ಟೀಂ ಇಂಡಿಯಾ ಕಮ್‌ಬ್ಯಾಕ್ ಬಗ್ಗೆ ಸುಳಿವು ಕೊಟ್ಟ ಬುಮ್ರಾ
ಗಾಯದ ಸಮಸ್ಯಯಿಂದಾಗಿ ಕ್ರಿಕೆಟ್‌ನಿಂದ ದೂರ ಉಳಿದಿರುವ ವೇಗಿ
ನವದೆಹಲಿ(ಮೇ.29): ಗಾಯದ ಸಮಸ್ಯೆಯಿಂದಾಗಿ ಹಲವು ತಿಂಗಳುಗಳಿಂದ ಕ್ರಿಕೆಟ್‌ನಿಂದ ದೂರವಿರುವ ಭಾರತದ ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ ಶೀಘ್ರ ಕ್ರಿಕೆಟ್‌ಗೆ ಮರಳುವ ಸುಳಿವು ನೀಡಿದ್ದಾರೆ. ಭಾನುವಾರ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೌಲಿಂಗ್ ಶೂ ಫೋಟೋ ಹಂಚಿಕೊಂಡಿದ್ದು, ‘ಸ್ನೇಹಿತರೆ ಮತ್ತೆ ಸಿಗೋಣ’ ಎಂದು ಶೀರ್ಷಿಕೆ ಬರೆದಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊನೆ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದ ಬೂಮ್ರಾ, ಐಪಿಎಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬುಮ್ರಾ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ವೇಳೆಗೆ ಭಾರತ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ವಿಶ್ವಕಪ್ ತಂಡದಲ್ಲಿ ಬುಮ್ರಾ ಸ್ಥಾನ ಪಡೆದರೆ ಭಾರತ ತಂಡದ ಬಲ ಹೆಚ್ಚಲಿದೆ.
ಜಸ್ಪ್ರೀತ್ ಬುಮ್ರಾ, ಕಳೆದ ವರ್ಷದ ಸೆಪ್ಟೆಂಬರ್ 25ರಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್, ಐಸಿಸಿ ಟಿ20 ವಿಶ್ವಕಪ್ ಸೇರಿದಂತೆ ಹಲವು ಮಹತ್ವದ ಟೂರ್ನಿಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಜಸ್ಪ್ರೀತ್ ಬುಮ್ರಾ ಅವರನ್ನು ತವರಿನಲ್ಲಿ ಶ್ರೀಲಂಕಾ ವಿರುದ್ದದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಕಳೆದ ಜನವರಿಯಲ್ಲಿ ನಡೆದ ಸರಣಿಯಲ್ಲಿ ಸಂಪೂರ್ಣ ಫಿಟ್ ಆಗಿದ್ದರೆ, ತವರಿನಲ್ಲೇ ಆಸ್ಟ್ರೇಲಿಯಾ ಎದುರಿನ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆ ಮಾಡುವ ಉದ್ದೇಶದಿಂದ ಬುಮ್ರಾಗೆ ಮಣೆಹಾಕಲಾಗಿತ್ತು. ಆದರೆ ಮತ್ತೆ ಫಿಟ್ನೆಸ್ ಸಮಸ್ಯೆಯಿಂದಾಗಿ ಬುಮ್ರಾ ಭಾರತ ಪರ ಕಣಕ್ಕಿಳಿದಿರಲಿಲ್ಲ. ಇದಾದ ಬಳಿಕ ಬಾರ್ಡರ್ ಗವಾಸ್ಕರ್ ಸರಣಿ, ಐಪಿಎಲ್ ಹಾಗೂ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಲೂ ಬುಮ್ರಾ ಹೊರಬಿದ್ದಿದ್ದಾರೆ.
IPL Final: ಇಂದೂ ಫೈನಲ್‌ಗೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಮುಂಬೈ ಕಾಡಿದ ತಾರಾ ವೇಗಿಗಳ ಅನುಪಸ್ಥಿತಿ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಎರಡನೇ ಕ್ವಾಲಿಫೈಯರ್ ಹಂತದಲ್ಲಿ ಗುಜರಾತ್ ಟೈಟಾನ್ಸ್ ಎದುರು ಮುಗ್ಗರಿಸುವ ಮೂಲಕ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತು. ಬ್ಯಾಟಿಂಗ್‌ನಲ್ಲಿ ಮುಂಬೈ ಬ್ಯಾಟರ್‌ಗಳು ಯಶಸ್ವಿಯಾದರಾದರೂ, ಬೌಲಿಂಗ್‌ನಲ್ಲಿ ದಯಾನೀಯ ವೈಫಲ್ಯ ಅನುಭವಿಸಿತು. ಅದರಲ್ಲೂ ತಂಡದ ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ ಸಂಪೂರ್ಣ ಐಪಿಎಲ್ ಟೂರ್ನಿಯಿಂದ ಹೊರಗುಳಿದರೆ, ಮತ್ತೋರ್ವ ಮಾರಕ ವೇಗಿ ಜೋಫ್ರಾ ಆರ್ಚರ್ ಕೇವಲ ಆರು ಪಂದ್ಯಗಳನ್ನು ಆಡಲಷ್ಟೇ ಶಕ್ತರಾದರು. ಈ ಇಬ್ಬರು ತಾರಾ ವೇಗಿಗಳ ಅನುಪಸ್ಥಿತಿ ಮುಂಬೈ ತಂಡದ ಪಾಲಿಗೆ ಕೊಂಚ ಹಿನ್ನಡೆಯಾಗಿ ಪರಿಣಮಿಸಿತು.
ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ: ಬಹುನಿರೀಕ್ಷಿತ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ. 2011ರ ಬಳಿಕ ಭಾರತ ಮತ್ತೊಮ್ಮೆ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದ್ದು, ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ರೋಹಿತ್ ಶರ್ಮಾ ಪಡೆ ಗುರುತಿಸಿಕೊಂಡಿದೆ. ಭಾರತ ತಂಡವು ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿಯ ಬರ ಅನುಭವಿಸುತ್ತಾ ಬಂದಿದೆ. ಭಾರತ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಯಾವುದೇ ಐಸಿಸಿ ಟ್ರೋಫಿ ಜಯಿಸಲು ಭಾರತ ಕ್ರಿಕೆಟ್ ತಂಡವು ಯಶಸ್ವಿಯಾಗಿಲ್ಲ. ಐಸಿಸಿ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಸೇರಿದಂತೆ ಹಲವು ಐಸಿಸಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದರೂ ಸಹಾ ಭಾರತ ಕಪ್ ಗೆಲ್ಲಲು ಸಫಲವಾಗಿಲ್ಲ. ಇದೀಗ ಭಾರತ ತಂಡವು ತವರಿನಲ್ಲಾದರೂ ಐಸಿಸಿ ಏಕದಿನ ವಿಶ್ವಕಪ್ ಜಯಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.