ಸೋತು ಸುಣ್ಣವಾದ ಪಾಕ್ ಗಾಯದ ಮೇಲೆ ಮತ್ತೆ ಬರೆ ಎಳೆದ ಸೂರ್ಯಕುಮಾರ್ ಯಾದವ್!

Published : Sep 30, 2025, 01:07 PM IST
Salman Agha and Suryakumar Yadav

ಸಾರಾಂಶ

ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ, ಪಹಲ್ಗಾಂ ದಾಳಿಯನ್ನು ಖಂಡಿಸಿ ಪಾಕ್ ಗೃಹ ಸಚಿವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಈ ನಡುವೆ, ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಪಂದ್ಯದ ಸಂಭಾವನೆಯನ್ನು ಸೇನೆ ಮತ್ತು ಸಂತ್ರಸ್ತರಿಗೆ ಅರ್ಪಿಸಿ ದೇಶಪ್ರೇಮ ಮೆರೆದಿದ್ದಾರೆ.

ಬೆಂಗಳೂರು: ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಬಗ್ಗುಬಡಿದ ಭಾರತ ತಂಡಕ್ಕೆ ಟ್ರೋಫಿ ಸಿಗಲಿಲ್ಲ, ಪಹಲ್ಗಾಂ ಉಗ್ರ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಗೃಹ ಸಚಿವರೂ ಆಗಿರುವ ಏಷ್ಯಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡ ನಿರಾಕರಿಸಿತು. ಭಾರತ ತಂಡ ತಮ್ಮಿಂದಲೇ ಟ್ರೋಫಿ ಪಡೆಯಬೇಕು ಎಂದು ಹಟ ಹಿಡಿದು ವೇದಿಕೆ ಮೇಲೆಯೇ ನಿಂತರು. ಭಾರತೀಯರು ಬರದೆ ಇದ್ದಾಗ ಕೊನೆಗೆ ಟ್ರೋಫಿಯನ್ನೇ ಹೊತ್ತೊಯ್ದರು. ಇದರಿಂದ ಮೈದಾನದಲ್ಲಿ, ಮೈದಾನದಾಚೆ ರಾತ್ರಿಯಿಡೀ ಭಾರೀ ಹೈಡ್ರಾಮಾ ನಡೆಯಿತು. ಇನ್ನು ಸೋಲಿನ ಶಾಕ್‌ನಲ್ಲಿರುವ ಪಾಕಿಸ್ತಾನಕ್ಕೆ ಟೀಂ ಇಂಡಿಯಾ ನಾಯಕ ತಮ್ಮ ಸ್ಪಷ್ಟ ಸಂದೇಶದ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಇದು ಭಾರತೀಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಸೇನೆ, ಪಹಲ್ಗಾಂ ಸಂತ್ರಸ್ತರಿಗೆ ₹28 ಲಕ್ಷ ಸಂಭಾವನೆ ಅರ್ಪಿಸಿದ ಸೂರ್ಯ

ಭಾರತದ ನಾಯಕ ಸೂರ್ಯಕುಮಾರ್ ಯಾದವ್‌‌ ಅವರು ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಆಡಿದ ಎಲ್ಲಾ 7 ಪಂದ್ಯಗಳ ಮೂಲಕ ಗಳಿಸಿದ ಒಟ್ಟು ಸಂಭಾವನೆಯನ್ನು ಭಾರತೀಯ ಸೇನೆ ಹಾಗೂ ಪಹಲ್ಗಾಂ ಸಂತ್ರಸ್ತರಿಗೆ ಅರ್ಪಿಸಿದ್ದಾರೆ. 

ಭಾರತೀಯ ಆಟಗಾರರು ಆಡುವ ಪ್ರತಿ ಅಂ.ರಾ. ಟಿ20 ಪಂದ್ಯಕ್ಕೆ ಬಿಸಿಸಿಐ ₹4 ಲಕ್ಷ ಸಂಭಾವನೆ ನೀಡಲಿದೆ. ಅಂದರೆ 7 ಪಂದ್ಯಗಳಲ್ಲಿ ಸೂರ್ಯಗೆ ₹28 ಲಕ್ಷ ಸಂಭಾವನೆ ದೊರೆಯಲಿದೆ. 'ಏಷ್ಯಾಕಪ್‌ ಟೂರ್ನಿಯ ನನ್ನ ಸಂಭಾವನೆ ಯನ್ನು ಭಾರತೀಯ ಸೇನೆ, ಪಹಲ್ಗಾಂ ಸಂತ್ರಸ್ತರಿಗೆ ಅರ್ಪಿಸಲು ನಿರ್ಧರಿಸಿದ್ದೇನೆ. ಜೈ ಹಿಂದ್' ಎಂದು ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ.

