ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇಂದು ಮೊಹಮ್ಮದ್ ಶಮಿ ವಾಪಸ್: ಟೀಂ ಇಂಡಿಯಾ ಪಾಲಿಗೂ ಗುಡ್ ನ್ಯೂಸ್!

By Naveen Kodase  |  First Published Nov 13, 2024, 10:12 AM IST

2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದ ಮೊಹಮ್ಮದ್ ಶಮಿ ಇಂದು, ರಣಜಿ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯುವ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ


ಕೋಲ್ಕತಾ: ಹಿಮ್ಮಡಿ ಗಾಯದಿಂದಾಗಿ 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತದ ತಾರಾ ವೇಗಿ ಮೊಹಮ್ಮದ್ ಶಮಿ, ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಸಂಪೂರ್ಣ ಚೇತರಿಕೆ ಕಂಡಿದ್ದು  ಬುಧವಾರದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ. 

ದೇಸಿ ಕ್ರಿಕೆಟ್‌ನಲ್ಲಿ ಬಂಗಾಳ ಪರ ಆಡುವ ಶಮಿ, ಬುಧವಾರದಿಂದ ಇಂದೋರ್ ನಲ್ಲಿ ಆರಂಭಗೊಳ್ಳಲಿರುವ ಮಧ್ಯಪ್ರದೇಶ ವಿರುದ್ದದ ರಣಜಿ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಶಮಿ ಪಾಲಿಗೆ ಇದು ಫಿಟೈಸ್ ಸಾಬೀತುಪಡಿಸಲು ಸಿಕ್ಕಿರುವ ಅವಕಾಶವಾಗಿದ್ದು, ಅವರ ಪ್ರದರ್ಶನದ ಮೇಲೆ ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡದ ಆಡಳಿತವೂ ಸೂಕ್ಷ್ಮ ಕಣ್ಣು ಇಡಲಿದೆ.

Latest Videos

ಮೊಹಮ್ಮದ್ ಶಮಿ ಇಲ್ವಲ್ಲ, ಭಾರತ 1-3 ಅಂತರದಲ್ಲಿ ಟೆಸ್ಟ್ ಸರಣಿ ಸೋಲುತ್ತದೆ: ರಿಕಿ ಪಾಂಟಿಂಗ್ ಭವಿಷ್ಯ

ಮೊಹಮದ್ ಶಮಿ ತಾವು ಸಂಪೂರ್ಣ ಫಿಟ್ ಇರುವುದಾಗಿ ಸಾಬೀತುಪಡಿಸಿದರೆ, ಅವರನ್ನು ಭಾರತ ತಂಡ ಆಸ್ಟ್ರೇಲಿಯಾಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ತಂಡದಲ್ಲಿ ಸದ್ಯ ಜಸ್‌ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಹೊರತುಪಡಿಸಿ ಬೇರ್ಯಾವ ಹಿರಿಯ ವೇಗಿಯೂ ಇಲ್ಲದ ಕಾರಣ, ಶಮಿ ತಂಡ ಕೂಡಿ ಕೊಂಡರೆ ಬಲ ಹೆಚ್ಚಲಿದೆ. ಶಮಿಯ ಪ್ರದರ್ಶನದ ಮೇಲೆ ಆಸ್ಟ್ರೇಲಿಯಾ ಕೂಡ ಕಣ್ಣಿಡಲಿದೆ.

ಭಾರತ ಪರ ಮೊಹಮ್ಮದ್ ಶಮಿ ಇದುವರೆಗೂ 64 ಟೆಸ್ಟ್‌ ಪಂದ್ಯಗಳನ್ನಾಡಿದ್ದು, 229 ಬಲಿ ಪಡೆದಿದ್ದಾರೆ. ಇನ್ನು 2013ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಶಮಿ, ಇದುವರೆಗೂ ಆಸ್ಟ್ರೇಲಿಯಾ ಎದುರು 12 ಟೆಸ್ಟ್ ಪಂದ್ಯಗಳನ್ನಾಡಿದ್ದು, 44 ವಿಕೆಟ್ ಕಬಳಿಸುವ ಮೂಲಕ ಕಾಂಗರೂ ಪಡೆಯನ್ನು ಇನ್ನಿಲ್ಲದಂತೆ ಕಾಡಿದ್ದಾರೆ. ಇನ್ನು ಆಸೀಸ್‌ ನೆಲದಲ್ಲಿ 8 ಟೆಸ್ಟ್‌ ಪಂದ್ಯಗಳನ್ನಾಡಿದ್ದು 31 ಟೆಸ್ಟ್ ವಿಕೆಟ್ ಕಬಳಿಸಿದ್ದಾರೆ. ಇದೀಗ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಶಮಿ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. 

ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್  ಟೆಸ್ಟ್‌ ಸರಣಿಗೆ ಭಾರತ ತಂಡ:

ರೋಹಿತ್‌ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌, ಧೃವ್‌ ಜುರೆಲ್‌, ಆರ್.ಅಶ್ವಿನ್‌, ರವೀಂದ್ರ ಜಡೇಜಾ, ಮೊಹಮದ್‌ ಸಿರಾಜ್‌, ಆಕಾಶ್‌ದೀಪ್‌, ಪ್ರಸಿದ್ಧ್‌ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.

click me!