T2o World Cup: ಈ 10 ದಿಗ್ಗಜರಿಗೆ ಇದಾಗಬಹುದು ಕೊನೆಯ ಟಿ20 ವಿಶ್ವಕಪ್‌, ಯಾರೆಲ್ಲಾ ಇದ್ದಾರೆ ಲಿಸ್ಟ್‌ನಲ್ಲಿ?

By Santosh Naik  |  First Published Oct 15, 2022, 1:42 PM IST

ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಕೂಡ ಈ ಟೂರ್ನಿಯನ್ನು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಟೂರ್ನಿ ಬಹುತೇಕ ದಿಗ್ಗಜ ಆಟಗಾರರಿಗೆ ಕೊನೆಯ ಟಿ20 ವಿಶ್ವಕಪ್‌ ಟೂರ್ನಿಯಾಗಿರುವ ಸಾಧ್ಯತೆ ಇದೆ.
 


ಬೆಂಗಳೂರು (ಅ.15): ಆಸ್ಟ್ರೇಲಿಯಾ ಆತಿಥ್ಯದಲ್ಲಿ ಅಕ್ಟೋಬರ್‌ 16 ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ ಟೂರ್ನಿಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವದ 16 ದೇಶಗಳ ಕ್ರಿಕೆಟ್‌ ಸ್ಟಾರ್‌ಗಳ ಪ್ರತಿಷ್ಠಿತ ಟ್ರೋಫಿಗಾಗಿ ಹೋರಾಟ ನಡೆಸಲಿದ್ದಾರೆ. ಇದರಲ್ಲಿ ಕೆಲವು ದಿಗ್ಗಜ ಹಾಗೂ ಅನುಭವಿ ಕ್ರಿಕೆಟಿಗರು ಕೂಡ ಇದ್ದಾರೆ. ಅವರ ಪಾಲಿಗೆ ಈ ಟೂರ್ನಿ ಬಹುತೇಕ ಕೊನೆಯ ಟಿ20 ವಿಶ್ವಕಪ್‌ ಆಗಿರಲಿದೆ. ಅಂಥ 10 ಆಟಗಾರರ ಪಟ್ಟಿ ಇಲ್ಲಿದ್ದು, ಇದರಲ್ಲಿ ಕೆಲವು ಟೀಮ್‌ ಇಂಡಿಯಾ ಆಟಗಾರರು ಕೂಡ ಇದ್ದಾರೆ. ಇದರಲ್ಲಿ ನಾಲ್ವರು ಆಟಗಾರರು ಆಯಾ ತಂಡಗಳನ್ನು ವಿಶ್ವಕಪ್‌ ಟೂರ್ನಿಯಲ್ಲಿ ಮುನ್ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಇವರೆಲ್ಲರ ಪಾಲಿಗೆ ಈ ಟೂರ್ನಿಗೆ ಕೊನೆಯ ಟಿ20 ವಿಶ್ವಕಪ್‌ ಆಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ. ಇದರಲ್ಲಿ ಇರುವ ಆಟಗಾರರು ಮುಂಬರುವ ವಿಶ್ವಕಪ್‌ ಆಡಲೂಬಹುದು, ಆಡದೇ ಇರಬಹುದು. ಆದರೆ, ವಯಸ್ಸಿನ ಕಾರಣ ಹಾಗೂ ಹೆಚ್ಚುತ್ತಿರುವ ಕ್ರಿಕೆಟ್‌ ವೇಳಾಪಟ್ಟಿಯ ಕಾರಣದಿಂದಾಗಿ ಇವರಿಗೆ ಇದು ಕೊನೆಯ ಟಿ20 ವಿಶ್ವಕಪ್‌ ಎಂದು ಹೇಳಬಹುದಾಗಿದೆ. ಮುಂದಿನ ಟಿ20 ವಿಶ್ವಕಪ್‌ 2024ರಲ್ಲಿ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನ ಆತಿಥ್ಯದಲ್ಲಿ ನಡೆಯಲಿದ್ದು, ಆ ಟೂರ್ನಿಯಲ್ಲಿ 20 ದೇಶಗಳು ಸ್ಪರ್ಧೆ ಮಾಡಲಿವೆ.

