ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

By Naveen Kodase  |  First Published Nov 13, 2024, 9:48 AM IST

ರಣಜಿ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕ ತಂಡವು ಉತ್ತರ ಪ್ರದೇಶವನ್ನು ಎದುರಿಸಲಿದೆ. ಮಯಾಂಕ್ ಅಗರ್‌ವಾಲ್ ಪಡೆಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ.


ಲಖನೌ: 2024-25ರ ರಣಜಿ ಟ್ರೋಫಿಯಲ್ಲಿ ನಿರೀಕ್ಷಿತ ಆರಂಭ ಪಡೆಯದ ಕರ್ನಾಟಕ ತಂಡ, ನಾಕೌಟ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಗುಂಪು ಹಂತದಲ್ಲಿ ಬಾಕಿ ಇರುವ ಮೂರೂ ಪಂದ್ಯಗಳನ್ನು ಗೆಲ್ಲಬೇಕಿದೆ. ಬುಧವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ಉತ್ತರ ಪ್ರದೇಶ ವಿರುದ್ಧದ ಪಂದ್ಯ ರಾಜ್ಯ ತಂಡದ ಪಾಲಿಗೆ ಅತ್ಯಂತ ಮಹತ್ವದೆನಿಸಿದ್ದು, ಲಯ ಕಂಡುಕೊಂಡು ಪಂದ್ಯ ಗೆಲ್ಲಲು ತಂಡ ಎದುರು ನೋಡುತ್ತಿದೆ.

ಸದ್ಯ ಆಡಿರುವ 4 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ತಂಡ ಅಜೇಯವಾಗಿ ಉಳಿದಿದೆ ಎನ್ನುವುದೊಂದೇ ಸಮಾಧಾನ. ಆದರೂ ಎಲೈಟ್‌ ‘ಸಿ’ ಗುಂಪಿನಲ್ಲಿ 4ನೇ ಸ್ಥಾನದಲ್ಲಿರುವ ಕರ್ನಾಟಕ, ತನ್ನ ಸಾಮರ್ಥ್ಯಕ್ಕೆ ತಕ್ಕ ಆಟವಾಡುತ್ತಿಲ್ಲ ಎನ್ನುವುದು ನಿಜ.

Latest Videos

ಐಪಿಎಲ್ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಖರೀದಿಸಲು ಈ 3 ತಂಡಗಳ ನಡುವೆ ಬಿಗ್ ಫೈಟ್?

ಬಹು ಮುಖ್ಯವಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ರಾಜ್ಯ ತಂಡ ತೀವ್ರ ವೈಫಲ್ಯ ಕಾಣುತ್ತಿದೆ. ನಾಯಕ ಮಯಾಂಕ್‌ ಅಗರ್‌ವಾಲ್‌, ಹಿರಿಯ ಬ್ಯಾಟರ್‌ ಮನೀಶ್‌ ಪಾಂಡೆ, ನಿಕಿನ್‌ ಜೋಸ್‌, ಸುಜಯ್‌ ಸಾತೇರಿ, ಆರ್‌.ಸ್ಮರಣ್, ಕಿಶನ್‌ ಬೆಡಾರೆ ನಿರಾಸೆ ಮೂಡಿಸಿದ್ದೇ ಹೆಚ್ಚು. ಬಿಹಾರ ವಿರುದ್ಧ ಶತಕ ಬಾರಿಸಿದ್ದನ್ನು ಹೊರತುಪಡಿಸಿ, ಮಯಾಂಕ್‌ ಇನ್ನುಳಿದ ಪಂದ್ಯಗಳಲ್ಲಿ ದೊಡ್ಡ ಸ್ಕೋರ್‌ ಗಳಿಸಿಲ್ಲ. ಹೀಗಾಗಿ, ಈ ಪಂದ್ಯದಲ್ಲಿ ಬ್ಯಾಟರ್‌ಗಳಿಂದ ಸುಧಾರಿತ ಆಟ ಮೂಡಿಬರಬೇಕಿದೆ.

