ಅಹಮದಾಬಾದ್‌ನಲ್ಲಿ ನಿನ್ನೆ ಭಾರೀ ಮಳೆ
ಸಂಜೆ 7.30ಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ ರಾತ್ರಿ 10.45 ಆದರೂ ಶುರುವಾಗಲಿಲ್ಲ
ಸಾವಿರಾರು ರುಪಾಯಿ ಕೊಟ್ಟು ಟಿಕೆಟ್ ಖರೀದಿಸಿದ್ದ ಅಭಿಮಾನಿಗಳಿಗೆ ನಿರಾಸೆ
ಪಿಚ್ ಕಾಪಾಡಲು ಮೈದಾನ ಸಿಬ್ಬಂದಿ ಹರಸಾಹಸ
ಅಹಮದಾಬಾದ್(ಮೇ.29): ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯಕ್ಕೆ ಇಷ್ಟು ಪ್ರಮಾಣದಲ್ಲಿ ಮಳೆ ಕಾಟ ಎದುರಾಯಿತು. ಭಾನುವಾರ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್‌್ಸ ನಡುವೆ ನಡೆಯಬೇಕಿದ್ದ 16ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಸಂಜೆ ಆರಂಭಗೊಂಡ ಮಳೆ ಟಾಸ್ ಕೂಡ ನಡೆಸಲು ಬಿಡಲಿಲ್ಲ. ರಾತ್ರಿ 10.45 ಆದರೂ ಮಳೆ ನಿಲ್ಲಲಿಲ್ಲ. ಅಹಮದಾಬಾದ್‌ನಲ್ಲಿ ದಿನಗಳ ಹಿಂದೆಯೇ ಮಳೆಯ ಮುನ್ಸೂಚನೆ ಇತ್ತಾದರೂ ಪಂದ್ಯದ ದಿನ ಮೋಡ ಕವಿದ ವಾತಾವರವಿತ್ತು. ಆದರೆ ಸಂಜೆ ಆಗುತ್ತಿದ್ದಂತೆ ಸುರಿಯಲು ಆರಂಭಿಸಿದ ಮಳೆ ರಾತ್ರಿವರೆಗೂ ನಿಲ್ಲಲಿಲ್ಲ. ಆಗಾಗ್ಗೆ ನಿಂತಂತೆ ಕಂಡರೂ, ಟಾಸ್ ನಡೆಸುವ, ಪಂದ್ಯ ಆರಂಭಿಸುವ ಬಗ್ಗೆ ಸಿಬ್ಬಂದಿ ನಿರ್ಧರಿಸುವ ವೇಳೆಗೆ ಮತ್ತೆ ಮಳೆ ಜೋರಾಗುತ್ತಿತ್ತು. ಹೀಗಾಗಿ ಐಪಿಎಲ್ ಫೈನಲ್ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಯಿತು.
ಬರೀ ಲೆಕ್ಕಾಚಾರದಲ್ಲೇ ಸಮಯ ವ್ಯರ್ಥ!
ಭಾನುವಾರ ಕೆಲವೊಮ್ಮೆ ಮಳೆ ಬಿಡುವು ನೀಡಿದರೂ ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಟಾಸ್ ಕೂಡಾ ಸಾಧ್ಯವಾಗಲಿಲ್ಲ. ಯಾವುದೇ ಓವರ್ ಕಡಿತವಿಲ್ಲದೇ ರಾತ್ರಿ 9.40ರ ವರೆಗೂ ಪಂದ್ಯ ಆರಂಭಿಸಲು ಅವಕಾಶವಿದ್ದರೂ ಮಳೆ ಬಿಟ್ಟೂಬಿಡದೆ ಸುರಿದ ಪರಿಣಾಮ ಸಂಪೂರ್ಣ 20 ಓವರ್ ಆಟಕ್ಕೆ ಅವಕಾಶ ಸಿಗಲಿಲ್ಲ. ಹೀಗಾಗಿ ಯಾವ ಸಮಯಕ್ಕೆ ಮಳೆ ನಿಂತರೆ ಎಷ್ಟುಓವರ್ ಆಟ ಆಡಿಸಬಹುದು, ಮಳೆ ನಿಲ್ಲದಿದ್ದರೆ ಏನಾಗಬಹುದು, 5 ಓವರ್ ಆಟ ಯಾವಾಗ ಆರಂಭಿಸಬಹುದು, ಆಟ ಸಾಧ್ಯವಾಗದೆ ಇದ್ದರೆ ಏನಾಗಲಿದೆ, ಮೀಸಲು ಎಂಬ ಲೆಕ್ಕಾಚಾರದಲ್ಲೇ ಪಂದ್ಯದ ಅಧಿಕಾರಿಗಳು, ಅಭಿಮಾನಿಗಳು ಮುಳುಗಿದ್ದರು. ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಳ್ ಹಾಗೂ ಬಿಸಿಸಿಐ ಅಧಿಕಾರಿಗಳು ಮೈದಾನದಲ್ಲೇ ಇದ್ದು ಪರಿಸ್ಥಿತಿ ಅವಲೋಕಿಸಿ ಅಂಪೈರ್‌ಗಳು, ಮೈದಾನ ಸಿಬ್ಬಂದಿಯೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿದ್ದ ದೃಶ್ಯಗಳು ಕಂಡುಬಂತು.
