ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 16ರಿಂದ ಆರಂಭ
ಭಾರತ-ಪಾಕಿಸ್ತಾನ ಮುಖಾಮುಖಿಗೆ ಕ್ಷಣಗಣನೆ
ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ರೋಹಿತ್ ಶರ್ಮಾ, ಬಾಬರ್ ಅಜಂ
ಮೆಲ್ಬೊರ್ನ್(ಅ.15): ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಚುಟುಕು ಕ್ರಿಕೆಟ್ ಮಹಾಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಎರಡು ತಂಡಗಳು ಮುಖಾಮುಖಿಯಾದಾಗ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಬೇರೆಯದ್ದೇ ರೀತಿಯ ಒತ್ತಡವನ್ನು ಅನುಭವಿಸುತ್ತಿರುತ್ತಾರೆ. ಆದರೆ ಪಂದ್ಯ ಮುಕ್ತಾಯದ ಬಳಿಕ ಉಭಯ ದೇಶಗಳ ಆಟಗಾರರು ಖುಷಿಯಿಂದ ನಗುನಗುತ್ತಾ ಮಾತನಾಡುವುದು, ಅಪ್ಪಿಕೊಳ್ಳುವುದನ್ನು ಕ್ರಿಕೆಟ್ ಅಭಿಮಾನಿಗಳು ನೋಡಿದ್ದಾರೆ.
ಆದರೆ ಭಾರತ ಹಾಗೂ ಪಾಕಿಸ್ತಾನದ ಆಟಗಾರರು ಮುಖಾಮುಖಿಯಾದಾಗ ಸಾಮಾನ್ಯವಾಗಿ ಏನೆಲ್ಲಾ ಮಾತನಾಡುತ್ತಾರೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಅಷ್ಟಕ್ಕೂ ಉಭಯ ತಂಡಗಳ ಆಟಗಾರರು ಏನು ಮಾತನಾಡುತ್ತಾರೆ? ಅವರೆಲ್ಲ ಪಂದ್ಯದ ಬಗ್ಗೆ, ಒತ್ತಡ ಬಗ್ಗೆಯೋ ಅಥವಾ ತಂತ್ರಗಾರಿಕೆ ಬಗ್ಗೆ ಮಾತನಾಡುತ್ತಾರೆಯೋ? ಅಥವಾ ಸುಮ್ಮನೆ ಜೋಕ್ ಮಾಡುತ್ತಾರ? ಹೀಗೆ ಹತ್ತು ಹಲವು ಕುತೂಹಲಗಳು ಕ್ರಿಕೆಟ್ ಅಭಿಮಾನಿಗಳ ಮನದಲ್ಲಿದೆ. ಈ ಎಲ್ಲಾ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
undefined
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ 16 ತಂಡದ ನಾಯಕರು ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗಿ:
2022ರ ಐಪಿಎಲ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ಈ ಪೈಕಿ 4 ತಂಡಗಳು ಅರ್ಹತಾ ಸುತ್ತಿನಲ್ಲೇ ಹೊರಬಿದ್ದರೆ, ಉಳಿದ 12 ತಂಡಗಳು ಸೂಪರ್ 12 ಹಂತಕ್ಕೆ ಲಗ್ಗೆಯಿಡಲಿವೆ. ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗಲೇ ಎಲ್ಲಾ 16 ತಂಡಗಳ ನಾಯಕರು ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಮೇಲಿನ ಪ್ರಶ್ನೆಗಳಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಪಾಕಿಸ್ತಾನದ ನಾಯಕ ಬಾಬರ್ ಅಜಂ ಇಂಟ್ರೆಸ್ಟಿಂಗ್ ಉತ್ತರ ನೀಡಿದ್ದಾರೆ.