ಮತ್ತೊಂದೆಡೆ ಅನುಭವಿ ವೇಗಿಗಳ ಅನುಪಸ್ಥಿತಿಯಲ್ಲೂ ಯುವ ಬೌಲರ್‌ಗಳನ್ನು ಜೊತೆಗಿರಿಸಿಕೊಂಡು ವಾಸುಕಿ ಕೌಶಿಕ್‌ ವೇಗದ ಬೌಲಿಂಗ್‌ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ರಾಜ್ಯ ತಂಡ ಯಶಸ್ಸು ಸಾಧಿಸಬೇಕಿದ್ದರೆ, ಕೌಶಿಕ್‌ ತಮ್ಮ ಲಯ ಮುಂದುವರಿಸಬೇಕು. ಅಭಿಲಾಷ್‌ ಶೆಟ್ಟಿ ಸಹ ಗಮನ ಸೆಳೆಯುತ್ತಿದ್ದು, ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಭಾರತ vs ಆಸೀಸ್ ಮಹಾಕದನಕ್ಕೆ ದಿನಗಣನೆ ಶುರು! ಈಗಾಗಲೇ ಕಾಂಗರೂ ನಾಡಿಗೆ ಕಾಲಿಟ್ಟ ವಿರಾಟ್ ಕೊಹ್ಲಿ

ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ ಸ್ಪಿನ್ ಬೌಲಿಂಗ್‌ ಜೊತೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬೇಕಾದ ಅನಿವಾರ್ಯತೆ ಇದೆ. ಇನ್ನು ಸ್ಫೋಟಕ ಬ್ಯಾಟರ್‌ ಅಭಿನವ್‌ ಮನೋಹರ್‌ರಿಂದ ಪಂದ್ಯದ ಗತಿ ಬದಲಿಸುವ ಇನ್ನಿಂಗ್ಸ್‌ ನಿರೀಕ್ಷೆ ಮಾಡಲಾಗುತ್ತಿದೆ.

ಮತ್ತೊಂದೆಡೆ ಉತ್ತರ ಪ್ರದೇಶ ಸಹ ಈ ವರ್ಷ ಸಾಧಾರಣ ಪ್ರದರ್ಶನ ತೋರುತ್ತಿದೆ. ಆಡಿರುವ 4 ಪಂದ್ಯಗಳಲ್ಲಿ 1 ಸೋಲು, 3 ಡ್ರಾದೊಂದಿಗೆ ಕೇವಲ 5 ಅಂಕ ಸಂಪಾದಿಸಿದೆ. ಹೀಗಾಗಿ ತಂಡಕ್ಕಿದು ಅತ್ಯಂತ ಮಹತ್ವದ ಪಂದ್ಯ. ಆರ್ಯನ್‌ ಜುಯಲ್‌, ನಿತೀಶ್‌ ರಾಣಾ ತಂಡದ ಪ್ರಮುಖ ಬ್ಯಾಟರ್‌ಗಳಾಗಿದ್ದು, ಸೌರಭ್‌ ಕುಮಾರ್‌ ಹಾಗೂ ಶಿವಂ ಶರ್ಮಾ ತಂಡದ ಬೌಲಿಂಗ್‌ ಟ್ರಂಪ್‌ ಕಾರ್ಡ್ಸ್‌ ಎನಿಸಿದ್ದಾರೆ.

ಉಭಯ ತಂಡಗಳು ಕೊನೆಯ ಬಾರಿಗೆ ಎದುರಾಗಿದ್ದು 2022ರಲ್ಲಿ. ಆ ಪಂದ್ಯದಲ್ಲಿ ಉತ್ತರ ಪ್ರದೇಶ 5 ವಿಕೆಟ್‌ ಜಯ ಸಾಧಿಸಿತ್ತು.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

click me!