
ಕೊಲಂಬೊ: ಇಂದು ಪಾಕಿಸ್ತಾನ ತಂಡಕ್ಕೆ ಅಳಿವು-ಉಳಿವಿನ ಹೋರಾಟ. ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಸಲ್ಮಾನ್ ಅಲಿ ಆಘಾ ನೇತೃತ್ವದ ತಂಡ ಇಂದು ನಮೀಬಿಯಾ ವಿರುದ್ಧ ಗೆಲ್ಲಲೇಬೇಕಿದೆ. ಭಾರತ ವಿರುದ್ಧದ ಹೀನಾಯ ಸೋಲಿನಿಂದ ತೀವ್ರ ಒತ್ತಡದಲ್ಲಿರುವ ಪಾಕಿಸ್ತಾನ, ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಮೀಬಿಯಾವನ್ನು ಎದುರಿಸಲಿದೆ. ಭಾರತೀಯ ಕಾಲಮಾನ ಸಂಜೆ 3 ಗಂಟೆಗೆ ಈ ಪಂದ್ಯ ಶುರುವಾಗಲಿದೆ.
ಭಾರತದ ವಿರುದ್ಧ 61 ರನ್‌ಗಳ ಹೀನಾಯ ಸೋಲು ಪಾಕ್ ತಂಡದ ಆತ್ಮವಿಶ್ವಾಸವನ್ನು ಅಲುಗಾಡಿಸಿದೆ. ಏಷ್ಯಾಕಪ್ ಸೋಲಿನ ಬಳಿಕ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುವುದಾಗಿ ಹೇಳಿ ಬಂದಿದ್ದ ಪಾಕಿಸ್ತಾನ, ವಿಶ್ವಕಪ್‌ನಲ್ಲೂ ಭಾರತದೆದುರು ಮುಗ್ಗರಿಸಿದೆ. ಹೀಗಾಗಿ, ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಸೋಲಿಸಿದರೆ ಮಾತ್ರ ಸೂಪರ್ 8 ಕನಸು ನನಸಾಗಲಿದೆ. ತಂಡದ ಸೂಪರ್‌ಸ್ಟಾರ್ ಆಟಗಾರರಾದ ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಫಾರ್ಮ್‌ನಲ್ಲಿ ಇಲ್ಲದಿರುವುದು ಪಾಕಿಸ್ತಾನಕ್ಕೆ ದೊಡ್ಡ ತಲೆನೋವಾಗಿದೆ. ಸ್ಪಿನ್ನರ್‌ಗಳ ಎದುರು ಬಾಬರ್ ಮತ್ತೊಮ್ಮೆ ಪರದಾಡುತ್ತಿರುವುದು ಚಿಂತೆಗೆ ಕಾರಣವಾಗಿದೆ.
ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ಶಾಹೀನ್ ಅಫ್ರಿದಿ ದುಬಾರಿಯಾಗುತ್ತಿರುವುದು ಕೂಡ ತಂಡಕ್ಕೆ ಹೊಡೆತ ನೀಡಿದೆ. ಹೀಗಾಗಿ, ಇವರಿಬ್ಬರ ಸ್ಥಾನದ ಬಗ್ಗೆಯೇ ಈಗ ಪ್ರಶ್ನೆಗಳು ಎದ್ದಿವೆ. ಇಂದಿನ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರಿಗೂ ಪಾಕಿಸ್ತಾನ ವಿಶ್ರಾಂತಿ ನೀಡಲಿದೆ ಎಂಬ ವರದಿಗಳೂ ಇವೆ.