ಈ ಬಗ್ಗೆ ಮೊದಲು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ನಾಯಕ ಬಾಬರ್ ಅಜಂ, ನಾನು ಭಾರತೀಯ ಕ್ರಿಕೆಟಿಗರನ್ನು ಅಥವಾ ರೋಹಿತ್ ಶರ್ಮಾ ಅವರನ್ನು ಭೇಟಿಯಾದಾಗ, ಏನಾದರೂ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಈ ಬಗ್ಗೆ ರೋಹಿತ್ ಶರ್ಮಾ, ನಾವು ಪಾಕ್ ಕ್ರಿಕೆಟಿಗರನ್ನು ಭೇಟಿಯಾದಾಗ ಪಂದ್ಯದ ಬಗ್ಗೆ ಮಾತನಾಡುವುದಿಲ್ಲ, ನಾವು ಎದುರಾಳಿ ಆಟಗಾರರ ಕುಶಲೋಪರಿ ವಿಚಾರಿಸುತ್ತೇವೆ ಹಾಗೂ ಜೋಕ್ ಮಾಡಿ ನಗೆಯಾಡುತ್ತೇವೆ ಎಂದು ಹೇಳಿದ್ದಾರೆ.
ಮೊದಲಿಗೆ ಮಾತನಾಡಿದ ಪಾಕ್ ನಾಯಕ ಬಾಬರ್ ಅಜಂ, ರೋಹಿತ್ ಶರ್ಮಾ ನನಗಿಂತ ಹಿರಿಯ ವ್ಯಕ್ತಿಯಾಗಿರುವುದರಿಂದ , ಅವರಿಂದ ಎಷ್ಟು ಸಾಧ್ಯವೋ ಅಷ್ಟು ಅನುಭವಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಯಾಕೆಂದರೆ ಅವರ ನನಗಿಂತ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ, ಅವರಿಂದ ಹೆಚ್ಚು ತಿಳಿದುಕೊಂಡಷ್ಟು, ನಾವು ಹೆಚ್ಚು ಉತ್ತಮವಾಗುತ್ತೇವೆ ಎಂದು ಹೇಳಿದ್ದಾರೆ.
T20 World Cup ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ಮಣಿಸಿ ತ್ರಿಕೋನ ಸರಣಿ ಗೆದ್ದ ಪಾಕಿಸ್ತಾನ..!
ಇನ್ನು ಇದೇ ಪ್ರಶ್ನೆಗೆ ಉತ್ತರಿಸಿರುವ ರೋಹಿತ್ ಶರ್ಮಾ, ನಾವು ಯಾವಾಗೆಲ್ಲ ಪಾಕಿಸ್ತಾನದ ಆಟಗಾರರೊಂದಿಗೆ ಮುಖಾಮುಖಿಯಾಗುತ್ತೇವೆಯೋ ಆಗೆಲ್ಲಾ, ಯಾವುದೇ ಒತ್ತಡವಿರುವುದಿಲ್ಲ. ನಾವು ಕೆಲವು ದಿನಗಳ ಹಿಂದಷ್ಟೇ ಏಷ್ಯಾಕಪ್‌ನಲ್ಲಿ ಭೇಟಿಯಾಗಿದ್ದೆವು, ಮತ್ತೆ ಈಗ ಬೇಟಿಯಾಗಿತ್ತಿದ್ದೇವೆ. ನಾವು ಯಾವಾಗೆಲ್ಲ ಬೇಟಿಯಾಗುತ್ತೇವೆಯೋ ಆಗೆಲ್ಲಾ, ಮನೆಯ ಕಡೆ ಪರಿಸ್ಥಿತಿ ಹೇಗಿದೆ? ಕುಟುಂಬದಲ್ಲಿ ಎಲ್ಲವೂ ಸೌಖ್ಯವಾ?, ಹೊಸದಾಗಿ ಯಾವ ಕಾರು ಕೊಂಡುಕೊಂಡಿರಿ ಅಥವಾ ಕೊಂಡುಕೊಳ್ಳಬೇಕು ಎಂದಿದ್ದೀರ ಎಂದು ಈ ರೀತಿ ಲೋಕಾಭಿರಾಮ ಮಾತುಕತೆ ನಡೆಸುತ್ತೇವೆ. ಹೀಗೆಯೇ ಎದುರಾಳಿ ತಂಡದ ಆಟಗಾರರ ಜತೆ ಮಾತನಾಡಬೇಕು ಎನ್ನುವುದನ್ನು ನಮ್ಮ ಹಿರಿಯರು ಹೇಳಿಕೊಟ್ಟಿದ್ದಾರೆ. ನಾವು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.