ಟೀಂ ಇಂಡಿಯಾ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ವಿಚಾರವನ್ನು ಜಡ್ಡು ಪತ್ನಿ ರಿವಾಬ ಖಚಿತಪಡಿಸಿದ್ದಾರೆ.
ಸೂರತ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಇದೀಗ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ವಿಚಾರವನ್ನು ಜಡೇಜಾ ಪತ್ನಿ ರಿವಾಬ ಜಡೇಜಾ ಖಚಿತಪಡಿಸಿದ್ದಾರೆ.
ಹೌದು, ಸದ್ಯ ದೇಶಾದ್ಯಂತ ಬಿಜೆಪಿ ಸದಸ್ಯತ್ವ ಆಂದೋಲನ ಭರದಿಂದ ಸಾಗುತ್ತಿದೆ. ಇದೀಗ ರಿವಾಬ ಜಡೇಜಾ, ತಮ್ಮ ಪತಿ ಹಾಗೂ ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿ ಸದಸ್ಯತ್ವ ಪಡೆದಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ 'ಎಕ್ಸ್' ಖಾತೆ ಮೂಲಕ ಹಂಚಿಕೊಂಡಿದ್ದಾರೆ. ರಿವಾಬ ಜಡೇಜಾ ಸದಸ್ಯತ್ವ ಅಭಿಯಾನ ಎನ್ನುವ ಹ್ಯಾಷ್ ಟ್ಯಾಗ್ ಜತೆಗೆ ತಮ್ಮ ಹಾಗೂ ತಮ್ಮ ಪತಿ ಜಡೇಜಾ ಅವರ ಬಿಜೆಪಿ ಸದಸ್ಯತ್ವದ ಕಾರ್ಡ್ ಹಂಚಿಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ಸದಸ್ಯತ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 02ರಂದು ನವದೆಹಲಿಯಲ್ಲಿ ತಮ್ಮ ಸದಸ್ಯತ್ವವನ್ನು ನವೀಕರಿಸಿಕೊಂಡಿದ್ದರು.
ಮನೆಯೊಡೆದ ಸೊಸೆ; ಮಾವನ ಆರೋಪಕ್ಕೆ ಖಡಕ್ ತಿರುಗೇಟು ಕೊಟ್ಟ ಜಡೇಜಾ ಪತ್ನಿ ರಿವಾಬ
ಇನ್ನು ರಿವಾಬ ಜಡೇಜಾ ಅವರು 2019ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದಾದ ಬಳಿಕ ಬಿಜೆಪಿ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತೆಯಾಗಿ ಕೆಲಸ ಮಾಡಿದ್ದ ರಿವಾಬ, 2022ರಲ್ಲಿ ಗುಜರಾತ್‌ನ ಜಾಮ್‌ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ರಿವಾಬ, ಆಮ್ ಆದ್ಮಿ ಪಕ್ಷದ ಕರ್ಸುನ್‌ಬಾಯ್ ಕರ್ಮೂರ್ ಎದುರು ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು.
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಆಗಿರುವ 35 ವರ್ಷದ ರವೀಂದ್ರ ಜಡೇಜಾ, ಕಳೆದ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಭಾರತ ಟಿ20 ವಿಶ್ವಕಪ್ ಜಯಿಸುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯಂತೆ ಜಡೇಜಾ ಕೂಡಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದರೂ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಖಚಿತಪಡಿಸಿದ್ದಾರೆ.