ಮುಷ್ತಾಕ್‌ ಅಲಿ ಟ್ರೋಫಿ ಫೈನಲ್: ಕರ್ನಾಟಕಕ್ಕಿಂದು ತಮಿಳುನಾಡು ಚಾಲೆಂಜ್‌

By Web Desk  |  First Published Dec 1, 2019, 10:50 AM IST

ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಪಂದ್ಯದಲ್ಲಿಂದು ಪ್ರಶಸ್ತಿಗಾಗಿ ಹಾಲಿ ಚಾಂಪಿಯನ್ ಕರ್ನಾಟಕ ಹಾಗೂ ತಮಿಳು ನಾಡು ತಂಡಗಳು ಸೆಣಸಲಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..


ಸೂರತ್‌[ಡಿ.01]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿ ಅಂತಿಮ ಹಂತ ತಲುಪಿದೆ. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕಕ್ಕೆ, ಕಠಿಣ ಸವಾಲು ಎದುರಾಗಿದೆ. ಕರ್ನಾಟಕ, ತಮಿಳುನಾಡು ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ. ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಕರ್ನಾಟಕ ತಂಡ, ಸತತ 2ನೇ ಬಾರಿ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ. ಇಲ್ಲಿನ ಲಾಲ್‌ಭಾಯ್‌ ಕಂಟ್ರ್ಯಾಕ್ಟರ್‌ ಕ್ರೀಡಾಂಗಣದಲ್ಲಿ ತಮಿಳುನಾಡು ವಿರುದ್ಧ ಉತ್ತಮ ಪ್ರದರ್ಶನ ತೋರುವ ಲೆಕ್ಕಾಚಾರದಲ್ಲಿ ಮನೀಶ್‌ ಪಾಂಡೆ ಪಡೆ ಕಣಕ್ಕಿಳಿಯುತ್ತಿದೆ.

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ, ಹರ್ಯಾಣ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿತು. ದೇಶಿಯ ಕ್ರಿಕೆಟ್‌ ಟೂರ್ನಿಗಳಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿರುವ ಕರ್ನಾಟಕ ಇತ್ತೀಚೆಗಷ್ಟೇ ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲೂ ಫೈನಲ್‌ಗೇರಿ ತಮಿಳುನಾಡು ತಂಡವನ್ನು ಬಗ್ಗು ಬಡಿದು 4ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಇದೀಗ ರಾಷ್ಟ್ರೀಯ ಟಿ20 ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿಯಲ್ಲಿಯೂ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಪ್ರಶಸ್ತಿಗಾಗಿ ಸೆಣಸಲು ಸಜ್ಜಾಗಿವೆ.

Tap to resize

Latest Videos

ಮುಷ್ತಾಕ್ ಅಲಿ ಟ್ರೋಫಿ: ರಾಹುಲ್-ಪಡಿಕ್ಕಲ್ ಅಬ್ಬರ, ಫೈನಲ್ ಪ್ರವೇಶಿಸಿದ ಕರ್ನಾಟಕ

ಟೂರ್ನಿಯ ಸೂಪರ್‌ ಲೀಗ್‌ ಹಂತದಲ್ಲಿ ತಮಿಳುನಾಡು ವಿರುದ್ಧ 9 ವಿಕೆಟ್‌ಗಳ ಗೆಲುವು ಸಾಧಿಸಿರುವ ಕರ್ನಾಟಕ ಅತ್ಯದ್ಭುತ ಲಯದಲ್ಲಿದೆ. ಟೂರ್ನಿಯುದ್ದಕ್ಕೂ ಬಲಾಢ್ಯ ಬ್ಯಾಟಿಂಗ್‌ ಹಾಗೂ ಕರಾರುವಕ್‌ ಬೌಲಿಂಗ್‌ನಿಂದಾಗಿ ಮನೀಶ್‌ ಪಡೆ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಸೂಪರ್‌ ಲೀಗ್‌ ಹಂತದ ಸೋಲಿನ ಸೇಡನ್ನು ತೀರಿಸಿಕೊಳ್ಳವ ತವಕದಲ್ಲಿ ತಮಿಳುನಾಡು ತಂಡ ಇದ್ದರೇ, ಮತ್ತೊಂದು ಗೆಲುವು ಪಡೆದು ಟ್ರೋಫಿ ಎತ್ತಿಹಿಡಿಯುವ ಉತ್ಸಾಹದಲ್ಲಿ ಕರ್ನಾಟಕ ತಂಡವಿದೆ.

ಘಟಾ​ನು​ಘ​ಟಿ​ಗಳ ಮುಖಾ​ಮುಖಿ:

