
ಲೀಡ್ಸ್: 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಗೆಲುವಿನೊಂದಿಗೆ ಆರಂಭಿಸಬೇಕು ಎನ್ನುವ ಭಾರತದ ನಿರೀಕ್ಷೆ ಈಡೇರಬಹುದು. ಇಂಗ್ಲೆಂಡ್ ವಿರುದ್ಧ ಇಲ್ಲಿನ ಹೆಡಿಂಗ್ಲಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 2ನೇ ಇನ್ನಿಂಗ್ಸ್ ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿರುವ ಭಾರತ, 364 ರನ್ ಕಲೆಹಾಕಿ ಆತಿಥೇಯ ತಂಡದ ಗೆಲುವಿಗೆ 371 ರನ್ ಗುರಿ ನೀಡಿದೆ.
ಸಾಮಾನ್ಯವಾಗಿ ಪಂದ್ಯದಲ್ಲಿ ಒಂದು ದಿನ ಬಾಕಿ ಇರುವಾಗ ಈ ಮೊತ್ತ ದೊಡ್ಡದೆನಿಸಬಹುದು. ಆದರೆ, ಇಂಗ್ಲೆಂಡ್ ತನ್ನ 'ಬಾಜ್ ಬಾಲ್' ಶೈಲಿಯ ಆಟದಿಂದ ಯಾವುದೇ ದೊಡ್ಡ ಗುರಿಯನ್ನೂ ತಲುಪಬಹುದು ಎನ್ನುವ ಭೀತಿ ಇದ್ದೇ ಇದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, 4ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದ್ದು, ಕೊನೆ ದಿನ ಗೆಲ್ಲಲು 350 ರನ್ ಕಲೆಹಾಕಬೇಕಿದೆ. ಹೀಗಾಗಿ, ಕೊನೆ ದಿನದ ಕೈಮ್ಯಾಕ್ಸ್ ಕುತೂಹಲ ಮೂಡಿಸಿದೆ.
3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 90 ರನ್ ಗಳಿಸಿದ್ದ ಭಾರತ, ಸೋಮವಾರ ಆ ಮೊತ್ತಕ್ಕೆ ಕೇವಲ 2 ರನ್ ಸೇರಿಸಿದ್ದಾಗ ನಾಯಕ ಶುಭಮನ್ ಗಿಲ್ (8)ರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಭಾರತ ಕುಸಿತ ಕಂಡಿದ್ದರೆ, ಪಂದ್ಯ ಇಂಗ್ಲೆಂಡ್ ಪರ ವಾಲುತಿತ್ತು. ಆದರೆ, ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ಶತಕಗಳು ಭಾರತಕ್ಕೆ ನೆರವಾದರು. ಈ ಜೋಡಿ 4ನೇ ವಿಕೆಟ್‌ಗೆ 195 ರನ್ ಸೇರಿಸಿತು. ಪಂತ್ 118 ರನ್ ಗಳಿಸಿ ಔಟಾದರೆ, ರಾಹುಲ್ 137 ರನ್ ಕಲೆಹಾಕಿದರು. ಇವರಿಬ್ಬರ ವಿಕೆಟ್ ಪತನಗೊಂಡ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. 333ಕ್ಕೆ4 ವಿಕೆಟ್‌ನಿಂದ 364 ರನ್ ಗೆ ಅಂದರೆ 31 ರನ್‌ಗೆ ಕೊನೆ 6 ವಿಕೆಟ್ ಕಳೆದುಕೊಂಡಿತು. ಕರುಣ್ ನಾಯರ್ 20, ಜಡೇಜಾ 25 ರನ್ ಗಳಿಸಿದರು.
ಇಂಗ್ಲೆಂಡ್ ತಂಡದ ಪರ ವೇಗಿಗಳಾದ ಬ್ರೈಡನ್ ಕಾರ್ಸ್ ಹಾಗೂ ಜೋಶ್ ಟಂಗ್ ತಲಾ ಮೂರು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ತಜ್ಞ ಸ್ಪಿನ್ನರ್ ಶೋಯೆಬ್ ಬಷೀರ್ ಎರಡು ವಿಕೆಟ್ ಪಡೆದರೆ, ನಾಯಕ ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಸ್ಕೋರ್: ಭಾರತ 417 ಹಾಗೂ 364 (ಕೆ ಎಲ್ ರಾಹುಲ್ 137, ರಿಷಭ್ ಪಂತ್ 118, ಜೋಶ್ ಟಂಗ್ 3-72),
ಇಂಗ್ಲೆಂಡ್ 465 ಹಾಗೂ 21/0 (ಜಾಕ್ ಕ್ರಾಲಿ 12* ಹಾಗೂ ಬೆನ್ ಡಕೆಟ್ 4)
ಅತಿಹೆಚ್ಚು ಕ್ಯಾಚ್: ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ಜೋ ರೂಟ್
ಇಂಗ್ಲೆಂಡ್‌ನ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಕ್ಯಾಚ್ ಹಿಡಿದ ಆಟಗಾರರ ಪಟ್ಟಿಯಲ್ಲಿ ಜಂಟಿ ಮೊದಲ ಸ್ಥಾನಕ್ಕೇರಿದ್ದಾರೆ. 210 ಕ್ಯಾಚ್‌ಗಳೊಂದಿಗೆ ರಾಹುಲ್ ದ್ರಾವಿಡ್ ಹೆಸರಿನಲ್ಲಿರುವ ವಿಶ್ವದಾಖಲೆಯನ್ನು ಜೋ ರೂಟ್ ಸರಿಗಟ್ಟಿದ್ದಾರೆ. ಶಾರ್ದೂಲ್ ಠಾಕೂರ್ ಕ್ಯಾಚ್ ಹಿಡಿಯುವ ಮೂಲಕ ಜೋ ರೂಟ್ ಈ ಸಾಧನೆಗೈದರು. ಜೋ ರೂಟ್ ಮುಂದಿನ ಟೆಸ್ಟ್ ಪಂದ್ಯದಲ್ಲಿ ಇನ್ನೊಂದು ಕ್ಯಾಚ್ ಹಿಡಿದರೆ ವಿಶ್ವದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳಲಿದ್ದಾರೆ.
01 ಸೋಲು: ಭಾರತ ತಂಡ ಟೆಸ್ಟ್ ನಲ್ಲಿ ಎದುರಾಳಿಗೆ 350ಕ್ಕೂ ಹೆಚ್ಚಿನ ರನ್ ಗುರಿಯನ್ನು ನಿಗದಿಪಡಿಸಿದಾಗ ಕೇವಲ 1 ಬಾರಿ ಸೋತಿದೆ. 59 ಪಂದ್ಯಗಳಲ್ಲಿ 350ಕ್ಕೂ ಹೆಚ್ಚಿನ ಗುರಿ ನೀಡಿದ್ದು, 42 ಗೆಲುವು, 1 ಸೋಲು, 16 ಡ್ರಾಗಳನ್ನು ಕಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.