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ನಮೀಬಿಯಾ ತಂಡಕ್ಕೆ ಇದು ಪ್ರತಿಷ್ಠೆಯ ಪಂದ್ಯ. ಸತತ ಮೂರು ಸೋಲು ಕಂಡಿರುವ ಆ ತಂಡ, ಪಾಕಿಸ್ತಾನಕ್ಕೆ ಶಾಕ್ ನೀಡಿ ವಿಶ್ವಕಪ್‌ಗೆ ವಿದಾಯ ಹೇಳಲು ಪ್ರಯತ್ನಿಸಲಿದೆ. ಪಾಕಿಸ್ತಾನದ ಉಸ್ಮಾನ್ ತಾರಿಖ್ ಶೈಲಿಯಲ್ಲೇ ಬೌಲಿಂಗ್ ಮಾಡುವ ನಾಯಕ ಜೆರಾರ್ಡ್ ಎರಾಸ್ಮಸ್, ನಮೀಬಿಯಾ ತಂಡದ ಭರವಸೆಯಾಗಿದ್ದಾರೆ. ಇನ್ನೊಂದೆಡೆ, ಪಾಕಿಸ್ತಾನವು ನಮೀಬಿಯಾವನ್ನು ಸ್ಪಿನ್ ಬಲೆಗೆ ಬೀಳಿಸಲು ರಣತಂತ್ರ ಹೆಣೆಯುತ್ತಿದೆ
ಸಿಂಹಳೀಸ್ ಸ್ಪೋರ್ಟ್ಸ್ ಗ್ರೌಂಡ್‌ನ ಪಿಚ್, ಭಾರತ ವಿರುದ್ಧದ ಪಂದ್ಯದ ಪಿಚ್‌ಗಿಂತ ಭಿನ್ನವಾಗಿದ್ದು, ಬ್ಯಾಟಿಂಗ್‌ಗೆ ಹೆಚ್ಚು ನೆರವು ನೀಡಲಿದೆ. ಇದೇ ಮೈದಾನದಲ್ಲಿ ಐರ್ಲೆಂಡ್ ತಂಡ 235 ರನ್ ಗಳಿಸಿತ್ತು. ಬೌಂಡರಿಗಳು ಚಿಕ್ಕದಾಗಿರುವುದರಿಂದ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು. ಕೊಲಂಬೊದಲ್ಲಿ ಮೋಡ ಕವಿದ ವಾತಾವರಣವಿದ್ದು, ಪಂದ್ಯಕ್ಕೂ ಮುನ್ನ ತುಂತುರು ಮಳೆಯಾಗುವ ಸಾಧ್ಯತೆಯೂ ಇದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ, ಎರಡೂ ತಂಡಗಳು ಅಂಕಗಳನ್ನು ಹಂಚಿಕೊಳ್ಳಲಿವೆ. ಈ ಸನ್ನಿವೇಶದಲ್ಲಿ ಪಾಕಿಸ್ತಾನ ಐದು ಅಂಕಗಳೊಂದಿಗೆ ಅಮೆರಿಕವನ್ನು ಹಿಂದಿಕ್ಕಿ ಸೂಪರ್ 8 ಹಂತಕ್ಕೆ ಪ್ರವೇಶಿಸಲಿದೆ.
ಇನ್ನು ಸಲ್ಮಾನ್ ಅಲಿ ಅಘಾ ನೇತೃತ್ವದ ಪಾಕಿಸ್ತಾನ ತಂಡಕ್ಕಿದು ಒಂದು ರೀತಿ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿದೆ. 'ಎ' ಗುಂಪಿನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಇನ್ನೊಂದು ಮ್ಯಾಚ್ ಬಾಕಿ ಇರುವಂತೆಯೇ ಸೂಪರ್-8 ಹಂತಕ್ಕೆ ಅಧಿಕೃತ ಪ್ರವೇಶ ಪಡೆದಿದೆ. ಇನ್ನೊಂದಡೆ ಯುಎಸ್‌ಎ ತಂಡವು ಆಡಿದ 4 ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಎರಡು ಸೋಲು ಸಹಿತ 4 ಅಂಕಗಳೊಂದಿಗೆ ಸದ್ಯ ಎರಡನೇ ಎರಡನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲು ಕಂಡಿದೆ. ಪಾಕ್ ಬಳಿಯೂ 4 ಅಂಕಗಳಿದ್ದರೂ ನೆಟ್ ರನ್‌ರೇಟ್ ಪಾಕಿಸ್ತಾನಕ್ಕಿಂತ ಯುಎಸ್‌ಎ ತಂಡದ್ದು ಉತ್ತಮವಾಗಿದೆ. ಇಂದಿನ ಪಂದ್ಯದಲ್ಲಿ ಪಾಕ್ ಗೆದ್ದರೇ ಅಥವಾ ಮಳೆಯಿಂದ ಪಂದ್ಯ ರದ್ದಾಗಿ ಒಂದು ಅಂಕ ಗಳಿಸಿದರಷ್ಟೇ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ. ಇಲ್ಲದಿದ್ದರೇ ಪಾಕ್ ಅಭಿಯಾನ, ಆಸ್ಟ್ರೇಲಿಯಾದಂತೆ ಗ್ರೂಪ್ ಹಂತದಲ್ಲೇ ಕೊನೆಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.