
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯನ್ನು ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ 4-0 ಅಂತರದಲ್ಲಿ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಟಿ ಶರ್ಟ್ ಧರಿಸಿ ಪರೋಕ್ಷವಾಗಿ ಬಿಸಿಸಿಐ ಟ್ರೋಲ್ ಮಾಡಿದ್ದಾರೆ.
ಸೂರ್ಯಕುಮಾರ್ ಯಾದವ್ ಅವರನ್ನು ಟೀಂ ಇಂಡಿಯಾ ಟಿ20 ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ಭಾರತ ತಂಡವು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಹಿಂದೆಂದೂ ಕಂಡು ಕೇಳರಿಯದ ದಯನೀಯ ಪರಿಸ್ಥಿತಿಗೆ ಬಂದು ತಲುಪಿದೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಅವರ ಟಿ-ಶರ್ಟ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಸೂರ್ಯಕುಮಾರ್ ಯಾದವ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮಗುವನ್ನು ಕೈಯಲ್ಲಿ ಹಿಡಿದು ಆಟವಾಡಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಡ್ಯಾಡೀಸ್ ಡ್ಯೂಟಿ ಎನ್ನುವ ಕ್ಯಾಪ್ಷನ್ ಕೂಡಾ ನೀಡಿದ್ದರು. ಇದೆಲ್ಲದರ ನಡುವೆ ಸೂರ್ಯಕುಮಾರ್ ಯಾದವ್ ತಮ್ಮ ಟಿ ಶರ್ಟ್ ಮೇಲೆ ಬರೆದಿರುವ ಸಾಲುಗಳು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಷ್ಟಕ್ಕೂ ಸೂರ್ಯಕುಮಾರ್ ಯಾದವ್ ಧರಿಸಿದ್ದ ಟಿ ಶರ್ಟ್‌ನಲ್ಲಿ ಅಂತದ್ದೇನಿದೆ ಎನ್ನುವುದನ್ನು ನೋಡುವುದಾದರೇ, ಕ್ಯಾಪ್ಟನ್ ಮತ್ತು ಲೀಡರ್ ಎಂದು ಎರಡು ಪದಗಳನ್ನು ಬರೆಯಲಾಗಿದೆ. ಈ ಪೈಕಿ ಕ್ಯಾಪ್ಟನ್ ಪದದ ಮಧ್ಯದಲ್ಲಿ ಒಂದು ಗೀಟು ಹಾಕಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಬಿಸಿಸಿಐ ಆಯ್ಕೆ ಸಮಿತಿಯನ್ನು ಹಾಗೂ ಗೌತಮ್ ಗಂಭೀರ್ ಅವರನ್ನು ಈ ರೀತಿ ಟ್ರೋಲ್ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.
ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ಭಾರತ ಟಿ20 ನಾಯಕರಾದ ಬಳಿಕ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದರು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಜಯಿಸುವಲ್ಲೂ ಯಶಸ್ವಿಯಾಗಿತ್ತು. ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಭಾರತ ತಂಡದ ನಾಯಕರಾದ ಸೂರ್ಯ ತಂಡವನ್ನು ನಾಯಕನಾಗಿ ಅದ್ಭುತವಾಗಿ ಮುನ್ನಡೆಸಿದ್ದರು. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಆಡಿದ ಎಲ್ಲಾ 16 ಸರಣಿಗಳಲ್ಲೂ ಗೆಲುವು ದಾಖಲಿಸಿತ್ತು. ಹೀಗಿದ್ದೂ 2026ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆದರೂ, ಯಾವುದೇ ಕಾರಣ ನೀಡದೇ ಸೂರ್ಯ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಯಿಂದ ಕೈಬಿಡಲಾಗಿತ್ತು.
ಸೂರ್ಯಕುಮಾರ್ ಯಾದವ್ ನಾಯಕತ್ವದಿಂದ ಕೆಳಗಿಳಿಸಿ ಇದೀಗ ಶ್ರೇಯಸ್ ಅಯ್ಯರ್‌ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇದೀಗ ಸೂರ್ಯ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಐರ್ಲೆಂಡ್ ಎದುರು 2-0 ಅಂತರದಲ್ಲಿ ಹಾಗೂ ಇಂಗ್ಲೆಂಡ್ ಎದುರು 4-0 ಅಂತರದಲ್ಲಿ ಟೀಂ ಇಂಡಿಯಾ ವೈಟ್‌ವಾಷ್ ಅನುಭವಿಸಿದೆ. ಇದರ ಬೆನ್ನಲ್ಲೇ ಸೂರ್ಯ ತಾವು ಕ್ಯಾಪ್ಟನ್ ಅಲ್ಲ ಲೀಡರ್ ಎನ್ನುವ ಟಿ ಶರ್ಟ್, ಬಿಸಿಸಿಐ ಆಯ್ಕೆ ಸಮಿತಿ ಹಾಗೂ ಕೋಚ್ ಗೌತಮ್ ಗಂಭೀರ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.