ವಿಶ್ವಕಪ್ ಸೋತ ಟೀಂ ಇಂಡಿಯಾ ಮುಂದಿದೆ ಬೆಟ್ಟದಷ್ಟು ಸವಾಲು..!

By Kannadaprabha NewsFirst Published Nov 21, 2023, 1:54 PM IST
Highlights

ಭಾರತ 2024-27ರ ನಡುವೆ ನಾಲ್ಕು ಜಾಗತಿಕ ಮಟ್ಟದ ಟೂರ್ನಿಗಳನ್ನು ಆಡಲಿದೆ. 2024, 2026ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2027ರ ಏಕದಿನ ವಿಶ್ವಕಪ್ ಸದ್ಯ ಟೀಂ ಇಂಡಿಯಾದ ಮುಂದಿರುವ ಸವಾಲು.

ಬೆಂಗಳೂರು(ನ.21): ಫೇವರಿಟ್ ಎನಿಸಿಕೊಂಡಿದ್ದರೂ ಭಾರತ ಈ ಬಾರಿ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶ ಕಳೆದುಕೊಂಡಿದೆ. ಭಾರತದ ಪಾಲಿಗೆ 2023ರ ವಿಶ್ವಕಪ್ ಈಗ ಮುಗಿದ ಅಧ್ಯಾಯ. ಆದರೆ ಟೀಂ ಇಂಡಿಯಾ ಈ ವಿಶ್ವಕಪ್ ಗುಂಗಿನಲ್ಲೇ ಮುಳುಗಿ ಹೋಗದೆ ಮುಂದಿನ ಸವಾಲುಗಳಿಗೆ ಸಜ್ಜಾಗಬೇಕಾದ ಅನಿವಾರ್ಯತೆ ಇದೆ. ಭಾರತದ ಮುಂದೆ ಸಾಲು ಸಾಲು ಸವಾಲುಗಳಿವೆ.

6 ತಿಂಗಳಲ್ಲೇ ಮತ್ತೊಂದು ವಿಶ್ವಕಪ್!: ಭಾರತ 2024-27ರ ನಡುವೆ ನಾಲ್ಕು ಜಾಗತಿಕ ಮಟ್ಟದ ಟೂರ್ನಿಗಳನ್ನು ಆಡಲಿದೆ. 2024, 2026ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2027ರ ಏಕದಿನ ವಿಶ್ವಕಪ್ ಸದ್ಯ ಟೀಂ ಇಂಡಿಯಾದ ಮುಂದಿರುವ ಸವಾಲು. ಆದರೆ ಈಗಿರುವ ತಂಡವೇ ಮುಂದಿನ ಟೂರ್ನಿಗಳಿಗೂ ಇರಲು ಸಾಧ್ಯವಿಲ್ಲ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ(35 ವರ್ಷ), ರೋಹಿತ್ ಶರ್ಮಾ(36), ಜಡೇಜಾ(34), ಆರ್.ಅಶ್ವಿನ್(37)ಗೆ ಮುಂದಿನ ವರ್ಷದ ಟಿ20 ವಿಶ್ವಕಪ್ ಬಹುತೇಕ ಕೊನೆ ಟೂರ್ನಿ ಆಗಿರಲಿದ್ದು, ಆ ಬಳಿಕ ಅವರು ತಂಡದಲ್ಲಿರುವ ಸಾಧ್ಯತೆ ಕಡಿಮೆ. ಮೊಹಮದ್ ಶಮಿ(33) ಕೂಡಾ ದೀರ್ಘ ಕಾಲ ತಂಡದಲ್ಲಿರುವುದು ಅನುಮಾನ. ಹೀಗಾಗಿ ಪ್ರತಿಭಾವಂತ ಯುವ ಪೀಳಿಗೆಯನ್ನು ಸಿದ್ಧಗೊಳಿಸುವ ಹೊಣೆಗಾರಿಕೆ ಸದ್ಯ ಬಿಸಿಸಿಐ ಮುಂದಿದೆ.

