಜಯ

ಜಪಾನ್‌ 10 ವಿಕೆಟ್‌ ಜಯ

ನ್ಯೂಜಿಲೆಂಡ್‌ 44 ರನ್‌ ಜಯ

ಆಸ್ಪ್ರೇಲಿಯಾ 74 ರನ್‌ ಜಯ

(ಕ್ವಾರ್ಟರ್‌ ಫೈನಲ್‌)

ಪಾಕಿಸ್ತಾನ 10 ವಿಕೆಟ್‌ ಜಯ

(ಸೆಮಿಫೈನಲ್‌)

ಬಾಂಗ್ಲಾದ ಫೈನಲ್‌ ಹಾದಿ

ವಿರುದ್ಧ ಫಲಿತಾಂಶ

ಜಿಂಬಾಬ್ವೆ 9 ವಿಕೆಟ್‌ ಜಯ

ಸ್ಕಾಟ್ಲೆಂಡ್‌ 7 ವಿಕೆಟ್‌ ಜಯ

ಪಾಕಿಸ್ತಾನ ಪಂದ್ಯ ರದ್ದು

ದ.ಆಫ್ರಿಕಾ 104 ರನ್‌ ಜಯ

(ಕ್ವಾರ್ಟರ್‌ಫೈನಲ್‌)

ನ್ಯೂಜಿಲೆಂಡ್‌ 6 ವಿಕೆಟ್‌ ಜಯ

(ಸೆಮಿಫೈನಲ್‌)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಡ್ಡು ಬಿಟ್ಟುಕೊಟ್ಟು ಮರಿ ಜಡೇಜಾಗೆ 14.2 ಕೋಟಿ ಖರ್ಚು ಮಾಡಿದ ಸಿಎಸ್‌ಕೆ! ಯಾರು ಈ ಪ್ರಶಾಂತ್ ವೀರ್?
ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!