
ಲೀಡ್ಸ್ (ಜೂ.24): ಭಾರತ ಟೆಸ್ಟ್ ತಂಡ ಆಂಡರ್‌ಸನ್-ತೆಂಡುಲ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅವಮಾನಕರ ಐದು ವಿಕೆಟ್ ಸೋಲು ಕಂಡಿದೆ. ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿದ 371 ರನ್‌ಗಳ ಗುರಿಯನ್ನು ಸಲೀಸಾಗಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 5 ವಿಕೆಟ್‌ಗೆ 373 ರನ್ ಬಾರಿಸಿ ಸರಣಿಯಲ್ಲಿ 1-0 ಮುನ್ನಡೆ ಕಂಡಿತು.
148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ತಂಡದ ಐದು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿಯೂ ಸೋಲು ಕಂಡ ಮೊದಲ ತಂಡ ಎನ್ನುವ ಕುಖ್ಯಾತಿಗೆ ಭಾರತ ಪಾತ್ರವಾಯಿತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್, ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ (2 ಬಾರಿ) ಶತಕ ಬಾರಿಸಿದರೂ ಭಾರತ ಸೋಲು ಕಂಡಿತು. ಅದಲ್ಲದೆ, ಪಂದ್ಯದಲ್ಲಿ ಭಾರತದ ಬೌಲರ್‌ವೊಬ್ಬ 5 ವಿಕೆಟ್ ಸಾಧನೆ ಮಾಡಿಯೂ, ಮೊದಲ ಇನ್ನಿಂಗ್ಸ್‌ನಲ್ಲಿ ಲೀಡ್ ಪಡೆದುಕೊಂಡಿದ್ದರೂ ಸೋಲು ಕಂಡಿರುವುದು ದುರಂತ ಎನಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 471 ರನ್‌ಗಳಿಗೆ ಪ್ರತಿಯಾಗಿ ಇಂಗ್ಲೆಂಡ್ 465 ರನ್‌ಗೆ ಆಲೌಟ್ ಆಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಭಾರತ 364 ರನ್‌ಗೆ ಆಲೌಟ್ ಆಗಿದ್ದರಿಂದ ಗೆಲುವಿಗೆ ಇಂಗ್ಲೆಂಡ್ ತಂಡಕ್ಕೆ 371 ರನ್ ಅಗತ್ಯವಿತ್ತು.
ವಿಕೆಟ್ ನಷ್ಟವಿಲ್ಲದೆ 21 ರನ್‌ಗಳಿಂದ ಅಂತಿಮ ದಿನದ ಆಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಬೆನ್ ಡಕೆಟ್ ಅದ್ಭುತ ಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. 170 ಎಸೆತ ಎದುರಿಸಿದ ಡಕೆಟ್ 21 ಬೌಂಡರಿ, 1 ಸಿಕ್ಸರ್‌ನೊಂದಿಗೆ 149 ರನ್ ಬಾರಿಸಿದರು. ಮೊದಲ ವಿಕೆಟ್‌ಗೆ ಡಕೆಟ್ ಜಾಗೂ ಜಾಕ್ ಕ್ರಾವ್ಲಿ 188 ರನ್ ಜೊತೆಯಾಟವಾಡಿದ್ದು ತಂಡಕ್ಕೆ ಗೆಲುವಿನ ವಿಶ್ವಾಸ ನೀಡಿತು. 126 ಎಸೆತ ಎದುರಿಸಿದ ಕ್ರಾವ್ಲಿ 7 ಬೌಂಡರಿಯೊಂದಿಗೆ 65 ರನ್ ಬಾರಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಆ ವೇಳೆಗಾಗಲೇ ಇಂಗ್ಲೆಂಡ್ ತಂಡದಲ್ಲಿ ಗೆಲುವಿನ ವಿಶ್ವಾಸ ಮೂಡಿದ್ದರಿಂದ ನಂತರ ಬಂದ ಬ್ಯಾಟ್ಸ್‌ಮನ್‌ಗಳು ವಿಶ್ವಾಸದಿಂದ ಇನ್ನಿಂಗ್ಸ್ ಕಟ್ಟಿದರು.