10: ಸ್ಟೀವ್‌ ಸ್ಮಿತ್‌: ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಅವರ ಟಿ20 ಕ್ರಿಕೆಟ್‌ ಜೀವನ ನಿರೀಕ್ಷೆ ಮಾಡಿದಂತೆ ಸಾಗುತ್ತಿಲ್ಲ. ಕ್ರಿಕೆಟ್‌ನ ಪುಟ್ಟ ಮಾದರಿಯಲ್ಲಿ ಅವರು ನಿರೀಕ್ಷೆ ಮಾಡಿದಂತೆ ರನ್‌ಗಳು ಬರುತ್ತಿಲ್ಲ. 2021ರಲ್ಲಿ ಟಿ20 ಮಾದರಿಯಲ್ಲಿ ಅವರ ಸರಾಸರಿಸ 20, ಅಂದಾಜು 120 ಸ್ಟ್ರೈಕ್‌ ರೇಟ್‌ನಲ್ಲಿ ಅವರು ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಅದರೊಂದಿಗೆ ಅವರಿಗೆ ವಯಸ್ಸು ಕೂಡ ಆಗುತ್ತಿದೆ. ಪ್ರಸ್ತುತ 33 ವರ್ಷವಾಗಿದ್ದು, ಆಸ್ಟ್ರೇಲಿಯಾ ತಂಡ ಟಿ20 ಮಾದರಿಯಲ್ಲಿ ಹೆಚ್ಚಾಗಿ ಯುವ ಆಟಗಾರರತ್ತ ಗಮನ ನೀಡುತ್ತಿದೆ. ಹಾಗಾಗಿ ಇದು ಅವರಿಗೆ ಕೊನೆಯ ಟಿ20 ವಿಶ್ವಕಪ್‌ ಆಗಿರಬಹುದು.

Tap to resize

Latest Videos

undefined

9. ಶಕೀಬ್‌ ಅಲ್‌ ಹಸನ್‌: ಈ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡವನ್ನು 35 ವರ್ಷಕ್ಕೆ ಕಾಲಿಟ್ಟಿರುವ ಶಕೀಬ್ ಅಲ್ ಹಸನ್ ನಾಯಕತ್ವ ವಹಿಸಿದ್ದಾರೆ. ಇದು ಶಕೀಬ್ ಅವರ ಕೊನೆಯ ವಿಶ್ವಕಪ್ ಆಗಿರಬಹುದು. ಬಾಂಗ್ಲಾದೇಶ ಪರ 16 ವರ್ಷಗಳಿಂದ ಟಿ20 ಕ್ರಿಕೆಟ್ ಆಡುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಶಕೀಬ್ ನಾಯಕತ್ವದಲ್ಲಿ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ತಂಡ ಸೆಮಿಫೈನಲ್‌ಗೂ ತಲುಪಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರ ನಾಯಕತ್ವದಲ್ಲಿ, ತಂಡವು ವಿಶ್ವಕಪ್‌ನಲ್ಲಿ ಫಾರ್ಮ್‌ಗೆ ಮರಳಲು ಬಯಸಿದೆ. ತನ್ನ ಕೊನೆಯ ಟಿ20 ವಿಶ್ವಕಪ್ ರೀತಿಯಲ್ಲಿ ಪರಿಗಣಿಸುತ್ತಿರುವ ಶಕೀಬ್ ಕೂಡ ಅದನ್ನು ಸ್ಮರಣೀಯವಾಗಿಸಲು ಬಯಸುತ್ತಾರೆ.

