
ಲಂಡನ್(ಮೇ.24): ಕೋವಿಡ್ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಇದು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಇಂಗ್ಲೆಂಡ್ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯಾವಕಾಶ ಸಿಕ್ಕಂತೆ ಆಗಿದೆ ಎಂದು ನ್ಯೂಜಿಲೆಂಡ್ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಅಭಿಪ್ರಾಯ ಪಟ್ಟಿದ್ದಾರೆ.
ಮೇ.30ರವರೆಗೆ ಜರುಗಬೇಕಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ತನ್ನ ವಕ್ರದೃಷ್ಟಿ ಬೀರಿತ್ತು. ಬಯೋ ಬಬಲ್‌ನೊಳಗೆ ಐಪಿಎಲ್ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆಯೇ ಬಿಸಿಸಿಐ ಮೇ.04ರಂದು ಅನಿರ್ದಿಷ್ಟಾವಧಿಗೆ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಮುಂದೂಡಿದೆ. ಇನ್ನು ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವಚಾಂಪಿಯನ್‌ಶಿಪ್ ಫೈನಲ್ ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ಆರಂಭವಾಗಲಿದ್ದು, ಪ್ರಶಸ್ತಿಗಾಗಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.
ಭಾರತದ ಮಟ್ಟಿಗೆ ಐಪಿಎಲ್ ಅನಿವಾರ್ಯ ಕಾರಣದಿಂದಾಗಿ ಬೇಗನೇ ಮುಕ್ತಾಯವಾಗಿರುವುದರಿಂದ ವಿರಾಟ್ ಕೊಹ್ಲಿ ಪಡೆಗೆ ಹೆಚ್ಚು ಅನುಕೂಲಕರ ಸಂದರ್ಭ ಬಂದೊದಗುವಂತೆ ಮಾಡಿದೆ. ಒಂದು ವೇಳೆ ಐಪಿಎಲ್ ಎಲ್ಲವೂ ಅಂದುಕೊಂಡಂತೆ ಸಾಗಿದ್ದರೆ, ತಂಡವಾಗಿ ಅಭ್ಯಾಸ ನಡೆಸಲು ಭಾರತಕ್ಕೆ ಹೆಚ್ಚಿನ ಸಮಯಾವಕಾಶ ಸಿಗುತ್ತಿರಲಿಲ್ಲ. ಆದರೆ ಈಗ ಒಳ್ಳೆಯ ಅವಕಾಶ ಸಿಕ್ಕಿದೆ. ಬೌಲರ್‌ಗಳು ಸಹಾ ಹೆಚ್ಚು ಅಭ್ಯಾಸ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಟೆಸ್ಟ್ ವಿಶ್ವಕಪ್ ಫೈನಲ್: 4,000 ಪ್ರೇಕ್ಷಕರಿಗೆ ಸ್ಟೇಡಿಯಂ ಪ್ರವೇಶಿಸಲು ಅವಕಾಶ
ಇದೇ ವೇಳೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್ ತಂಡವು ಜೂನ್ 02ರಿಂದ ಇಂಗ್ಲೆಂಡ್ ವಿರುದ್ದ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಇದು ಕಿವೀಸ್ ಪಾಳಯಕ್ಕೆ ಅನುಕೂಲವಾಗಲಿದೆ ಎಂದು ನ್ಯೂಜಿಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಒಪ್ಪಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.