SA vs NZ: ಮೊದಲ ಟೆಸ್ಟ್‌ನಲ್ಲಿ ಹರಿಣಗಳ ಬೇಟೆಯಾಡಿದ ಕಿವೀಸ್

Suvarna News   | Asianet News
Published : Feb 19, 2022, 06:04 PM IST
SA vs NZ: ಮೊದಲ ಟೆಸ್ಟ್‌ನಲ್ಲಿ ಹರಿಣಗಳ ಬೇಟೆಯಾಡಿದ ಕಿವೀಸ್

ಸಾರಾಂಶ

* ನ್ಯೂಜಿಲೆಂಡ್ ಎದುರು ಹೀನಾಯ ಸೋಲು ಕಂಡ ದಕ್ಷಿಣ ಆಫ್ರಿಕಾ * ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಇನಿಂಗ್ಸ್ ಹಾಗೂ 276 ರನ್‌ಗಳ ಅಂತರದ ಜಯ * ನ್ಯೂಜಿಲೆಂಡ್ ಪರ ಗರಿಷ್ಠ ಟೆಸ್ಟ್ ವಿಕೆಟ್‌ ಕಬಳಿಸಿದ ವೇಗಿ ಎನ್ನುವ ದಾಖಲೆ ಟಿಮ್ ಸೌಥಿ ಪಾಲು

ಕ್ರೈಸ್ಟ್‌ಚರ್ಚ್‌(ಫೆ.19): ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ (South Africa Cricket Team) ಮೊದಲ ಟೆಸ್ಟ್ ಪಂದ್ಯದಲ್ಲೇ ಹೀನಾಯ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ನ್ಯೂಜಿಲೆಂಡ್ ವಿರುದ್ದ ಎರಡನೇ ಇನಿಂಗ್ಸ್‌ನಲ್ಲಿ ಹರಿಣಗಳ ಪಡೆ ಕೇವಲ 111 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಮೊದಲ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಇನಿಂಗ್ಸ್‌ ಹಾಗೂ 276 ರನ್‌ಗಳ ಭಾರೀ ಅಂತರದ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಕೇವಲ 35 ದಿನಗಳ ಹಿಂದಷ್ಟೇ ತವರಿನಲ್ಲಿ ಬಲಿಷ್ಠ ಟೀಂ ಇಂಡಿಯಾ (Team India) ಎದುರು 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಹರಿಣಗಳ ಪಡೆಗೆ ನ್ಯೂಜಿಲೆಂಡ್ ತಂಡವು ಶಾಕ್ ನೀಡಿದೆ. ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಲಂಚ್‌ ಬ್ರೇಕ್‌ಗೂ ಮೊದಲೇ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಆಲೌಟ್ ಮಾಡುವ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ಇದುವರೆಗೂ ಟೆಸ್ಟ್ ಸರಣಿಯನ್ನು ಸೋಲದ ದಕ್ಷಿಣ ಆಫ್ರಿಕಾ ತಂಡದ ದಾಖಲೆ ಇದೀಗ ಅಪಾಯಕ್ಕೆ ಸಿಲುಕಿದೆ. ಅಂದಹಾಗೆ ದಕ್ಷಿಣ ಆಫ್ರಿಕಾ ತಂಡವು ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟೆಸ್ಟ್ ಸೋಲಿನ ಕಹಿಯುಂಡಿದೆ.

2ನೇ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 34 ರನ್‌ ಗಳಿಸಿದ್ದ ದಕ್ಷಿಣ ಅಫ್ರಿಕಾ ತಂಡಕ್ಕೆ ತಿರುಗೇಟು ನೀಡಲು ನ್ಯೂಜಿಲೆಂಡ್ ಬೌಲರ್‌ಗಳು ಅವಕಾಶವನ್ನು ನೀಡಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳ ಪೈಕಿ ಇಬ್ಬರು ಆರಂಭಿಕರು ಶೂನ್ಯ ಸುತ್ತಿದರೆ, ಮತ್ತಿಬ್ಬರು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ತಂಡದ ಪರ ತೆಂಬಾ ಬವುಮಾ 41 ರನ್‌ ಬಾರಿಸುವ ಮೂಲಕ ಕಿವೀಸ್‌ ಬೌಲರ್‌ಗಳೆದುರು ಕೊಂಚ ಪ್ರತಿರೋಧ ತೋರಿದರು. ಇನ್ನುಳಿದಂತೆ ವಿಕೆಟ್ ಕೀಪರ್ ಬ್ಯಾಟರ್ ಕೈಲ್ ವೆರಿಯನ್ನೇ(30), ಮಾರ್ಕೊ ಯಾನ್ಸೆನ್(10) ಹಾಗೂ ಓಲ್ಟನ್ ಸ್ಟರ್ಮನ್‌(11) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ.

Indi vs Sri Lanka Series : ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕ, ಬುಮ್ರಾ ಉಪನಾಯಕ!

ನ್ಯೂಜಿಲೆಂಡ್ ಪರ ಗರಿಷ್ಠ ವಿಕೆಟ್‌ ಕಬಳಿಸಿದ ವೇಗಿ ಟಿಮ್‌ ಸೌಥಿ: ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟಿಮ್‌ ಸೌಥಿ (Tim Southee) ಕೇವಲ 35 ರನ್‌ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಸುಲಭ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರ ಜತೆಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ಪರ ಗರಿಷ್ಠ ವಿಕೆಟ್‌ ಕಬಳಿಸಿದ ವೇಗದ ಬೌಲರ್ ಎನ್ನುವ ಕೀರ್ತಿಗೂ ಟಿಮ್ ಸೌಥಿ ಪಾತ್ರರಾದರು. ಈ ಮೊದಲು ಕಿವೀಸ್ ದಿಗ್ಗಜ ವೇಗಿ ಸರ್ ರಿಚರ್ಡ್‌ ಹ್ಯಾಡ್ಲಿ 201 ಟೆಸ್ಟ್ ವಿಕೆಟ್ ಪಡೆದಿದ್ದರು. ಇದೀಗ ಟಿಮ್ ಸೌಥಿ 202 ಟೆಸ್ಟ್ ಬಲಿ ಪಡೆಯುವ ಮೂಲಕ ಹೊಸ ಮೈಲಿಗಲ್ಲನ್ನು ನೆಟ್ಟಿದ್ದಾರೆ.

ಹೇಗಿತ್ತು ಮೊದಲ ಟೆಸ್ಟ್ ಪಂದ್ಯ..?
ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲೇಥಮ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಮ್ಯಾಟ್‌ ಹೆನ್ರಿ ಕೇವಲ 23 ರನ್ ನೀಡಿ 7 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು 95 ರನ್‌ಗಳಿಗೆ ಆಲೌಟ್ ಮಾಡಿದರು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ತಂಡವು ಹೆನ್ರಿ ನಿಕೋಲ್ಸ್‌ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 482 ರನ್‌ ಬಾರಿಸಿ ಆಲೌಟ್ ಆಯಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಕೇವಲ 111 ರನ್‌ಗಳಿಗೆ ಆಲೌಟ್ ಆಗುವ ಮೂಲಕ ನಿರಾಸೆ ಅನುಭವಿಸಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?