8. ಡೇವಿಡ್‌ ಮಲಾನ್‌: ಇಂಗ್ಲೆಂಡ್‌ನ ಆರಂಭಿಕ ಆಟಗಾರ ಡೇವಿಡ್ ಮಲಾನ್ ಸದ್ಯಕ್ಕೆ ವಿಶ್ವದ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ಬ್ಯಾಟಿಂಗ್‌ನಿಂದ ಸಾಕಷ್ಟು ಗಮನಸೆಳೆದಿದ್ದಾರೆ. ಸರಣಿಯ ಎರಡನೇ ಟಿ20ಯಲ್ಲಿ ಅವರು 82 ರನ್‌ ಆಡಿದ್ದರು. ಈ ವಿಶ್ವಕಪ್‌ ಮಲಾನ್‌ಗೆ ಕೊನೆಯ ಟೂರ್ನಿಯಾಗಲು ದೊಡ್ಡ ಕಾರಣವೆಂದರೆ ಅವರ ವಯಸ್ಸು. ಮಲಾನ್ ಅವರಿಗೆ ಈಗ 35 ವರ್ಷ ಮತ್ತು ಮುಂದಿನ ವಿಶ್ವಕಪ್ ವೇಳೆಗೆ 37 ವರ್ಷ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಮುಂದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದ ಭಾಗವಾಗುವುದಿಲ್ಲ ಎಂದು ಖಚಿತವಾಗಿ ಹೇಳಬಹುದು.

7. ಮೊಹಮದ್‌ ನಬಿ: ಅಫ್ಘಾನಿಸ್ತಾನ ತಂಡದ ಆಫ್ ಸ್ಪಿನ್ ಬೌಲಿಂಗ್‌ ಆಲ್ರೌಂಡರ್‌ ಮತ್ತು ನಾಯಕ ಮೊಹಮ್ಮದ್ ನಬಿ ಜನವರಿ 1 ರಂದು 38 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇದು ಅವರ ಕೊನೆಯ ವಿಶ್ವಕಪ್ ಕೂಡ ಆಗಿದೆ. 2024ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದ್ದು, ಆಗ ನಬಿಗೆ 40 ವರ್ಷ ತುಂಬಲಿದೆ. ಅಂತಹ ಪರಿಸ್ಥಿತಿಯಲ್ಲಿ, 2022 ರ ಟಿ 20 ವಿಶ್ವಕಪ್ ಅನ್ನು ಸ್ಮರಣೀಯವಾಗಿಸಲು ನಬಿ ಬಯಸಿದ್ದಾರೆ.  ಏಷ್ಯಾಕಪ್‌ನಲ್ಲಿ ನಬಿ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡ ಅದ್ಭುತ ಪ್ರದರ್ಶನ ನೀಡಿತ್ತು.

6. ಮಾರ್ಟಿನ್‌ ಗುಪ್ಟಿಲ್‌: ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್‌ ಗುಪ್ಟಿಲ್‌ ಅವರ ಕೊನೆಯ ಟಿ20 ವಿಶ್ವಕಪ್‌ ಎಂದು ನಿಸ್ಸಂಶಯವಾಗಿ ಹೇಳಬಹುದು. 36 ವರ್ಷದ ಗುಪ್ಟಿಲ್‌ ಕಳೆದ ಕೆಲವು ಸರಣಿಗಳಿಂದ ತಂಡದಿಂದ ಹೊರಗಿದ್ದರು.  ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ತ್ರಿಕೋನ ಸರಣಿಯಲ್ಲಿ ಅವರು ತಂಡದ ಭಾಗವಾಗಿರಲಿಲ್ಲ.ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ ಆರಂಭಿಕರಾಗಿ ಆಡುತ್ತಿದ್ದರು. ಯುವ ಆಟಗಾರರಿಗೆ ನ್ಯೂಜಿಲೆಂಡ್‌ ಕ್ರಿಕೆಟ್‌ ಮಣೆ ಹಾಕುತ್ತಿದೆ. 2024ರ ವಿಶ್ವಕಪ್‌ ವೇಳೆಗೆ ಗುಪ್ಟಿಲ್‌ಗೆ 38 ವರ್ಷ ಆಗಿರಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಆಟಗಾರನಿಗೆ ಇದು ಕೊನೆಯ ವಿಶ್ವಕಪ್ ಕೂಡ ಆಗಬಹುದು.

