ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ: ಪಾಕ್‌ ಕ್ರಿಕೆಟ್ ಮುಖ್ಯಸ್ಥ ಏಹ್ಸಾನ್ ಮಣಿ

By Suvarna NewsFirst Published Jun 5, 2021, 5:18 PM IST
Highlights

* ಟಿ20 ವಿಶ್ವಕಪ್ ಆಯೋಜನೆ ಭವಿಷ್ಯ ನುಡಿದ ಏಹ್ಸಾನ್ ಮಣಿ

* ಏಹ್ಸಾನ್ ಮಣಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ

* ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರವಾಗಲಿದೆ ಎಂದ ಮಣಿ

ಕರಾಚಿ(ಜೂ.05): ಭಾರತದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್‌(ಯುಎಇ)ಗೆ ಸ್ಥಳಾಂತರವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮುಖ್ಯಸ್ಥ ಏಹ್ಸಾನ್ ಮಣಿ ಭವಿಷ್ಯ ನುಡಿದಿದ್ದಾರೆ.

ಕಳೆದ ಮೇ.29ರಂದು ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯನ್ನು ಕರೆದಾಗ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಸಭೆಯಲ್ಲಿ ಐಸಿಸಿಗೆ ಬಿಸಿಸಿಐ ಒಂದು ತಿಂಗಳು ಹೆಚ್ಚುವರಿಯಾಗಿ ಕಾಲಾವಕಾಶ ನೀಡಬೇಕು ಎಂದು ಮನವಿ ಮನವಿ ಮಾಡಿಕೊಂಡಿತ್ತು. ಈ ಮನವಿಯನ್ನು ಐಸಿಸಿ ಕೂಡಾ ಪುರಸ್ಕರಿಸಿದೆ. ಇದೇ ಜೂನ್ 28ರೊಳಗಾಗಿ ಟಿ20 ವಿಶ್ವಕಪ್ ಆಯೋಜನೆಯ ಕುರಿತಂತೆ ಸ್ಪಷ್ಟ ನಿರ್ಧಾರ ತಿಳಿಸಲು ಬಿಸಿಸಿಐಗೆ ಐಸಿಸಿ ಸೂಚನೆ ನೀಡಿದೆ.

ಐಸಿಸಿ ಟಿ20 ವಿಶ್ವಕಪ್ ಆಯೋಜನೆ: ಜೂನ್‌ 28ರವರೆಗೆ ಗಡುವು ಪಡೆದ ಬಿಸಿಸಿಐ

ಭಾರತದಲ್ಲಿ ಕೋವಿಡ್ ಎರಡನೇ ಅಲೆ ಕೊಂಚ ಇಳಿಮುಖವಾಗುತ್ತಿದೆ. ಕೋವಿಡ್‌ ಕಾರಣದಿಂದಾಗಿಯೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಬಳಿಕ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಐಪಿಎಲ್ ಭಾಗ 2 ಟೂರ್ನಿಯನ್ನು ಯುಎಇನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಏಹ್ಸಾನ್ ಮಣಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಯುಎಇಗೆ ಸ್ಥಳಾಂತರವಾಗಲಿದೆ. ಈಗಾಗಲೇ ಬಿಸಿಸಿಐ 2021ರ ಐಪಿಎಲ್ ಟೂರ್ನಿಯನ್ನು ಬೇರೆ ದಾರಿಯಿಲ್ಲದೇ ಅನಿವಾರ್ಯವಾಗಿ ಯುಎಇಗೆ ಸ್ಥಳಾಂತರಿಸಿದೆ. ಅದೇ ರೀತಿ ಪಾಕಿಸ್ತಾನ ಕೂಡಾ ಪಿಎಸ್‌ಎಲ್ ಪಂದ್ಯಗಳನ್ನು ಅಬುಧಾಬಿಗೆ ಶಿಫ್ಟ್ ಮಾಡಿದೆ. ನಮ್ಮ ಮುಂದೆ ಎರಡು ಆಯ್ಕೆಗಳಿದ್ದವು, ಅದರಲ್ಲಿ ಒಂದು ಟೂರ್ನಿಯನ್ನು ರದ್ದು ಮಾಡಬೇಕು ಇಲ್ಲವೇ ಸ್ಥಳಾಂತರಿಸಬೇಕಿತ್ತು. ಹೀಗಾಗಿ ನಾವು ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನು ಅಬುಧಾಬಿಗೆ ಸ್ಥಳಾಂತರಿಸಿದ್ದೇವೆ ಎಂದು ಏಹ್ಸಾನ್ ಮಣಿ ತಿಳಿಸಿದ್ದಾರೆ.

click me!