ನನಗೆ ಸ್ವಾತಂತ್ರ್ಯ ಬೇಕಿತ್ತು: ಲಖನೌ ತಂಡದಿಂದ ನಿರ್ಗಮನ ಬಗ್ಗೆ ಮೌನ ಮುರಿದ ಕೆ ಎಲ್ ರಾಹುಲ್!

By Naveen Kodase  |  First Published Nov 12, 2024, 12:11 PM IST

ತಾವು ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ತೊರೆದಿದ್ದೇಕೆ ಎನ್ನುವುದರ ಬಗ್ಗೆ ಕನ್ನಡಿಗ ಕೆ ಎಲ್ ರಾಹುಲ್ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ


ನವದೆಹಲಿ: ಐಪಿಎಲ್‌ನ ಲಖನೌ ಸೂಪರ್‌ ಜೈಂಟ್ಸ್‌ ತಂಡದಿಂದ ಹೊರಗುಳಿದು ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಬಗ್ಗೆ ಭಾರತದ ತಾರಾ ಆಟಗಾರ, ಕರ್ನಾಟಕದ ಕೆ.ಎಲ್‌.ರಾಹುಲ್‌ ಕೊನೆಗೂ ಮೌನ ಮುರಿದಿದ್ದಾರೆ. ‘ಸ್ವಾತಂತ್ರ್ಯ ಬೇಕಿತ್ತು’ ಎಂದು ತಂಡ ತ್ಯಜಿಸಿದ ಹಿಂದಿರುವ ಕಾರಣ ಬಹಿರಂಗಪಡಿಸಿದ್ದಾರೆ.

ಈ ಬಗ್ಗೆ ಸ್ಟಾರ್‌ಸ್ಪೋರ್ಟ್‌ ಸಂದರ್ಶನದಲ್ಲಿ ಮಾತನಾಡಿರುವ ಅವರು, ಲಖನೌ ತಂಡವನ್ನು ಬಿಡಲು ಕಾರಣ ಏನು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ನನ್ನ ಪಯಣವನ್ನು ಹೊಸದಾಗಿ ಆರಂಭಿಸಲು ಬಯಸುತ್ತಿದ್ದೆ. ನನ್ನ ಮುಂದಿರುವ ಆಯ್ಕೆಗಳನ್ನು ಅನ್ವೇಷಿಸಲು ಮತ್ತು ಸ್ವಾತಂತ್ರ್ಯವನ್ನು ಕಂಡುಕೊಳ್ಳುವ ಅಗತ್ಯವಿತ್ತು. ಹೀಗಾಗಿ ತಂಡದಿಂದ ಹೊರಗುಳಿದು, ಬೇರೊಂದು ತಂಡದಲ್ಲಿ ಅವಕಾಶ ಪಡೆಯಲು ಬಯಸಿದೆ’ ಎಂದಿದ್ದಾರೆ.

Latest Videos

ಭಾರತ vs ಆಸೀಸ್ ಮಹಾಕದನಕ್ಕೆ ದಿನಗಣನೆ ಶುರು! ಈಗಾಗಲೇ ಕಾಂಗರೂ ನಾಡಿಗೆ ಕಾಲಿಟ್ಟ ವಿರಾಟ್ ಕೊಹ್ಲಿ

ರಾಹುಲ್‌ ಕಳೆದ 3 ಆವೃತ್ತಿಗಳಲ್ಲಿ ಲಖನೌ ತಂಡದ ನಾಯಕರಾಗಿದ್ದರು. ಇತ್ತೀಚೆಗೆ ಅವರನ್ನು ತಂಡ ರಿಟೈನ್‌ ಮಾಡಿಕೊಂಡಿರಲಿಲ್ಲ.

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ವೇಳೆಯಲ್ಲಿ ಆರೆಂಜ್ ಆರ್ಮಿ ಎದುರು ಲಖನೌ ತಂಡವು ಹೀನಾಯ ಸೋಲು ಅನುಭವಿಸಿತ್ತು. ಇದಾದ ಬಳಿಕ ಮೈದಾನದಲ್ಲೇ ಲಖನೌ ತಂಡದ ಮಾಲೀಕರಾದ ಡಾ. ಸಂಜೀವ್ ಗೋಯೆಂಕಾ, ಲಖನೌ ನಾಯಕರಾಗಿದ್ದ ಕೆ ಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೆ ಎಲ್ ರಾಹುಲ್. ಲಖನೌ ತಂಡವನ್ನು ತೊರೆಯಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು.

ಇದೆಲ್ಲದರ ಹೊರತಾಗಿಯೂ ಈ ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನವನ್ನು ಲಖನೌ ಮಾಲೀಕರು ಮಾಡಿದ್ದರು. ಇನ್ನು 2025ರ ಐಪಿಎಲ್ ಟೂರ್ನಿಯಲ್ಲೂ ಕೆ ಎಲ್ ರಾಹುಲ್ ಅವರನ್ನು ಉಳಿಸಿಕೊಳ್ಳಲು ಲಖನೌ ಫ್ರಾಂಚೈಸಿ ಮುಂದಾಗಿತ್ತು ಎಂದು ವರದಿಯಾಗಿತ್ತು. ಹೀಗಿದ್ದು, ಲಖನೌ ಆಫರ್ ತಿರಸ್ಕರಿಸಿ ಕೆ ಎಲ್ ರಾಹುಲ್, ಐಪಿಎಲ್ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಪಾಕಿಸ್ತಾನ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿಗೆ ವಿಘ್ನ,ಐಸಿಸಿ ನಿರ್ಧಾರಕ್ಕೆ ಪಿಸಿಬಿ ಕಂಗಾಲು!

ಇನ್ನು, ಭಾರತ ಟಿ20 ತಂಡದಲ್ಲಿ ಮರಳಿ ಸ್ಥಾನ ಗಿಟ್ಟಿಕೊಳ್ಳುವ ಬಗ್ಗೆಯೂ ರಾಹುಲ್‌ ಮಾತನಾಡಿದ್ದಾರೆ. ‘ನಾನು ಕ್ರಿಕೆಟಿನಾಗಿ ಎಲ್ಲಿಗೆ ತಲುಪಿದ್ದೇನೆ ಮತ್ತು ಹಿಂತಿರುಗಲು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ. ನನ್ನ ಕ್ರಿಕೆಟ್‌ ಬದುಕನ್ನು ಆನಂದಿಸಲು ಮತ್ತು ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಮುಂದಿನ ಐಪಿಎಲ್‌ನ್ನು ವೇದಿಕೆಯಾಗಿ ಬಳಸುತ್ತೇನೆ. ಭಾರತ ತಂಡಕ್ಕೆ ಮರಳುವುದೇ ನನ್ನ ಮುಂದಿರುವ ಗುರಿ’ ಎಂದು ರಾಹುಲ್‌ ತಿಳಿಸಿದ್ದಾರೆ.

click me!