T20 World Cup: ಅಕ್ಷರ್ ಪಟೇಲ್‌ ಬದಲಿಗೆ ಟೀಂ ಇಂಡಿಯಾಗೆ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಎಂಟ್ರಿ..!

By Suvarna NewsFirst Published Oct 14, 2021, 9:22 AM IST
Highlights

* ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ

* ಅಕ್ಷರ್ ಪಟೇಲ್ ಬದಲು ತಂಡ ಕೂಡಿಕೊಂಡ ಶಾರ್ದೂಲ್ ಠಾಕೂರ್

* ಮೀಸಲು ಆಟಗಾರನ ಸ್ಥಾನಕ್ಕೆ ಜಾರಿದ ಅಕ್ಷರ್ ಪಟೇಲ್

ನವದೆಹಲಿ(ಅ.14): ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup) ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ (Axar patel) ಬದಲಿಗೆ ಆಲ್ರೌಂಡರ್‌ ಶಾರ್ದೂಲ್‌ ಠಾಕೂರ್‌ಗೆ ಸ್ಥಾನ ನೀಡಲಾಗಿದೆ. ಕಳೆದ ತಿಂಗಳು ಪ್ರಕಟಿಸಿದ್ದ 15 ಸದಸ್ಯರ ತಂಡದಲ್ಲಿ ಅಕ್ಷರ್‌ ಸ್ಥಾನ ಪಡೆದಿದ್ದರು. ಶಾರ್ದೂಲ್‌ ಮೀಸಲು ಆಟಗಾರ ಪಟ್ಟಿಯಲ್ಲಿದ್ದರು.

ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಪರ ಆಡುತ್ತಿರುವ ಶಾರ್ದೂಲ್‌ ಠಾಕೂರ್ (Shardul Thakur) 18 ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದಾರೆ. ಅಲ್ಲದೇ ಅವರ ಬ್ಯಾಟಿಂಗ್‌ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ತಂಡದಲ್ಲಿ ಉಳಿದುಕೊಂಡರೂ, ಅವರು ಬೌಲಿಂಗ್‌ ಮಾಡುವ ಬಗ್ಗೆ ಇನ್ನೂ ಅನುಮಾನ ದೂರವಾಗಿಲ್ಲ. ಹೀಗಾಗಿ, ಶಾರ್ದೂಲ್‌ರನ್ನು ಪ್ರಧಾನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಯುಎಇ ಚರಣದ ಐಪಿಎಲ್‌ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ತೋರಿರುವ ಶಾರ್ದೂಲ್ ಠಾಕೂರ್ 13 ವಿಕೆಟ್ ಕಬಳಿಸುವ ಮೂಲಕ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ್ದಾರೆ.

T20 World Cup ಟೂರ್ನಿಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..!

ಈ ಮೊದಲು ಟಿ20 ವಿಶ್ವಕಪ್‌ ಟೂರ್ನಿಗೆ ಪ್ರಕಟಿಸಿದ್ದ 15 ಆಟಗಾರರ ಪಟ್ಟಿಯ ಜತಗೆ ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ದೀಪಕ್ ಚಹಾರ್ (Deepak Chahar) ಅವರನ್ನು ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಅಕ್ಷರ್ ಪಟೇಲ್‌ ಪಟೇಲ್‌ ಮೀಸಲು ಆಟಗಾರರ ಸ್ಥಾನಕ್ಕೆ ಜಾರಿದ್ದು, ಶಾರ್ದೂಲ್ ಠಾಕೂರ್ ಅಂತಿಮ 15 ಆಟಗಾರರ ಪಟ್ಟಿ ಸೇರ್ಪಡೆಯಾಗಿದ್ದಾರೆ.

ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 24ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.

T20 World Cup: ಟೀಂ ಇಂಡಿಯಾ ಮೆಂಟರಿಂಗ್‌ಗೆ 1 ರೂಪಾಯಿ ಚಾರ್ಜ್ ಮಾಡಿಲ್ಲ ಧೋನಿ!

ಹರ್ಷಲ್ ಪಟೇಲ್‌‌, ಕೆ. ಗೌತಮ್‌ ನೆಟ್‌ ಬೌಲರ್ಸ್‌: ವಿಶ್ವಕಪ್‌ ವೇಳೆ ತಂಡದ ಅಭ್ಯಾಸಕ್ಕೆ ನೆರವಾಗಲು ಬಿಸಿಸಿಐ 8 ನೆಟ್‌ ಬೌಲರ್‌ಗಳನ್ನು ಆಯ್ಕೆ ಮಾಡಿದೆ. ಆವೇಶ್‌ ಖಾನ್‌, ಉಮ್ರಾನ್‌ ಮಲಿಕ್‌, ಹರ್ಷಲ್‌ ಪಟೇಲ್‌, ಲುಕ್ಮನ್‌ ಮೆರಿವಾಲಾ, ವೆಂಕಟೇಶ್‌ ಅಯ್ಯರ್‌, ಕರ್ಣ್‌ ಶರ್ಮಾ, ಶಾಬಾಜ್‌ ಅಹ್ಮದ್‌ ಹಾಗೂ ಕೆ.ಗೌತಮ್‌ ಐಪಿಎಲ್‌ ಮುಕ್ತಾಯಗೊಂಡ ಬಳಿಕ ಟೀಂ ಇಂಡಿಯಾದ ಬಯೋ ಬಬಲ್‌ ಸೇರಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಅತ್ಯಾಕರ್ಷಕ ಪ್ರದರ್ಶನ ತೋರಿದರೂ ಯುಜುವೇಂದ್ರ ಚಹಲ್‌ಗೆ ನೆಟ್‌ ಬೌಲರ್‌ ಪಟ್ಟಿಯಲ್ಲೂ ಸ್ಥಾನ ಸಿಗದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ ಟೀಂ ಇಂಡಿಯಾ: 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಭಾರತ ಟಿ20 ವಿಶ್ವಕಪ್ ಗೆಲ್ಲಲು ವಿಫಲವಾಗಿದೆ. ಇದೀಗ ಬರೋಬ್ಬರಿ 5 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟೂರ್ನಿಯು ಆರಂಭವಾಗುತ್ತಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಎರಡನೇ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಲು ಎದುರು ನೋಡುತ್ತಿದೆ.
 

click me!