ಡಚ್ಚರನ್ನು ಬಗ್ಗುಬಡಿದ ಟೀಂ ಇಂಡಿಯಾ ಅಜೇಯವಾಗಿ ಸೂಪರ್-8ಗೆ ಲಗ್ಗೆ

Kannadaprabha News   | Kannada Prabha
Published : Feb 19, 2026, 06:27 AM IST
India vs  Netherlands T20 World Cup 2026

ಸಾರಾಂಶ

ಟಿ20 ವಿಶ್ವಕಪ್‌ನಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಭಾರತ 17 ರನ್‌ಗಳ ಜಯ ಸಾಧಿಸಿ, ಅಜೇಯವಾಗಿ ಸೂಪರ್‌-8 ಹಂತ ಪ್ರವೇಶಿಸಿತು. ಆರಂಭಿಕ ಕುಸಿತದ ಹೊರತಾಗಿಯೂ ಶಿವಂ ದುಬೆ ಅವರ 66 ರನ್‌ಗಳ ಸ್ಫೋಟಕ ಬ್ಯಾಟಿಂಗ್‌ನಿಂದ ಭಾರತ 193 ರನ್‌ ಗಳಿಸಿತು. ನೆದರ್‌ಲೆಂಡ್ಸ್‌  176 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಅಹಮದಾಬಾದ್‌: ಸತತ 2ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ವಿಶ್ವಾಸದೊಂದಿಗೆ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ, ಗುಂಪು ಹಂತದಲ್ಲಿ ಅಜೇಯವಾಗಿ ಉಳಿದಿದೆ. ತಂಡ ಬುಧವಾರ ನೆದರ್‌ಲೆಂಡ್ಸ್‌ ವಿರುದ್ಧ 17 ರನ್‌ಗಳಿಂದ ಜಯಭೇರಿ ಬಾರಿಸಿತು. ತಂಡದ ಬೌಲಿಂಗ್‌ ವಿಭಾಗಕ್ಕೆ ಸ್ಪರ್ಧೆ ಎದುರಾದರೂ, ಪಂದ್ಯ ಗೆಲ್ಲಲು ಸಫಲವಾದ ಭಾರತ ‘ಎ’ ಗುಂಪಿನಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಸೂಪರ್‌-8 ಪ್ರವೇಶಿಸಿತು. ನೆದರ್‌ಲೆಂಡ್ಸ್‌ 4 ಪಂದ್ಯಗಳ ಪೈಕಿ 3ರಲ್ಲಿ ಸೋಲುವುದರೊಂದಿಗೆ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿತು.

ಸೂಪರ್‌-8 ಹಂತದಲ್ಲಿ ರನ್‌ ರಕ್ಷಿಸಿಕೊಳ್ಳುವ ಸವಾಲಿಗೆ ಸಿದ್ಧವಾಗಬೇಕಿದ್ದ ಭಾರತ, ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆದರೆ ತಂಡಕ್ಕೆ ಸೂಕ್ತ ಆರಂಭ ಸಿಗಲಿಲ್ಲ. ಅಭಿಷೇಕ್‌ ಶರ್ಮಾ ಸತತ 3ನೇ ಪಂದ್ಯದಲ್ಲೂ ಸೊನ್ನೆ ಸುತ್ತಿದರು. ಇದರ ಹೊರತಾಗಿಯೂ ತಂಡ 6 ವಿಕೆಟ್‌ ನಷ್ಟದಲ್ಲಿ 193 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್‌ ಕೆಲ ಹೋರಾಟದ ಹೊರತಾಗಿಯೂ 7 ವಿಕೆಟ್‌ ನಷ್ಟದಲ್ಲಿ 176 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

 

ಕುಸಿತದ ಬಳಿಕ ಅಬ್ಬರ:

ಭಾರತ ರನ್‌ ಖಾತೆ ತೆರೆಯುವ ಮೊದಲೇ ವಿಕೆಟ್‌ ಕಳೆದುಕೊಂಡಿತು. ಇಶಾನ್‌ ಕಿಶನ್‌ 7 ಎಸೆತಕ್ಕೆ 18 ರನ್‌ ಸಿಡಿಸಿ ನಿರ್ಗಮಿಸಿದರು. ಈ ವೇಳೆ ತಿಲಕ್‌ ವರ್ಮಾ(31) ಹಾಗೂ ಸೂರ್ಯಕುಮಾರ್(34) ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಆದರೆ 9 ಓವರ್‌ಗಳಲ್ಲಿ ತಂಡದ ಮೊತ್ತ ಕೇವಲ 69 ಇತ್ತು. ಬಳಿಕ ತಂಡವನ್ನು ಮೇಲೆತ್ತಿದ್ದು ಶಿವಂ ದುಬೆ. ಅತ್ಯಾಕರ್ಷಕ ಹೊಡೆತಗಳ ಮೂಲಕ ರಂಜಿಸಿದ ದುಬೆ, ಅರ್ಧಶತಕವನ್ನೂ ಪೂರೈಸಿದರು. ಅವರು ಕೇವಲ 31 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 66 ರನ್‌ ಸಿಡಿಸಿ ತಂಡದ ಮೊತ್ತ 190ರ ಗಡಿ ದಾಟುವಂತೆ ಮಾಡಿದರು. ಹಾರ್ದಿಕ್‌ ಪಾಂಡ್ಯ 21 ಎಸೆತಕ್ಕೆ 30 ರನ್‌ ಕೊಡುಗೆ ನೀಡಿದರು.

