T20 World Cup: ಸೂಪರ್ 8 ಮೊದಲ ಪಂದ್ಯ- ಹರಿಣಗಳಿಗೆ ಆತಿಥೇಯ ಅಮೆರಿಕದ ಸವಾಲು..!

By Kannadaprabha NewsFirst Published Jun 19, 2024, 11:41 AM IST
Highlights

ಈ ವರೆಗಿನ ಬ್ಯಾಟಿಂಗ್‌ ಪ್ರದರ್ಶನ ತಂಡದ ಒಟ್ಟಾರೆ ಸಾಮರ್ಥ್ಯವನ್ನು ಅನುಮಾನಿಸಲು ದಾರಿ ಮಾಡಿಕೊಡುವುದಿಲ್ಲ, ಏಕೆಂದರೆ ತಂಡಕ್ಕೆ ವಿಶ್ವ ಶ್ರೇಷ್ಠ ಬ್ಯಾಟರ್‌ಗಳಾದ ಕ್ವಿಂಟನ್‌ ಡಿ ಕಾಕ್‌, ಹೈನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಏಡನ್‌ ಮಾರ್ಕ್‌ರಮ್‌ರ ಬಲವಿದ್ದು, ರೀಜಾ ಹೆಂಡ್ರಿಕ್ಸ್‌, ಟ್ರಿಸ್ಟನ್‌ ಸ್ಟಬ್ಸ್‌ರಂತಹ ಪ್ರತಿಭಾನ್ವಿತರನ್ನೂ ತಂಡ ಒಳಗೊಂಡಿದೆ. ಹೀಗಾಗಿ, ದಕ್ಷಿಣ ಆಫ್ರಿಕಾವನ್ನು ಯಾವುದೇ ಕಾರಣಕ್ಕೆ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

ನಾರ್ಥ್‌ಸೌಂಡ್‌: ಟಿ20 ವಿಶ್ವಕಪ್‌ನ ಸೂಪರ್‌-8 ಹಂತ ಬುಧವಾರದಿಂದ ಆರಂಭಗೊಳ್ಳಲಿದ್ದು, ಗುಂಪು-2ರ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಆತಿಥೇಯ ಅಮೆರಿಕದ ಸವಾಲು ಎದುರಾಗಲಿದೆ. ಬೌಲರ್‌ಗಳ ಸಾಹಸದಿಂದ ಗುಂಪು ಹಂತದಲ್ಲಿ ಅಜೇಯವಾಗಿ ಉಳಿದ ದಕ್ಷಿಣ ಆಫ್ರಿಕಾ, ಸೂಪರ್‌-8ನಲ್ಲಿ ತನ್ನ ಬ್ಯಾಟರ್‌ಗಳಿಂದಲೂ ಜವಾಬ್ದಾರಿಯುತ ಆಟ ನಿರೀಕ್ಷೆ ಮಾಡುತ್ತಿದೆ. ಹರಿಣ ಪಡೆ ನ್ಯೂಯಾರ್ಕ್‌ನ ಕಠಿಣ ಪಿಚ್‌ನಲ್ಲಿ 3 ಹಾಗೂ 1 ಪಂದ್ಯವನ್ನು ಕಿಂಗ್‌ಸ್ಟನ್‌ನಲ್ಲಿ ಆಡಿತು. ಯಾವುದೇ ಪಂದ್ಯದಲ್ಲಿ ತಂಡ 120 ರನ್‌ ದಾಟಲಿಲ್ಲ ಎನ್ನುವುದು ಆತಂಕಕಾರಿ ಸಂಗತಿ.