ಕರ್ನಾ​ಟಕ ತನ್ನ ತಾರಾ ಆಟ​ಗಾ​ರ​ರಾದ ಮನೀಶ್‌ ಪಾಂಡೆ, ಕೆ.ಎಲ್‌.ರಾ​ಹುಲ್‌, ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌ ಮೇಲೆ ಹೆಚ್ಚಿನ ನಿರೀಕ್ಷೆ ಇರಿ​ಸಿದೆ. ಯುವ ಬ್ಯಾಟ್ಸ್‌ಮನ್‌ ದೇವ​ದತ್‌ ಪಡಿ​ಕ್ಕಲ್‌ 11 ಪಂದ್ಯ​ಗ​ಳಲ್ಲಿ 1 ಶತಕ, 5 ಅರ್ಧ​ಶ​ತ​ಕದ ಸಹಿತ 548 ರನ್‌ ಕಲೆಹಾಕಿದ್ದು, ತಂಡದ ಬ್ಯಾಟಿಂಗ್‌ ಆಧಾ​ರ​ಸ್ತಂಭ ಎನಿ​ಸಿ​ದ್ದಾರೆ. ಪವನ್‌ ದೇಶ​ಪಾಂಡೆ, ಶ್ರೇಯಸ್‌ ಗೋಪಾಲ್‌, ಜೆ.ಸು​ಚಿತ್‌ ಅವರಂತಹ ಆಲ್ರೌಂಡರ್‌ಗಳ ಬಲ ತಂಡ​ಕ್ಕಿದೆ. ರೋನಿತ್‌ ಮೋರೆ, ಅಭಿ​ಮನ್ಯು ಮಿಥುನ್‌ರಂತಹ ಅನು​ಭವಿ ವೇಗಿ​ಗ​ಳಿದ್ದು, ಯುವ ಮಧ್ಯಮ ವೇಗಿ ವಿ.ಕೌ​ಶಿಕ್‌ ಭರ​ವಸೆ ಮೂಡಿ​ಸಿ​ದ್ದಾರೆ.

ಮುಷ್ತಾಕ್ ಅಲಿ ಟ್ರೋಫಿ: ಮಿಥುನ್ ಹ್ಯಾಟ್ರಿಕ್, ಆದರೂ ಕರ್ನಾಟಕಕ್ಕೆ ಕಠಿಣ ಗುರಿ

ಫೈನಲ್‌ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಭರ್ಜರಿ ಪೈಪೋಟಿ ಎದು​ರಾ​ಗುವ ನಿರೀಕ್ಷೆ ಇದೆ. ತಮಿ​ಳು​ನಾಡು ತಂಡದಲ್ಲಿ ಮುರಳಿ ವಿಜಯ್‌, ದಿನೇಶ್‌ ಕಾರ್ತಿಕ್‌, ವಿಜಯ್‌ ಶಂಕರ್‌, ವಾಷಿಂಗ್ಟನ್‌ ಸುಂದರ್‌, ರವಿಚಂದ್ರನ್‌ ಅಶ್ವಿನ್‌, ಬಾಬಾ ಅಪ​ರಾ​ಜಿತ್‌ರಂತ​ಹ ಅನು​ಭವಿ ಆಟ​ಗಾ​ರ​ರ ದೊಡ್ಡ ದಂಡೇ ಇದೆ. ತಮಿಳುನಾಡು ತಂಡ ಅತ್ಯು​ತ್ತಮ ಲಯ​ದ​ಲ್ಲಿದೆ. ಲೀಗ್‌ ಹಂತದ ‘ಬಿ’ ಗುಂಪಿನಲ್ಲಿ 5 ಗೆಲುವಿನೊಂದಿಗೆ 20 ಅಂಕಗಳಿಸಿ ತಮಿಳುನಾಡು ತಂಡ ಅಗ್ರಸ್ಥಾನಿಯಾಗಿ ಸೂಪರ್‌ ಲೀಗ್‌ ಪ್ರವೇಶಿಸಿತ್ತು. ಸೂಪರ್‌ ಲೀಗ್‌ನಲ್ಲಿ ಕೂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದ ತಮಿಳುನಾಡು 12 ಅಂಕಗಳಿಂದ ನೆಟ್‌ ರನ್‌ರೇಟ್‌ನಲ್ಲಿ ಕರ್ನಾಟಕವನ್ನು ಹಿಂದಿಕ್ಕಿ ಅಗ್ರ ಸ್ಥಾನ ಪಡೆದಿತ್ತು. ತಮಿಳುನಾಡು ತಂಡದ ಸ್ಪಿನ್ನರ್‌ ಸಾಯಿ ಕಿಶೋರ್‌, ಟೂರ್ನಿಯಲ್ಲಿ (20 ವಿಕೆಟ್‌) ಪಡೆದಿದ್ದು ಅತಿ ಹೆಚ್ಚು ವಿಕೆಟ್‌ ಕಿತ್ತ ಬೌಲರ್‌ ಎನಿಸಿದ್ದಾರೆ.

2 ತಿಂಗಳಲ್ಲಿ 2 ಬಾರಿ ಫೈನಲ್‌ಗೆ ಕರ್ನಾಟಕ-ತಮಿಳುನಾಡು:

ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಉತ್ತಮ ಲಯದಲ್ಲಿದ್ದು, ದೇಶಿಯ ಕ್ರಿಕೆಟ್‌ ಟೂರ್ನಿಯಲ್ಲಿ ಕಳೆದ 2 ತಿಂಗಳಲ್ಲಿ 2 ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಕಳೆದ ತಿಂಗಳು ಮುಕ್ತಾಯವಾಗಿದ್ದ ವಿಜಯ್‌ ಹಜಾರೆ ಏಕದಿನ ಟೂರ್ನಿಯ ಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಗೆಲುವು ಪಡೆದು ಚಾಂಪಿಯನ್‌ ಆಗಿದ್ದ ಕರ್ನಾಟಕ, ಭಾನುವಾರ ನಡೆಯಲಿರುವ ರಾಷ್ಟ್ರೀಯ ಟಿ20 ಟೂರ್ನಿಯ ಫೈನಲ್‌ನಲ್ಲಿ ಮತ್ತೆ ಕರ್ನಾಟಕದ ಸವಾಲನ್ನು ಎದುರಿಸಲು ಸಜ್ಜಾಗಿದೆ.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ ಸ್ಪೋರ್ಟ್ಸ್ 2
 

click me!