ಹ್ಯಾಟ್ರಿಕ್‌ ಸೊನ್ನೆ ಸುತ್ತಿ ಅಭಿಷೇಕ್ ಕೆಟ್ಟ ದಾಖಲೆ!

ಅಭಿಷೇಕ್‌ ಈ ವಿಶ್ವಕಪ್‌ನಲ್ಲಿ ಆಡಿದ 3 ಪಂದ್ಯಗಳಲ್ಲೂ ಸೊನ್ನೆಗೆ ಔಟಾಗಿದ್ದಾರೆ. ಇದರೊಂದಿಗೆ, ಅಂತಾರಾಷ್ಟ್ರೀಯ ಟಿ20ಯಲ್ಲಿ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದವರ ಪಟ್ಟಿಯಲ್ಲಿ ಜಂಟಿ 2ನೇ ಸ್ಥಾನಕ್ಕೇರಿದ್ದಾರೆ. ಅವರು ಈ ವರ್ಷ 5 ಬಾರಿ ಸೊನ್ನೆಗೆ ಔಟಾಗಿದ್ದಾರೆ. ಪಾಕಿಸ್ತಾನದ ಸೈಮ್ ಅಯೂಬ್‌ 2025ರಲ್ಲಿ 6 ಬಾರಿ ರನ್‌ ಖಾತೆ ತೆರೆಯಲು ವಿಫಲರಾಗಿದ್ದರು. ಇನ್ನು, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಆಟಗಾರರ ಪಟ್ಟಿಯಲ್ಲಿ ಅಭಿಷೇಕ್‌ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಆಶಿಶ್‌ ನೆಹ್ರಾ, ವಿಂಡೀಸ್‌ನ ಆ್ಯಂಡ್ರೆ ಫ್ಲೆಚರ್, ಉಗಾಂಡದ ರೋಜರ್‌ ಮುಕಾಸ ಕೂಡಾ 3 ಬಾರಿ ಸೊನ್ನೆ ಸುತ್ತಿದ್ದಾರೆ.

ಹೋರಾಡಿ ಸೋತ ಡಚ್‌:

ಭಾರತದ ವಿಶ್ವಶ್ರೇಷ್ಠ ಬೌಲರ್‌ಗಳ ಮುಂದೆ ನೆದರ್‌ಲೆಂಡ್ಸ್‌ ಸುಲಭದಲ್ಲಿ ಮಣಿಯಲಿಲ್ಲ. ನಿಧಾನ ಆರಂಭ ಪಡೆದರೂ ತಂಡ ಹೋರಾಟ ಬಿಡಲಿಲ್ಲ. ಮೈಕಲ್‌ ಲೆವಿಟ್‌(24), ಮ್ಯಾಕ್ಸ್‌ ಒಡೌಡ್‌(20), ಬಸ್‌ ಡೆ ಲೀಡೆ(33), ಕಾಲಿನ್ ಆ್ಯಕರ್‌ಮನ್‌(23) ಅಲ್ಪ ಹೋರಾಟ ನಡೆಸಿ ನಿರ್ಗಮಿಸಿದರು. ಕೊನೆಯಲ್ಲಿ ಜ್ಯಾಕ್‌ ಲಯನ್‌ 16 ಎಸೆತಕ್ಕೆ 36, ನೋಹ್‌ ಕ್ರೋಸ್‌ 12 ಎಸೆತಕ್ಕೆ ಔಟಾಗದೆ 25 ರನ್‌ ಸಿಡಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ವರುಣ್‌ ಚಕ್ರವರ್ತಿ 3, ಶಿವಂ ದುಬೆ 2 ವಿಕೆಟ್‌ ಕಿತ್ತರು.

ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 193/6 (ಶಿವಂ ದುಬೆ 66, ಸೂರ್ಯಕುಮಾರ್‌ 34, ಹಾರ್ದಿಕ್‌ 30, ತಿಲಕ್‌ 31, ವ್ಯಾನ್‌ ಬೀಕ್‌ 3-56), ನೆದರ್‌ಲೆಂಡ್ಸ್‌ 20 ಓವರ್‌ಗಳಲ್ಲಿ 176/7 (ಲೀಡೆ 33, ಜ್ಯಾಕ್‌ 26, ಕ್ರೋಸ್‌ 25, ವರುಣ್‌ 3-14, ದುಬೆ 2-35)

ಪಂದ್ಯಶ್ರೇಷ್ಠ: ಶಿವಂ ದುಬೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zero. Zero. Zero.. ಬದಲಾಗದ ಅಭಿಷೇಕನ ಅದೃಷ್ಟ!
ವಿರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಯಾರು? ಅವರ ಬ್ಯುಸಿನೆಸ್ ಏನು ಗೊತ್ತಾ?