ಈ ವರೆಗಿನ ಬ್ಯಾಟಿಂಗ್‌ ಪ್ರದರ್ಶನ ತಂಡದ ಒಟ್ಟಾರೆ ಸಾಮರ್ಥ್ಯವನ್ನು ಅನುಮಾನಿಸಲು ದಾರಿ ಮಾಡಿಕೊಡುವುದಿಲ್ಲ, ಏಕೆಂದರೆ ತಂಡಕ್ಕೆ ವಿಶ್ವ ಶ್ರೇಷ್ಠ ಬ್ಯಾಟರ್‌ಗಳಾದ ಕ್ವಿಂಟನ್‌ ಡಿ ಕಾಕ್‌, ಹೈನ್ರಿಚ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಏಡನ್‌ ಮಾರ್ಕ್‌ರಮ್‌ರ ಬಲವಿದ್ದು, ರೀಜಾ ಹೆಂಡ್ರಿಕ್ಸ್‌, ಟ್ರಿಸ್ಟನ್‌ ಸ್ಟಬ್ಸ್‌ರಂತಹ ಪ್ರತಿಭಾನ್ವಿತರನ್ನೂ ತಂಡ ಒಳಗೊಂಡಿದೆ. ಹೀಗಾಗಿ, ದಕ್ಷಿಣ ಆಫ್ರಿಕಾವನ್ನು ಯಾವುದೇ ಕಾರಣಕ್ಕೆ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

Latest Videos

ಫಿನ್‌ಲ್ಯಾಂಡ್‌ ಅಥ್ಲೆಟಿಕ್ಸ್‌ ಕೂಟ: ಚಿನ್ನ ಗೆದ್ದ ಭಾರತದ ಜಾವೆಲಿನ್ ಹೀರೋ ನೀರಜ್‌ ಚೋಪ್ರಾ

ಹರಿಣ ಪಡೆ, ನೇಪಾಳ ವಿರುದ್ಧ 1 ರನ್‌ನಿಂದ ಜಯಿಸಿ, ಸೋಲಿನಿಂದ ಪಾರಾಗಿತ್ತು. ಸೂಪರ್‌-8 ಹಂತದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್‌ ಹಾಗೂ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಜೊತೆ ಸ್ಥಾನ ಪಡೆದಿರುವ ದ.ಆಫ್ರಿಕಾ, ಅಮೆರಿಕ ವಿರುದ್ಧ ಯಾವುದೇ ಎಡವಟ್ಟು ಆಗದಂತೆ ಎಚ್ಚರ ವಹಿಸಲು ಎದುರು ನೋಡುತ್ತಿದೆ. ಮಾರ್ಕ್‌ರಮ್‌ ಪಡೆ ದೊಡ್ಡ ಗೆಲುವಿನ ಮೂಲಕ ಉತ್ತಮ ನೆಟ್‌ ರನ್‌ರೇಟ್‌ ಸಂಪಾದಿಸುವುದರ ಕಡೆಗೂ ಗಮನ ನೀಡಲಿದೆ.

ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾಕ್ಕಿದ್ದ ಅತಿದೊಡ್ಡ ತಲೆನೋವು ಎಂದರೆ ಅದು ವೇಗಿ ಏನ್ರಿಕ್‌ ನೋಕಿಯರ ಕಳಪೆ ಫಾರ್ಮ್‌. ಆದರೆ, ವಿಶ್ವಕಪ್‌ನಲ್ಲಿ ನೋಕಿಯ ಪ್ರಚಂಡ ಫಾರ್ಮ್‌ನಲ್ಲಿದ್ದು, 9 ವಿಕೆಟ್‌ ಕಬಳಿಸಿದ್ದಾರೆ. ಓಟ್‌ನೀಲ್‌ ಬಾರ್ಟ್‌ಮನ್‌, ಕಗಿಸೋ ರಬಾಡ ಹಾಗೂ ಮಾರ್ಕೋ ಯಾನ್ಸನ್‌ ಸಹ ಅನನುಭವಿ ಅಮೆರಿಕನ್ನರ ಮೇಲೆ ಸವಾರಿ ಮಾಡಲು ಕಾಯುತ್ತಿದ್ದಾರೆ. ತಬ್ರೇಜ್‌ ಶಮ್ಸಿಯ 4 ಓವರ್‌ಗಳ ಸ್ಪೆಲ್‌, ಪಂದ್ಯದ ಫಲಿತಾಂಶ ನಿರ್ಧರಿಸಬಹುದು.