Latest Videos

ಆಸೀಸ್ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಸೂರ್ಯನಿಗೆ ಒಲಿದ ನಾಯಕ ಪಟ್ಟ

ಸಿಗಬೇಕಿದೆ ಹೆಚ್ಚಿನ ಅವಕಾಶ: ಸದ್ಯ ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿರುವ ಹಲವು ಅನುಭವಿ ಆಟಗಾರರಿದ್ದಾರೆ. ಕೆ.ಎಲ್.ರಾಹುಲ್(31), ಹಾರ್ದಿಕ್ ಪಾಂಡ್ಯ(30), ಜೊತೆ ರಿಷಭ್ ಪಂತ್(26) ಶ್ರೇಯಸ್ ಅಯ್ಯರ್(28), ಶುಭ್‌ಮನ್ ಗಿಲ್(24 ವರ್ಷ), ಇಶಾನ್ ಕಿಶನ್(25), ಜಸ್‌ಪ್ರೀತ್ ಬುಬೂಮ್ರಾ(29), ಮೊಹಮದ್ ಸಿರಾಜ್(29), ಕುಲ್ದೀಪ್ ಯಾದವ್(28) ಇನ್ನಷ್ಟು ವರ್ಷ ತಂಡಕ್ಕೆ ಆಧಾರಸ್ತಂಭಗಳಾಗುವ ಭರವಸೆ ಮೂಡಿಸಿದ್ದು, ಋತುರಾಜ್ ಗಾಯಕ್ವಾಡ್(26), ಯಶಸ್ವಿ ಜೈಸ್ವಾಲ್(21), ಸಂಜು ಸ್ಯಾಮ್ಸನ್(29), ರವಿ ಬಿಷ್ಣೋಯ್(23), ಅರ್ಶ್‌ದೀಪ್ ಸಿಂಗ್(24) ಕೂಡಾ ತಮ್ಮದೇ
ರೀತಿಯಲ್ಲಿ ಛಾಪು ಮೂಡಿಸುತ್ತಿದ್ದಾರೆ. ಮುಂದಿನ ಮಹತ್ವದ ಟೂರ್ನಿಗಳ ದೃಷ್ಟಿಯಲ್ಲಿ ಇವರಿಗೆ ತಂಡದಲ್ಲಿ ಹೆಚ್ಚಿನ ಅವಕಾಶ ನೀಡಬೇಕಾದ ಅಗತ್ಯವಿದೆ.

ಭಾವುಕರಾಗಿದ್ದ ಕೊಹ್ಲಿ-ರೋಹಿತ್ ಮುಖದಲ್ಲಿ ನಗು, ಮೋದಿ ಜೊತೆ ಕೈ ಕೈ ಹಿಡಿದ ಫೋಟೋ ವೈರಲ್!

ಹಿರಿಯರು ವಿಶ್ರಾಂತಿ ಪಡೆದ ಕೆಲ ಸರಣಿಗಳಲ್ಲಿ ಮಾತ್ರ ಅವಕಾಶ ಕೊಡುವ ಬದಲು, ಈಗಿಂದಲೇ ಆಡಿಸಿ ಅವರನ್ನು ಮಹತ್ವದ ಟೂರ್ನಿಗಳಿಗೂ ಮುನ್ನ ಸಜ್ಜುಗೊಳಿಸಬೇಕಿದೆ. ಇನ್ನು, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್ ಆಲ್ರೌಂಡರ್ ಹೊಣೆಗಾರಿಗೆ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಮತ್ತೊಂದೆಡೆ ದೇಸಿ ಟೂರ್ನಿಗಳಲ್ಲಿ ಮಿಂಚುತ್ತಿರುವ ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ಪ್ರಭ್‌ಸಿಮ್ರನ್ ಸಿಂಗ್, ವೇಗಿಗಳಾದ ಪ್ರಸಿದ್ಧ್ ಕೃಷ್ಣ, ದೀಪಕ್ ಚಹರ್, ಉಮ್ರಾನ್ ಮಲಿಕ್, ವಿದ್ವತ್ ಕಾವೇರಪ್ಪ, ಸ್ಪಿನ್ನರ್ ಸೌರಭ್ ಕುಮಾರ್ ಕೂಡಾ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟುತ್ತಿದ್ದು ಹೆಚ್ಚಿನ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.

click me!