5. ಆರನ್‌ ಫಿಂಚ್‌: ನವೆಂಬರ್‌ 17ಕ್ಕೆ ಆಸೀಸ್‌ ತಂಡದ ನಾಯಕ ಆರನ್‌ ಫಿಂಚ್‌ಗೆ 36 ವರ್ಷವಾಗಲಿದೆ. ಮುಂದಿನ ಟೂರ್ನಿಯ ವೇಳೆಗೆ 38 ವರ್ಷದವರಾಗಲಿರುವ ಅವರಿಗೆ ಇದು ಕೊನೆಯ ಟಿ20 ವಿಶ್ವಕಪ್‌ ಎಂದು ನಂಬಲಾಗಿದೆ. 2021ರಲ್ಲಿ ಅವರ ನೇತೃತ್ವದಲ್ಲಿಯೇ ಆಸ್ಟ್ರೇಲಿಯಾ ಚಾಂಪಿಯನ್‌ ಆಗಿತ್ತು. ಸತತ 2ನೇ ಟಿ20 ವಿಶ್ವಕಪ್‌ ಗೆಲ್ಲುವ ಗುರಿಯೊಂದಿಗೆ ಅವರು ಈ ಬಾರಿ ಕಣಕ್ಕಿಳಿಯಲಿದ್ದಾರೆ. ಅವನ ಫಾರ್ಮ್‌ ಕೂಡ ಕೈಕೊಟ್ಟಿದೆ. ಈ ವರ್ಷ ಅವರು T20 ಕ್ರಿಕೆಟ್‌ನಲ್ಲಿ 25 ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೇವಲ 122. ಇತ್ತೀಚೆಗೆ ಅವರು ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತರಾಗಿದ್ದಾರೆ.

4. ಡೇವಿಡ್‌ ವಾರ್ನರ್‌: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಗೆ 35 ವರ್ಷ. ಅಕ್ಟೋಬರ್ 27 ರಂದು ಅವರಿಗೆ 36 ವರ್ಷ ತುಂಬಲಿದೆ. ವಾರ್ನರ್ 13 ವರ್ಷಗಳಿಂದ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್ ಆಡುತ್ತಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಕೂಡ ಆಗಿದ್ದರು. ಅದೇ ಸಮಯದಲ್ಲಿ, ಮುಂದಿನ ವಿಶ್ವಕಪ್ ವೇಳೆಗೆ, ಅವರು 38 ವರ್ಷವಾಗಿರುತ್ತದೆ. ಕ್ಯಾಮರೂನ್‌ ಗ್ರೀನ್‌ರಂಥ ಯುವ ಆರಂಭಿಕ ಆಟಗಾರ ತಂಡದಲ್ಲಿ ಇರುವಾಗ ಬಹುಶಃ ವಾರ್ನರ್‌ಗೆ ಇದು ಕೊನೆಯ ಟಿ20 ವಿಶ್ವಕಪ್‌ ಆಗಬಹುದು ಎನ್ನಲಾಗಿದೆ.

3. ದಿನೇಶ್‌ ಕಾರ್ತಿಕ್‌: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಐಪಿಎಲ್ 2022 ರಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ಅವರಿಗೆ ಟೀಮ್ ಇಂಡಿಯಾದಲ್ಲಿ (team India) ಅವಕಾಶ ಸಿಕ್ಕಿದೆ. ಕಾರ್ತಿಕ್ ಅವರಿಗೆ ಈಗ 37 ವರ್ಷ ಮತ್ತು 2024 ರ ವಿಶ್ವಕಪ್ ವೇಳೆಗೆ ಅವರಿಗೆ 39 ವರ್ಷ ಆಗಿರಲಿದೆ. ಭಾರತ ತಂಡದಲ್ಲಿ ರಿಷಭ್ ಪಂತ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಹಾಗಾಗಿ ಮುಂದಿನ ವಿಶ್ವಕಪ್‌ ವೇಳೆಗೆ ಕಾರ್ತಿಕ್‌ ಅಡೋದು ಡೌಟ್‌.