ಗೌತಮ್ ಗಂಭೀರ್‌ ಟೀಂ ಇಂಡಿಯಾ ಹೊಸ ಕೋಚ್‌: ಇಂದು ಅಧಿಕೃತ ಘೋಷಣೆ?

ಮತ್ತೊಂದೆಡೆ 8 ಭಾರತೀಯರು, ಇಬ್ಬರು ಪಾಕಿಸ್ತಾನಿಗಳು, ವೆಸ್ಟ್‌ಇಂಡೀಸ್‌, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ನೆದರ್‌ಲೆಂಡ್ಸ್‌ನ ತಲಾ ಒಬ್ಬ ಆಟಗಾರನನ್ನು ಹೊಂದಿರುವ ಅಮೆರಿಕ ತಂಡ, ಈ ವಿಶ್ವಕಪ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿ ಗಮನ ಸೆಳೆದಿದೆ.

ಗಾಯದಿಂದಾಗಿ ಕಳೆದೆರಡು ಪಂದ್ಯಗಳಿಗೆ ಲಭ್ಯರಾಗದ ನಾಯಕ ಮೋನಂಕ್‌ ಪಟೇಲ್‌ ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದ್ದು, ಭಾರತೀಯ ಮೂಲದ ವೇಗಿ ಸೌರಭ್‌ ನೇತ್ರವಾಲ್ಕರ್‌, ಆಲ್ರೌಂಡರ್‌ ಹರ್ಮೀತ್‌ ಸಿಂಗ್‌, ವಿಂಡೀಸ್‌ನ ಆ್ಯರೋನ್‌ ಸ್ಮಿತ್‌, ನ್ಯೂಜಿಲೆಂಡ್‌ನ ಕೋರಿ ಆ್ಯಂಡರ್‌ಸನ್‌ ಮೇಲೆ ತಂಡ ಹೆಚ್ಚು ಅವಲಂಬಿತಗೊಂಡಿದೆ.

ಪಾಕಿಸ್ತಾನವನ್ನು ಸೋಲಿಸಿ ಕ್ರಿಕೆಟ್‌ ಜಗತ್ತನ್ನು ಬೆರಗಾಗಿಸಿರುವ ಅಮೆರಿಕ ಮತ್ತೊಂದು ಅಚ್ಚರಿ ಫಲಿತಾಂಶಕ್ಕೆ ಸಾಕ್ಷಿಯಾಗಲು ಕಾತರಿಸುತ್ತಿದೆ. ಉಭಯ ತಂಡಗಳು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ.

ಸಂಭವನೀಯ ಆಟಗಾರರ ಪಟ್ಟಿ

ದಕ್ಷಿಣ ಆಫ್ರಿಕಾ: ಹೆಂಡ್ರಿಕ್ಸ್‌, ಡಿ ಕಾಕ್‌, ಮಾರ್ಕ್‌ರಮ್‌(ನಾಯಕ), ಕ್ಲಾಸೆನ್‌, ಮಿಲ್ಲರ್‌, ಸ್ಟಬ್ಸ್‌, ಯಾನ್ಸನ್‌, ರಬಾಡ, ನೋಕಿಯ, ಬಾರ್ಟ್‌ಮನ್‌, ಶಮ್ಸಿ.

ಅಮೆರಿಕ: ಮೋನಂಕ್‌(ನಾಯಕ), ಟೇಲರ್‌, ಗೌಸ್‌, ಜೋನ್ಸ್‌, ನಿತೀಶ್‌, ಆ್ಯಂಡರ್‌ಸನ್‌, ಹರ್ಮೀತ್‌, ಶ್ಯಾಡ್ಲಿ, ಜಸ್‌ದೀಪ್‌, ಸೌರಭ್‌, ಅಲಿ ಖಾನ್‌.

ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

click me!