ಟೆಸ್ಟ್ ವಿಶ್ವಕಪ್ ಫೈನಲ್‌ ಆಡಲು ಕೆ.ಎಲ್ ರಾಹುಲ್ ಫಿಟ್?

By Suvarna NewsFirst Published May 25, 2021, 11:30 AM IST
Highlights

* ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್. ರಾಹುಲ್

* ಭಾರತ-ನ್ಯೂಜಿಲೆಂಡ್ ನಡುವಿನ ಟೆಸ್ಟ್‌ ವಿಶ್ವಕಪ್ ಫೈನಲ್‌ನಲ್ಲಿ ರಾಹುಲ್ ಸ್ಥಾನ ಪಡೆಯುವ ಸಾಧ್ಯತೆ

* ಟೆಸ್ಟ್‌ ವಿಶ್ವಕಪ್ ಫೈನಲ್ ಜೂನ್ 18ರಿಂದ ಆರಂಭ

ನವದೆಹಲಿ(ಮೇ.25): ಉದರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಾರಾ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಚೇತರಿಸಿಕೊಂಡಿದ್ದು, ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಆಡಲು ಇಂಗ್ಲೆಂಡ್‌ಗೆ ತೆರಳುವ ನಿರೀಕ್ಷೆ ಇದೆ.

ಜೂನ್ 2ರಂದು ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದ್ದು, ರಾಹುಲ್‌ ಕೂಡ ಸಹ ಆಟಗಾರರ ಜತೆಗೇ ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವು ಸೌಥಾಂಪ್ಟನ್‌ನಲ್ಲಿ ಜೂನ್ 18ರಿಂದ ಆರಂಭವಾಗಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳು ಕಾದಾಡಲಿವೆ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುತ್ತಿದ್ದ ಕೆ.ಎಲ್‌. ರಾಹುಲ್‌ಗೆ ನೋವಿನ ಸಮಸ್ಯೆಯಿಂದ ಟೂರ್ನಿ ಮಧ್ಯದಲ್ಲಿ ತೊರೆದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಸರಿಸುಮಾರು ಒಂದು ತಿಂಗಳು ಬಾಕಿ ಇರುವುದರಿಂದ ಟೆಸ್ಟ್ ವಿಶ್ವಕಪ್‌ನಲ್ಲಿ ರಾಹುಲ್ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 

ದಿಢೀರ್ ಆರೋಗ್ಯ ಸಮಸ್ಯೆ, ಆಸ್ಪತ್ರೆ ದಾಖಲಾದ ಪಂಜಾಬ್ ನಾಯಕ ಕೆಎಲ್ ರಾಹುಲ್!

29 ವರ್ಷದ ಕೆ.ಎಲ್. ರಾಹುಲ್ 2019ರ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ದ ಟೆಸ್ಟ್‌ ಸರಣಿ ಆಡಿದ ಬಳಿಕ ಒಂದೇ ಒಂದು ಟೆಸ್ಟ್ ಪಂದ್ಯವನ್ನಾಡಿಲ್ಲ. ಕೆಲವು ತಿಂಗಳ ಹಿಂದಷ್ಟೇ ಆಸ್ಟ್ರೇಲಿಯಾ ಪ್ರವಾಸಕ್ಕೆ ರಾಹುಲ್‌ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದರಾದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಇದುವರೆಗೂ ರಾಹುಲ್ ಭಾರತ ಪರ 36 ಟೆಸ್ಟ್ ಪಂದ್ಯಗಳನ್ನಾಡಿ 5 ಶತಕ, 11 ಅರ್ಧಶತಕ ಸಹಿತ 2,006 ರನ್ ಬಾರಿಸಿದ್ದಾರೆ.
 

click me!