ಒಲ್ಲಿ ಪೋಪ್ (8) ಹಾಗೂ ಹ್ಯಾರಿ ಬ್ರೂಕ್ ಬೆನ್ನುಬೆನ್ನಿಗೆ ವಿಕೆಟ್ ನೀಡಿದರೂ, ಜೋ ರೂಟ್ (53*ರನ್, 84 ಎಸೆತ, 6 ಬೌಂಡರಿ) ನಾಯಕ ಬೆನ್ ಸ್ಟೋಕ್ಸ್ (33 ರನ್, 51 ಎಸೆತ, 4 ಬೌಂಡರಿ) ಹಾಗೂ ಜೇಮಿ ಸ್ಮಿತ್ (44 ರನ್, 55 ಎಸೆತ, 4 ಬೌಂಡರಿ, 2 ಸಿಕ್ಸರ್) ಸಲೀಸಾಗಿ ಇನ್ನಿಂಗ್ಸ್ ಕಟ್ಟಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟೆಸ್ಟ್ ಪಂದ್ಯವೊಂದರ ಅಂತಿಮ ದಿನ (5ನೇ ದಿನ) ಗರಿಷ್ಠ ರನ್ ಬಾರಿಸಿದ 2ನೇ ದೃಷ್ಟಾಂತ ಇದಾಗಿದೆ. ಇಂಗ್ಲೆಂಡ್ 350 ರನ್ ಬಾರಿಸಿತು. ಇದಕ್ಕೂ ಮುನ್ನ 1948ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 404 ರನ್ ಬಾರಿಸಿದ್ದು ದಾಖಲೆ ಎನಿಸಿದೆ. ಅದಲ್ಲದೆ, ಟೆಸ್ಟ್ ಪಂದ್ಯವೊಂದರ ಎಲ್ಲಾ ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ 350 ಹಾಗೂ ಅದಕ್ಕಿಂತ ಹೆಚ್ಚಿನ ರನ್ ಬಾರಿಸಿದ ಕೇವಲ 3ನೇ ಪಂದ್ಯ ಇದಾಗಿದೆ.
ಭಾರತಕ್ಕೆ ಪಂದ್ಯ ಗೆಲ್ಲುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ, ಸಿಕ್ಕ ಅವಕಾಶಗಳನ್ನೆಲ್ಲಾ ತನ್ನ ಕೈಯಾರೆ ಹಾಳು ಮಾಡಿಕೊಂಡಿತು. ಎರಡೂ ಇನ್ನಿಂಗ್ಸ್‌ನಲ್ಲಿ ಭಾರತದ ಕೆಳಕ್ರಮಾಂಕದ ಬ್ಯಾಟಿಂಗ್ ದಯನೀಯ ವೈಫಲ್ಯ ಕಂಡರೆ, ಫೀಲ್ಡಿಂಗ್‌ನಲ್ಲಿ ಬಿಟ್ಟ ಕ್ಯಾಚ್‌ಗಳಿಗೆ ಲೆಕ್ಕವೇ ಇದ್ದಿರಲಿಲ್ಲ. ಅದರೊಂದಿಗೆ ಎರಡೂ ಇನ್ನಿಂಗ್ಸ್‌ನಲ್ಲಿ ತಂಡದ ನಿಸ್ತೇಜ ಬೌಲಿಂಗ್ ಪ್ರದರ್ಶನ ತಂಡದ ಹಿನ್ನಡೆಗೆ ಕಾರಣವಾಯಿತು.
ಐದು ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯ ಜುಲೈ 2ರ ಬುಧವಾರದಿಂದ ಬರ್ಮಿಂಗ್‌ಹ್ಯಾಂನ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.