ಇಂದೂ ಮಳೆ ಬಂದರೆ ಏನಾಗುತ್ತೆ?
ಭಾನುವಾರ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯವು ಇದೀಗ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಸೋಮವಾರ ಪೂರ್ತಿ 20 ಓವರ್‌ಗಳ ಪಂದ್ಯ ನಡೆಯಬೇಕಿದೆ. ಒಂದು ವೇಳೆ ಮತ್ತೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದರೆ, ರಾತ್ರಿ 9.40ರ ವರೆಗೂ ಓವರ್ ಕಡಿತಗೊಳಿಸದೇ ಪಂದ್ಯ ನಡೆಸಬಹುದು. ಕನಿಷ್ಠ 5 ಓವರ್‌ಗಳ ಪಂದ್ಯ ನಡೆಸಲು ಮಧ್ಯರಾತ್ರಿ 12.06ರ ವರೆಗೆ ಸಮಯಾವಕಾಶವಿರಲಿದೆ. ಅದೂ ಸಾಧ್ಯವಾಗದೇ ಇದ್ದರೆ ಸೂಪರ್ ಓವರ್ ಮೂಲಕ ಫಲಿತಾಂಶ ನಿರ್ಧರಿಸಲು ಮಧ್ಯರಾತ್ರಿ 12.50ರ ವರೆಗೂ ಕಾಲಾವಕಾಶ ಇರಲಿದೆ. ಸೂಪರ್ ಓವರ್ ಕೂಡಾ ನಡೆಸಲು ಸಾಧ್ಯವಾಗದೇ ಇದ್ದರೆ, ಲೀಗ್ ಹಂತ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುವುದು.
ಪ್ರೇಕ್ಷಕರಿಗೆ ಭಾರೀ ನಿರಾಸೆ
ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎನಿಸಿಕೊಂಡಿರುವ ಅಹಮದಾಬಾದ್ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ ವೀಕ್ಷಣೆಗಾಗಿ ಸುಮಾರು 75000ಕ್ಕೂ ಹೆಚ್ಚು ಅಭಿಮಾನಿಗಳು ಸೇರಿದ್ದರು. ಮಳೆಯಿಂದ ಪಾರಾಗಲು ಕ್ರೀಡಾಂಗಣದ ಸುರಕ್ಷಿತ ಸ್ಥಳಗಳಿಗೆ ಓಡುತ್ತಿದ್ದ ಅಭಿಮಾನಿಗಳು, ಮಳೆ ಸ್ವಲ್ಪ ಬಿಡುವು ನೀಡಿದರೂ ಮತ್ತೆ ತಮ್ಮ ಆಸನಗಳತ್ತ ಮರಳುತ್ತಿದ್ದರು. ಹೀಗೆ ಹಲವು ಬಾರಿ ಅಭಿಮಾನಿಗಳು ಓಡಾಡಬೇಕಾಯಿತು.
ಮೊಟಕುಗೊಂಡ ಸಮಾರೋಪ ಸಮಾರಂಭ!
ಬಿಸಿಸಿಐ ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಿತ್ತು. ಡಿಜೆ ನ್ಯೂಕ್ಲೆಯಾ ಅವರ ಪ್ರದರ್ಶನವೊಂದೇ ನಡೆದಿದ್ದು. ಇನ್ನುಳಿದ ಪ್ರದರ್ಶನಗಳು ಶುರುವಾಗುವ ವೇಳೆಗೆ ಮಳೆ ಸುರಿದ ಕಾರಣ ಸಮಾರೋಪ ಸಮಾರಂಭವನ್ನು ಮೊಟಕುಗೊಳಿಸಲಾಯಿತು.
ಮೈದಾನ ಸಿಬ್ಬಂದಿ ಸುಸ್ತೋ ಸುಸ್ತು!
ಮಳೆ ಅಲ್ಪ ಸಮಯ ಬಿಡುವು ನೀಡಿ ಮತ್ತೆ ಮತ್ತೆ ಸುರಿಯುತ್ತಿದ್ದ ಕಾರಣ ಮೈದಾನ ಸಿಬ್ಬಂದಿ ಪಿಚ್‌ಗೆ ಕವರ್ಗಳನ್ನು ಹಾಕಿ, ಬಳಿಕ ತೆರವುಗೊಳಿಸುವುದರಲ್ಲೇ ಹೈರಾಣಾದರು. ಹಲವು ಸಿಬ್ಬಂದಿ ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿಯೇ ಕರ್ತವ್ರ್ಯ ನಿರ್ವಹಿಸುತ್ತಿದ್ದ ದೃಶ್ಯಗಳೂ ಕ್ಯಾಮರಾದಲ್ಲಿ ಸೆರೆಯಾಯಿತು. ಸೂಪರ್ ಸಾಪರ್‌ಗಳು ಬಿಡುವಿಲ್ಲದಂತೆ ಮೈದಾನದ ತುಂಬಾ ಓಡಾಡಿದ ದೃಶ್ಯವೂ ಸಾಮಾನ್ಯವಾಗಿತ್ತು.