ಇಂಗ್ಲೆಂಡ್ ಎದುರು ಟೀಂ ಇಂಡಿಯಾ ವೈಟ್‌ವಾಷ್ ಬೆನ್ನಲ್ಲೇ ಬಿಕ್ಕಿ ಬಿಕ್ಕಿ ಅತ್ತ ವೈಭವ್ ಸೂರ್ಯವಂಶಿ! ವಿಡಿಯೋ ವೈರಲ್

Published : Jul 12, 2026, 05:20 PM IST
Vaibhav Sooryavanshi

ಸಾರಾಂಶ

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಸೋತ ನಂತರ, 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಡಗೌಟ್‌ನಲ್ಲಿ ಅತ್ತಿರುವ ವಿಡಿಯೋ ವೈರಲ್ ಆಗಿದೆ. ಸತತ ಮೂರು ಪಂದ್ಯಗಳಲ್ಲಿ ವಿಫಲರಾದ ಕಾರಣ ಅವರನ್ನು ಐದನೇ ಪಂದ್ಯದಿಂದ ಕೈಬಿಡಲಾಗಿತ್ತು, ಆದರೆ ಅವರ ಬದಲಿಗೆ ಬಂದ ಸಂಜು ಸ್ಯಾಮ್ಸನ್ ಕೂಡ ತಂಡವನ್ನು ಗೆಲ್ಲಿಸಲು ವಿಫಲರಾದರು.

ಬೆಂಗಳೂರು: ಭಾರತ ತಂಡವು ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಮುಖಭಂಗ ಅನುಭವಿಸಿದೆ. ಇದರ ಬೆನ್ನಲ್ಲೇ 15 ವರ್ಷದ ಟೀಂ ಇಂಡಿಯಾ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಒಂದು ಭಾವುಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ಎದುರಿನ ಐದನೇ ಟಿ20 ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದ ವೈಭವ್ ಸೂರ್ಯವಂಶಿ, ಟೀಂ ಇಂಡಿಯಾ ಸೋಲುತ್ತಿದ್ದಂತೆಯೇ ಡಗೌಟ್‌ನಲ್ಲಿ ಕುಳಿತು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಐರ್ಲೆಂಡ್ ಎದುರಿನ ಸರಣಿಯಲ್ಲೇ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದರು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಇನ್ನು ಇಂಗ್ಲೆಂಡ್ ಎದುರಿನ ಎರಡು, ಮೂರು ಹಾಗೂ ನಾಲ್ಕನೇ ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆದರೆ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಮೂರು ಪಂದ್ಯಗಳಲ್ಲೂ ದೊಡ್ಡ ಮೊತ್ತ ಕಲೆಹಾಕಲು ವಿಫಲವಾದರು. ಮೂರು ಪಂದ್ಯಗಳಿಂದ ವೈಭವ್ ಕೇವಲ 42 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಇಂಗ್ಲೆಂಡ್ ಎದುರಿನ ಐದನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನು ಕೈಬಿಟ್ಟು, ಮತ್ತೆ ಸಂಜು ಸ್ಯಾಮ್ಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಯಿತು. ಸಂಜು ಸ್ಯಾಮ್ಸನ್ ತಂಡ ಕೂಡಿಕೊಂಡರೂ, ಟೀಂ ಇಂಡಿಯಾ ಅದೃಷ್ಟ ಮಾತ್ರ ಬದಲಾಗಲಿಲ್ಲ.

ಕೇವಲ 15 ವರ್ಷ 99 ದಿನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಭಾರತದ ಅತಿಕಿರಿಯ ಕ್ರಿಕೆಟಿಗ ಎನಿಸಿಕೊಂಡಿರುವ ವೈಭವ್ ಸೂರ್ಯವಂಶಿ, ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆದರೆ ವೈಭವ್ ಸೂರ್ಯವಂಶಿ ಮೇಲೆ ಇಡಲಾಗಿದ್ದ ನಿರೀಕ್ಷೆ ಈಡೇರಿಸಲು ಅವರಿಗೆ ಸಾಧ್ಯವಾಗಲಿಲ್ಲ. ವೈಭವ್ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14,13 ಹಾಗೂ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಹೀಗಿತ್ತು ನೋಡಿ ವೈಭವ್ ಸೂರ್ಯವಂಶಿ ಅಳುತ್ತಿರುವ ವಿಡಿಯೋ:

 

ಇನ್ನು ಇಂಗ್ಲೆಂಡ್ ಎದುರಿನ ಐದನೇ ಟಿ20 ಪಂದ್ಯ ಮುಕ್ತಾಯದ ಬಳಿಕ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅಗ್ರ ಕ್ರಮಾಂಕದಲ್ಲಿ ಬಲಗೈ ಹಾಗೂ ಎಡಗೈ ಕಾಂಬಿನೇಷನ್‌ಗಾಗಿ ತಾವು ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ.

ವೈಭವ್ ಸೂರ್ಯವಂಶಿ ಬದಲಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಸಂಜು ಸ್ಯಾಮ್ಸನ್ ಸ್ಪೋಟಕ ಆರಂಭ ಒದಗಿಸಿಕೊಟ್ಟರಾದರೂ, ದೊಡ್ಡ ಇನ್ನಿಂಗ್ಸ್ ಕಟ್ಟಲು ಕೇರಳ ಮೂಲದ ಕ್ರಿಕೆಟಿಗ ವಿಫಲರಾದರು. ಸಂಜು ಸ್ಯಾಮ್ಸನ್ ಕೇವಲ 14 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 27 ರನ್ ಸಿಡಿಸಿ ಸ್ಯಾಮ್ ಕರ್ರನ್‌ಗೆ ವಿಕೆಟ್ ಒಪ್ಪಿಸಿದರು.

ಕೊನೆಯ ಟಿ20 ಪಂದ್ಯವನ್ನು ಸೋತ ಭಾರತ:

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಜೋಸ್ ಬಟ್ಲರ್ ಬಾರಿಸಿದ ಸ್ಪೋಟಕ ಶತಕ(131) ಹಾಗೂ ನಾಯಕ ಹ್ಯಾರಿ ಬ್ರೂಕ್ ಬಾರಿಸಿದ ಅಜೇಯ 95 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 257 ರನ್‌ಗಳನ್ನು ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಸ್ಪೋಟಕ ಅರ್ಧಶತಕ ಸಿಡಿಸಿದರಾದರೂ ಉಳಿದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದರಿಂದ ಟೀಂ ಇಂಡಿಯಾ ಕೇವಲ 201 ರನ್ ಗಳಿಸಿ 56 ರನ್ ಅಂತರದ ಸೋಲು ಅನುಭವಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾ ಟಿ20 ಸೋಲಿಗೆ ಆಟಗಾರರಲ್ಲ ಐಪಿಎಲ್ ಕಾರಣ, ಮಾಜಿ ಕ್ರಿಕೆಟಿನ ಮಾತಿಗೆ ಬೆಚ್ಚಿ ಬಿದ್ದ ಬಿಸಿಸಿಐ
ಟೀಂ ಇಂಡಿಯಾವನ್ನು ಹೀನಾಯವಾಗಿ ಸೋಲಿಸಿ ಹಾಲಿ ಚಾಂಪಿಯನ್ನರಿಗೆ ಕ್ರಿಕೆಟ್ ಪಾಠ ಮಾಡಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್!