ದೇಶದ ನಾಯಕರೇ ಫ್ರಂಟ್‌ಫುಟ್‌ನಲ್ಲಿ ಆಡ್ತಿದ್ದಾರೆ: ಮೋದಿ ಬಗ್ಗೆ ಸೂರ್ಯ ಹರ್ಷ

ಏಷ್ಯಾಕಪ್ ಗೆಲುವಿನ ಬಳಿಕ ಆಪರೇಷನ್ ಸಿಂದೂರ ಉಲ್ಲೇಖಿಸಿ ಟ್ವಿಟ್ ಮಾಡಿದ್ದ ಪ್ರಧಾನಿ ಮೋದಿ ಬಗ್ಗೆ ಭಾರತದ ನಾಯಕ ಸೂರ್ಯಕುಮಾರ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮವೊಂದರ ಜೊತೆ ಮಾತನಾಡಿದ ಸೂರ್ಯ, 'ದೇಶದ ನಾಯಕರೇ ಫ್ರಂಟ್‌ಫುಟ್ ನಲ್ಲಿ ಬ್ಯಾಟಿಂಗ್ ಮಾಡುವುದು ನೋಡಿ ಖುಷಿಯಾಗಿದೆ. ಅವರೇ ಸ್ಟ್ರೈಕ್ ತೆಗೆದುಕೊಂಡು ರನ್ ಗಳಿಸುತ್ತಿರುವಂತೆ ಭಾಸವಾಗುತ್ತಿದೆ. ಸ‌ರ್‌ ಮುಂದೆ ನಿಂತಾಗ, ಖಂಡಿತವಾಗಿಯೂ ಇತರ ಆಟಗಾರರು ಮುಕ್ತವಾಗಿ ಆಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ದೇಶ ಏಷ್ಯಾಕಪ್ ಗೆಲುವಿನ ಸಂಭ್ರಮದಲ್ಲಿದೆ. ಇದನ್ನು ನೋಡುವಾಗ ನಮಗೆ ಹೆಚ್ಚಿನ ಸ್ಫೂರ್ತಿ, ಪ್ರೇರಣೆ ಸಿಗುತ್ತದೆ' ಎಂದಿದ್ದಾರೆ.

ಗೆದ್ದ ತಂಡಕ್ಕೆ ಕಪ್ ಕೊಡದಿರುವ ಘಟನೆ ನೋಡೇ ಇಲ್ಲ: ಸೂರ್ಯ

ಚಾಂಪಿಯನ್ ಆದರೂ ಭಾರತ ತಂಡಕ್ಕೆ ಪಾಕ್‌ನ ಮೊಹ್ಸಿನ್ ನಖ್ವಿ ಟ್ರೋಫಿ ಕೊಡದೇ ಇರುವುದರನ್ನು ನಾಯಕ ಸೂರ್ಯಕುಮಾರ್‌ ಯಾದವ್ ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಅವರು, 'ಚಾಂಪಿಯನ್ ತಂಡಕ್ಕೆ ಟ್ರೋಫಿ ಕೊಡದೇ ಇರುವ ಘಟನೆಯನ್ನು ಇಷ್ಟು ವರ್ಷದ ಕ್ರಿಕೆಟ್ ವೃತ್ತಿಬದುಕಿನಲ್ಲಿ ನೋಡಿಯೇ ಇಲ್ಲ. ನಾವು ಕಠಿಣ ಪರಿಶ್ರಮದಿಂದ ಟ್ರೋಫಿ ಗೆದ್ದಿದ್ದೇವೆ. ಆದರೆ ನಮ್ಮ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಆದರೂ ಚಿಂತೆಯಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ನನ್ನ ಜೊತೆಗಿರುವ 14 ಆಟಗಾರರು, ಸಹಾಯಕ ಸಿಬ್ಬಂದಿಯೇ ನನ್ನ ಪಾಲಿಗೆ ಟ್ರೋಫಿ' ಎಂದಿದ್ದಾರೆ. ಬಳಿಕ ಈ ಬಗ್ಗೆ ಎಕ್ಸ್‌ನಲ್ಲೂ ಬರೆದುಕೊಂಡಿರುವ ಅವರು, 'ಟೂರ್ನಿ ಮುಗಿದಾಗ ಚಾಂಪಿಯನ್ ಆದವರು ಯಾರು ಎಂಬುದಷ್ಟೇ ಮುಖ್ಯ ಹೊರತು ಟ್ರೋಫಿ ಜೊತೆಗಿನ ಫೋಟೋ ಅಲ್ಲ' ಎಂದು ಕಿಚಾಯಿಸಿದ್ದಾರೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