ASIA CUP ಮುಂದಿನ ವರ್ಷ ಪಾಕ್‌ಗೆ ಭಾರತ ಪ್ರವಾಸ?

2. ರೋಹಿತ್‌ ಶರ್ಮ: ಟೀಮ್‌ ಇಂಡಿಯಾ ಕ್ಯಾಪ್ಟನ್‌ ರೋಹಿತ್‌ ಶರ್ಮಗೆ (Rohit Sharma) 36 ವರ್ಷವಾಗಿದೆ. ಮುಂದಿನ ವಿಶ್ವಕಪ್‌ (2024 T20 World Cup) ವೇಳೆಗೆ ಅವರಿಗೆ 38 ವರ್ಷ ಆಗಿರಲಿದೆ. ಕೆಟ್ಟ ಫಿಟ್‌ನೆಸ್‌ ಹಾಗೂ ವಿಶ್ರಾಂತಿಯ ಕಾರಣದಿಂದಾಗಿ ಟಿ20 ಮಾದರಿಯಲ್ಲಿ ಅವರು ಆಡುವುದು ಅನುಮಾನವಾಗಿದೆ. ಕಳೆದ 1 ವರ್ಷದಲ್ಲಿ ಆಡದ 59 ಅಂತಾರಾಷ್ಟ್ರೀಯ ಪಂದ್ಯಗಳ ಪೈಕಿ 25 ಮ್ಯಾಚ್‌ ಆಡಿಲ್ಲ. ಹಾಗಾಗಿ 38ನೇ ವರ್ಷದಲ್ಲಿ ಅವರು ಮೂರೂ ಮಾದರಿಯಲ್ಲಿ ಆಡುವುದು ಅನುಮಾನ. 

T20 World Cup 2022: 6 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡೌಟ್..!

1. ವಿರಾಟ್‌ ಕೊಹ್ಲಿ: 34 ವರ್ಷದ ವಿರಾಟ್‌ ಕೊಹ್ಲಿ (Virat Kohli) ಮುಂದಿನ ಟಿ20 ವಿಶ್ವಕಪ್‌ ವೇಳೆಗೆ 36 ವರ್ಷದ ಪ್ಲೇಯರ್‌ ಆಗಿರುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಅವರಿ ಟಿ20 ಫಾರ್ಮ್‌ ವಿಶೇಷವಾಗೇನೂ ಇಲ್ಲ. 36ನೇ ವರ್ಷದ ವೇಳೆಗೆ ಮೂರೂ ಮಾದರಿಯಲ್ಲಿ ಆಡುವುದು ಬಹುತೇಕ ಕಷ್ಟ. ಹಾಗಾಗಿ ಟಿ20ಗೆ ಅವರು ನಿವೃತ್ತಿ ಹೇಳಬಹುದು ಎನ್ನಲಾಗಿದೆ. ಇನ್ನು ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಹೆಚ್ಚಾಗಿ ಪ್ರಾಧಾನ್ಯತೆ ನೀಡುತ್ತಾರೆ.  ಕಲೆದ ಟಿ20 ವಿಶ್ವಕಪ್‌ ಬಳಿಕ ಭಾರತ ಆಡಿದ 35 ಟಿ20ಗಳ ಪೈಕಿ 21ರಲ್ಲಿ ಅವರು ಆಡಿಲ್ಲ. ಹಾಗಾಗಿ ಅವರು ಐಪಿಎಲ್‌ನಲ್ಲಿ ಮಾತ್ರ ಆಡುವುದನ್ನು ಮುಂದುವರಿಸಿ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಹೇಳಬಹುದು.

click me!