Ind vs SL ಕನ್ನಡಿಗ ಸೇರಿ ಇಬ್ಬರಿಗೆ ಕೋವಿಡ್‌ ದೃಢ; ಶ್ರೀಲಂಕಾದಲ್ಲೇ ಐಸೋಲೇಷನ್‌

Suvarna News   | Asianet News
Published : Jul 31, 2021, 08:56 AM IST
Ind vs SL ಕನ್ನಡಿಗ ಸೇರಿ ಇಬ್ಬರಿಗೆ ಕೋವಿಡ್‌ ದೃಢ; ಶ್ರೀಲಂಕಾದಲ್ಲೇ ಐಸೋಲೇಷನ್‌

ಸಾರಾಂಶ

* ಲಂಕಾ ಸರಣಿಯಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೆ ಕೊರೋನಾ ಶಾಕ್‌ * ಕನ್ನಡಿಗ ಕೆ. ಗೌತಮ್ ಸೇರಿ ಇಬ್ಬರಿಗೆ ಕೋವಿಡ್‌ ಪಾಸಿಟಿವ್‌ * ಸದ್ಯ ಮೂವರು ಕ್ರಿಕೆಟಿಗರು ಕೊಲಂಬೊದಲ್ಲೇ ಐಸೋಲೇಷನ್‌

ಕೊಲಂಬೊ(ಜು.31): ಭಾರತೀಯ ಕ್ರಿಕೆಟಿಗರಾದ ಕೃಷ್ಣಪ್ಪ ಗೌತಮ್‌ ಹಾಗೂ ಯಜುವೇಂದ್ರ ಚಹಲ್‌ಗೂ ಕೊರೋನಾ ಸೋಂಕು ತಗುಲಿದ್ದು, ಶ್ರೀಲಂಕಾದಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೃನಾಲ್‌ ಪಾಂಡ್ಯ ಸಹ ಇನ್ನೂ ಐಸೋಲೇಷನ್‌ನಲ್ಲೇ ಇದ್ದಾರೆ. ಉಳಿದ ಆಟಗಾರರು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದು, ಅಲ್ಲಿಂದ ನೇರವಾಗಿ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.

ಕನ್ನಡಿಗ ಕೃಷ್ಣಪ್ಪ ಗೌತಮ್‌ ಲಂಕಾ ಎದುರಿನ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಟಿ20 ಪಂದ್ಯದಲ್ಲೂ ಗೌತಮ್‌ಗೆ ಸ್ಥಾನ ಪಡೆಯವ ಸಾಧ್ಯತೆಯಿತ್ತು. ಆದರೆ ಕೃನಾಲ್‌ ಪಾಂಡ್ಯ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಆಟಗಾರರ ಪೈಕಿ ಚಹಲ್ ಹಾಗೂ ಗೌತಮ್‌ಗೆ ಇದೀಗ ಕೋವಿಡ್ 19 ದೃಢಪಟ್ಟಿದೆ.

ಕೃನಾಲ್ ಪಾಂಡ್ಯ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ನುಳಿದ ಆಟಗಾರರ ಪೈಕಿ ಹಾರ್ದಿಕ್‌ ಪಾಂಡ್ಯ, ಮನೀಶ್ ಪಾಂಡೆ, ದೀಪಕ್ ಚಹರ್ ಹಾಗೂ ಇಶಾನ್ ಕಿಶನ್‌ ಕೋವಿಡ್ ಟೆಸ್ಟ್ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಈ ಎಲ್ಲಾ ಆಟಗಾರರು ಶುಕ್ರವಾರ ಬೆಂಗಳೂರಿಗೆ ಬಂದಿಳಿದ್ದಾರೆ.

ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಟಿ20 ಸರಣಿ ಶ್ರೀಲಂಕಾ ಪಾಲು!

ಕೃನಾಲ್‌ಗೆ ಕೊರೋನಾ ತಗುಲಿದ ಕಾರಣ ಅವರೊಂದಿಗೆ ಸಂಪರ್ಕದಲ್ಲಿದ್ದ 8 ಆಟಗಾರರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿತ್ತು. ಟಿ20 ಸರಣಿ ಮುಗಿದ ಬಳಿಕ ಶುಕ್ರವಾರ ಭಾರತಕ್ಕೆ ಹೊರಡುವ ಮುನ್ನ ಐಸೋಲೇಷನ್‌ನಲ್ಲಿದ್ದ ಆಟಗಾರರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಯುಜುವೇಂದ್ರ ಚಹಲ್‌ ಹಾಗೂ ಗೌತಮ್‌ಗೆ ಸೋಂಕು ತಗುಲಿರುವುದು ಪತ್ತೆಯಾಯಿತು.

ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಲಂಕಾ ಎದುರಿನ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇನ್ನು ಟಿ20 ಸರಣಿಯನ್ನು ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಆದರೆ ಎರಡನೇ ಟಿ20 ಪಂದ್ಯ ಆರಂಭಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಕೋವಿಡ್‌ ಶಾಕ್‌ ನೀಡಿದ್ದರಿಂದ ಪ್ರಮುಖ 8 ಆಟಗಾರರು ಐಸೋಲೇಷನ್‌ಗೆ ಒಳಗಾಗಬೇಕಾಯಿತು. ಹೀಗಾಗಿ ಕೊನೆಯ ಎರಡು ಟಿ20 ಪಂದ್ಯಗಳನ್ನು ಶ್ರೀಲಂಕಾ ಕ್ರಿಕೆಟ್‌ ತಂಡವು ಜಯ ಸಾಧಿಸುವ ಮೂಲಕ ಚುಟುಕು ಕ್ರಿಕೆಟ್‌ ಸರಣಿಯನ್ನು ದ್ವೀಪ ರಾಷ್ಟ್ರ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು