ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ. ಈಗಾಗಲೇ ಈಡನ್ ಗಾರ್ಡನ್ಸ್ ಮೈದಾನ ಐತಿಹಾಸಿಕ ಪಂದ್ಯಕ್ಕೆ ಮದುವಣಿಗಿತ್ತಿಯಂತೆ ಸಜ್ಜಾಗಿದೆ. ಈ ಪಂದ್ಯದ ಬಗೆಗಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ...
ಕೋಲ್ಕತಾ(ನ.22): ಭಾರತ-ಬಾಂಗ್ಲಾದೇಶ ನಡುವಿನ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ. ಮೊದಲ ಬಾರಿಗೆ ಎರಡೂ ತಂಡಗಳು ಪಿಂಕ್ ಬಾಲ್‌ನಲ್ಲಿ ಆಡಲಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮಾನ್ಯತೆ ನೀಡಿದ 7 ವರ್ಷಗಳ ಬಳಿಕ ಕೊನೆಗೂ ಹಗಲು-ರಾತ್ರಿ ಟೆಸ್ಟ್ ಆಡಲು ಬಿಸಿಸಿಐ ಒಪ್ಪಿಕೊಂಡಿದ್ದು, ಈ ಬೆಳವಣಿಗೆಗೆ ನೂತನ ಅಧ್ಯಕ್ಷ ಸೌರವ್ ಗಂಗೂಲಿಯೇ ಕಾರಣ. ಗಂಗೂಲಿ ಭಾರತ ತಂಡದ ಆಟಗಾರರ ಮನವೊಲಿಸಿದ್ದಲ್ಲದೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಯನ್ನೂ ಹಗಲು-ರಾತ್ರಿ ಪಂದ್ಯವಾಡಲು ಒಪ್ಪಿಸಿದರು.
ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆಯಲು ಕೊಹ್ಲಿ ರೆಡಿ..!
ಪಂದ್ಯಕ್ಕಾಗಿ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕೋಲ್ಕತಾ ನಗರ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ. ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್‌ಗೆ ಹೊಸ ರೂಪ ನೀಡಲಾಗಿದ್ದು, ಮೊದಲ 4 ದಿನಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಗಂಗೂಲಿ ತಿಳಿಸಿದ್ದಾರೆ. ಪಂದ್ಯಕ್ಕಾಗಿ ವಿಶೇಷ ಮಾಸ್ಕಟ್‌ಗಳನ್ನು ಪರಿಚಯಿಸಲಾಗಿದೆ. ಭಾರತೀಯ ಸೇನೆಯ ಪ್ಯಾರಾ ಟ್ರೂಪರ್‌ಗಳು ಆಗಸದಿಂದ ಮೈದಾನಕ್ಕೆ ಜಿಗಿದ್ದು ಪಂದ್ಯದ ಚೆಂಡನ್ನು ನಾಯಕರಿಗೆ ಹಸ್ತಾಂತರಿಸಲಿದ್ದಾರೆ.
ಡೇ & ನೈಟ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಸಾಧಿಸುತ್ತಾ..?
ದಿಗ್ಗಜರ ದಂಡು: ಕ್ರೀಡಾ ಹಾಗೂ ರಾಜಕೀಯ ನಾಯಕರ ದಂಡೇ ಪಂದ್ಯ ವೀಕ್ಷಣೆಗೆ ಆಗಮಿಸಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಂಗಾಳ ರಾಜ್ಯಪಾಲ ಸಹ ಆಗಮಿಸುವ ನಿರೀಕ್ಷೆ ಇದೆ. ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಂದ್ಯ ಆರಂಭಕ್ಕೂ ಮುನ್ನ ಸಂಪ್ರದಾಯದಂತೆ ಗಂಟೆ ಬಾರಿಸಲಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶ ನಡುವೆ 2000ರಲ್ಲಿ ನಡೆದಿದ್ದ ಚೊಚ್ಚಲ ಟೆಸ್ಟ್‌ನಲ್ಲಿ ಆಡಿದ್ದ ಉಭಯ ತಂಡಗಳ ಆಟಗಾರರನ್ನು ಆಹ್ವಾನಿಸಲಾಗಿದ್ದು, ಅವರನ್ನು ಸನ್ಮಾನಿಸಲಾಗುತ್ತದೆ. ಭಾರತದ ಕೆಲ ಪ್ರಮುಖ ಒಲಿಂಪಿಕ್ ಪದಕ ವಿಜೇತರಿಗೂ ಸನ್ಮಾನ ಕಾರ್ಯ ಹಮ್ಮಿಕೊಳ್ಳಲಾಗಿದೆ.
ರೋಚಕ ಕ್ರಿಕೆಟ್ ಜತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ ಎಂದು ಸಿಎಬಿ ಮಾಹಿತಿ ನೀಡಿದೆ.
ಪಿಂಕ್ ಬಾಲ್ ಬಳಕೆ ಶುರುವಾಗಿದ್ದು ಹೇಗೆ?
ಟೆಸ್ಟ್ ಕ್ರಿಕೆಟ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸಲು ಹಗಲು-ರಾತ್ರಿ ಪಂದ್ಯವನ್ನು ಆಯೋಜಿಸಲು ನಿರ್ಧರಿಸಿದಾಗ ಕೆಂಪು ಚೆಂಡಿನ ಬಳಕೆ ಕಷ್ಟ ಎನ್ನುವ ಅಭಿಪ್ರಾಯಗಳು ಮೂಡಿದವು. ಹೀಗಾಗಿ ಚೆಂಡು ತಯಾರಕ ಸಂಸ್ಥೆಗಳು ಹಳದಿ, ಕಿತ್ತಳೆ ಬಣ್ಣದ ಚೆಂಡುಗಳನ್ನು ಪರಿಚಯಿಸಿದವು. ಆದರೆ ಪಿಚ್ ಕಂದು ಬಣ್ಣವಿರುವ ಕಾರಣ, ಚೆಂಡು ಸರಿಯಾಗಿ ಕಾಣುವುದಿಲ್ಲ ಎಂದು ಬ್ಯಾಟ್ಸ್‌ಮನ್‌ಗಳು ಹೇಳಿದ್ದರಿಂದ, ಕೊನೆಗೆ ಗುಲಾಬಿ (ಪಿಂಕ್) ಬಣ್ಣದ ಚೆಂಡನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಚೆಂಡಿನ ಮೇಲಿನ ಸೀಮ್ (ದಾರ) ಮೊದಲು ಹಸಿರು ಬಣ್ಣದಲ್ಲಿತ್ತು. ಬಳಿಕ ಬಿಳಿಗೆ ಬದಲಿಸಲಾಯಿತು. ಆಟಗಾರರ ಸಲಹೆ ಮೇರೆಗೆ ಈಗ ಕಪ್ಪು ಬಣ್ಣದ ದಾರವನ್ನು ಬಳಕೆ ಮಾಡಲಾಗುತ್ತಿದೆ.
ಮೊದಲ ಪಿಂಕ್ ಬಾಲ್ ಟೆಸ್ಟ್ ನಡೆದಿದ್ದ 2015ರಲ್ಲಿ
ಗಯಾನ ಹಾಗೂ ಟ್ರಿನಿಡಾಡ್ ನಡುವೆ ಮೊದಲ ಹಗಲು-ರಾತ್ರಿ ಪ್ರಥಮ ದರ್ಜೆ ಪಂದ್ಯ ನಡೆದಿತ್ತು. 2010ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತನ್ನ ದೇಸಿ ಋುತುವನ್ನು ಅಬುಧಾಬಿಯಲ್ಲಿ ಹಗಲು-ರಾತ್ರಿ ಮಾದರಿಯಲ್ಲಿ ನಡೆಸಿತ್ತು. ಮೊದಲ ಅಂತಾರಾಷ್ಟ್ರೀಯ ಹಗಲು-ರಾತ್ರಿ ಟೆಸ್ಟ್ ನಡೆದಿದ್ದು 2015ರ ನವೆಂಬರ್‌ನಲ್ಲಿ. ಆಸ್ಪ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ನಡೆದಿತ್ತು. ಆ ಪಂದ್ಯವನ್ನು ಆಸ್ಪ್ರೇಲಿಯಾ 3 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಈ ವರೆಗೂ ಒಟ್ಟು 11 ಪಂದ್ಯಗಳು ನಡೆದಿವೆ. ಯಾವ ಪಂದ್ಯವೂ ಡ್ರಾಗೊಂಡಿಲ್ಲ. ಆಸ್ಪ್ರೇಲಿಯಾ ಅತಿಹೆಚ್ಚು ಎಂದರೆ 5 ಹಗಲು-ರಾತ್ರಿ ಟೆಸ್ಟ್‌ಗಳನ್ನು ಆಡಿದೆ. 5ರಲ್ಲೂ ಗೆಲುವು ಸಾಧಿಸಿದೆ. ಭಾರತ, ಬಾಂಗ್ಲಾ
ಹೊರತು ಪಡಿಸಿ ಟೆಸ್ಟ್ ಆಡುವ ಎಲ್ಲಾ ಪ್ರಮುಖ ರಾಷ್ಟ್ರಗಳು ಈಗಾಗಲೇ ಹಗಲು-ರಾತ್ರಿ ಪಂದ್ಯವನ್ನಾಡಿವೆ. 2019ರ ಡಿಸೆಂಬರ್‌ನಲ್ಲಿ ಆಸ್ಪ್ರೇಲಿಯಾ ತಂಡ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಪಿಂಕ್ ಬಾಲ್ ಪಂದ್ಯವನ್ನು ಆಡಲಿದೆ.
ಇಷ್ಟು ದಿನ ಭಾರತ ಏಕೆ ಒಪ್ಪಿರಲಿಲ್ಲ?
ಭಾರತೀಯರು ಪಿಂಕ್ ಬಾಲ್ ಟೆಸ್ಟ್ ಅನ್ನು ವಿರೋಧಿಸಲು ಹಲವು ಕಾರಣಗಳಿವೆ. ಚೆಂಡಿನ ಗೋಚರತೆಯಲ್ಲಿ ಸಮಸ್ಯೆಗಳಿದ್ದವು. 2016ರ ದುಲೀಪ್ ಟ್ರೋಫಿಯಲ್ಲಿ ಆಡಿದ್ದ ಪೂಜಾರ, ಮಯಾಂಕ್ ಸೇರಿದಂತೆ ಅನೇಕ ಆಟಗಾರರು ಧನಾತ್ಮಕ ಪ್ರತಿಕ್ರಿಯೆ ನೀಡಿರಲಿಲ್ಲ. ಚೆಂಡು ವೇಗಿಗಳಿಗೆ ಯಾವುದೇ ರೀತಿಯಲ್ಲಿ ಸಹಕಾರ ಕೊಟ್ಟಿರಲಿಲ್ಲ. ಆರಂಭಿಕ 20 ಓವರ್‌ಗಳ ಬಳಿಕ ಚೆಂಡಿನ ಆಕಾರ ಗಣನೀಯ ಪ್ರಮಾಣದಲ್ಲಿ ಬದಲಾಗಿತ್ತು. ರಿವರ್ಸ್ ಸ್ವಿಂಗ್ ಸಾಧ್ಯವಾಗಿರಲಿಲ್ಲ. ಚೆಂಡು ಬಣ್ಣ ಬಿಡಲಿದ್ದು, ಬೆಳಕಿನಲ್ಲಿ ಸರಿಯಾಗಿ ಕಾಣುವುದಿಲ್ಲ ಎಂದು ಆಟಗಾರರು ತಿಳಿಸಿದ್ದರು. ಹೀಗಾಗಿ ಬಿಸಿಸಿಐ ಹಗಲು-ರಾತ್ರಿ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕಳೆದ ವರ್ಷ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ
ಕ್ರಿಕೆಟ್ ಆಸ್ಪ್ರೇಲಿಯಾದ ಮನವಿಯನ್ನು ಬಿಸಿಸಿಐ ಒಪ್ಪಿರಲಿಲ್ಲ.
ಭಾರತದಲ್ಲಿ ಪಿಂಕ್ ಬಾಲ್ ಟೆಸ್ಟ್‌ಗೆ ದಾದಾ ಸೂತ್ರಧಾರ!
ಭಾರತದಲ್ಲಿ ಮೊದಲ ಪಿಂಕ್ ಬಾಲ್ ಟೆಸ್ಟ್ ಆಯೋಜಿಸುವಲ್ಲಿ ಗಂಗೂಲಿ ಪಾತ್ರ ಮಹತ್ವದೆನಿಸಿದೆ. 2016ರಲ್ಲಿ ಅವರು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷರಾಗಿದ್ದಾಗ ಮೋಹನ್ ಬಗಾನ್ ಹಾಗೂ ಭೋವಾನಿಪೋರ್ ತಂಡಗಳ ನಡುವಿನ ಸಿಎಬಿ ಸೂಪರ್ ಲೀಗ್ ಫೈನಲ್ ಪಂದ್ಯಕ್ಕೆ ಪಿಂಕ್ ಬಾಲ್ ಬಳಕೆಯಾಗಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ಆಟಗಾರರಾದ ವೃದ್ಧಿಮಾನ್ ಸಾಹ ಹಾಗೂ ಮೊಹಮದ್ ಶಮಿ ಆಡಿದ್ದರು. ಈ ಇಬ್ಬರೂ ಭಾರತ ತಂಡದ ಚೊಚ್ಚಲ ಪಿಂಕ್ ಬಾಲ್ ಪಂದ್ಯದಲ್ಲೂ ಆಡಲಿದ್ದಾರೆ. ಅದೇ ವರ್ಷ ಬಿಸಿಸಿಐ, ದುಲೀಪ್ ಟ್ರೋಫಿಯನ್ನು ಹಗಲು-ರಾತ್ರಿ ಮಾದರಿಯಲ್ಲಿ ನಡೆಸಿತ್ತು. ಗಂಗೂಲಿ ಬಿಸಿಸಿಐ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿದ್ದಾಗ ಈ ಪ್ರಸ್ತಾಪ ಮುಂದಿಟ್ಟಿದ್ದರು. ಪ್ರಸಾರ ಹಕ್ಕು
ಹೊಂದಿರುವ ವಾಹಿನಿ ನಿರಾಸಕ್ತಿ ತೋರಿದ್ದರಿಂದ ಹಾಗೂ ಚೆಂಡಿನ ಗುಣಮಟ್ಟದ ಬಗ್ಗೆ ಆಟಗಾರರು ಅಸಮಾಧಾನ ತೋರಿದ್ದರಿಂದ ಈ ವರ್ಷ ಪಿಂಕ್ ಬಾಲ್ ಪಂದ್ಯಗಳನ್ನು ಕೈಬಿಡಲಾಯಿತು. ಸದ್ಯ ಭಾರತ ತಂಡದಲ್ಲಿರುವ ಮಯಾಂಕ್ ಅಗರ್‌ವಾಲ್, ಆರ್.ಅಶ್ವಿನ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ ಪಿಂಕ್ ಬಾಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಕೋಲ್ಕತಾದಲ್ಲಿ ಪ್ರತಿ ವರ್ಷ ಹಗಲು-ರಾತ್ರಿ ಟೆಸ್ಟ್ ?
ಕ್ರಿಕೆಟ್ ಆಸ್ಪ್ರೇಲಿಯಾ ಆಯೋಜಿಸುವಂತೆ ಭಾರತದಲ್ಲೂ ಪ್ರತಿ ವರ್ಷ ಹಗಲು-ರಾತ್ರಿ ಟೆಸ್ಟ್ ನಡೆಸಬೇಕು ಎನ್ನುವುದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಕನಸಾಗಿದ್ದು, ಕೋಲ್ಕತಾವನ್ನೇ ಆತಿಥ್ಯ ತಾಣವಾಗಿ ನಿಗದಿಪಡಿಸಲು ಮುಂದಾಗಿದ್ದಾರೆ. ಆಸ್ಪ್ರೇಲಿಯಾ ತಂಡ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸಲು ಪಿಂಕ್ ಬಾಲ್ ಪಂದ್ಯವನ್ನು ಬಳಸಿಕೊಳ್ಳಲಿದೆ. ಅದೇ ರೀತಿ ಯಾವುದಾದರೂ ಸದುದ್ದೇಶದೊಂದಿಗೆ ಪಂದ್ಯ ನಡೆಸಲು ಚಿಂತನೆ ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.