
ದುಬೈ: ಏಷ್ಯಾಕಪ್ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಬಗ್ಗುಬಡಿದು ಟ್ರೋಫಿ ಎತ್ತಿಹಿಡಿಯಲು ಸಿದ್ಧವಿದ್ದ ಭಾರತಕ್ಕೆ ಪಾಕಿಸ್ತಾನದ ಗೃಹ ಸಚಿವರೂ ಆದ ಏಷ್ಯಾ ಕ್ರಿಕೆಟ್ ಮ೦ಡಳಿ (ಎಸಿಸಿ) ಅಧ್ಯಕ್ಷ ಮೊಹಿನ್ ನಖ್ವಿಯಿಂದ ಅನ್ಯಾಯವಾಯಿತು.
'ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ' ಎಂಬಂತೆ ಭಾರತ ಕಷ್ಟಪಟ್ಟು ಒಲಿಸಿಕೊಂಡಿದ್ದ ಟ್ರೋಫಿಯನ್ನು ತಾನೇ ಕೊಡಬೇಕು, ಇನ್ಯಾರೂ ಮುಟ್ಟಬಾರದು ಎಂದು ಅವರು ಹಠ ಹಿಡಿದರು. ಭಾರತೀಯರು ಕಪ್ ಸ್ವೀಕರಿಸಲು ನಿರಾಕರಿಸಿದ ಬಳಿಕ ನಖ್ವಿ ಅವರು ಟ್ರೋಫಿಯನ್ನೇ ಹೊತ್ತೊಯ್ದ ಅಪರೂಪದ, ಉದ್ದಟತನದಿಂದ ಕೂಡಿದ್ದ ಘಟನೆ ಭಾನುವಾರ ತಡರಾತ್ರಿ ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಇದೀಗ ಭಾರತ ತನ್ನ ಟ್ರೋಫಿ ತನಗೆ ಸಿಗಲೇಬೇಕು ಎಂದು ಪಣ ತೊಟ್ಟಿದೆ.
ಕೂಡಲೇ ಟ್ರೋಫಿ, ಪದಕಗಳನ್ನು ಕಳುಹಿಸಿಕೊಡುವಂತೆ ಬಿಸಿಸಿಐ ಕಾರ್ಯದರ್ಶಿ ದೇವ್‌ಜಿತ್ ಸೈಕಿಯಾ ಎಸಿಸಿ ಹಾಗೂ ಅದರ ಮುಖ್ಯಸ್ಥ ನಖ್ವಿಗೆ ಆಗ್ರಹಿಸಿದ್ದಾರೆ. ಜೊತೆಗೆ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಸಂಬಂಧ ಪ್ರಬಲ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಚಾಂಪಿಯನ್ ಭಾರತ ತಂಡದ ಆಟಗಾರರಿಗೆ ಟ್ರೋಫಿ ಹಾಗೂ ಮೆಡಲ್‌ಗಳನ್ನು ಹಸ್ತಾಂತರಿಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಕಾಯುತ್ತಿದ್ದರು. ಆದರೆ ಪಹಲ್ಗಾಂ ದಾಳಿ ಕಾರಣ ಭಾರತೀಯ ಆಟಗಾರರು ನಖ್ವಿಯಿಂದ ಟ್ರೋಫಿ, ಪದಕ ಸ್ವೀಕರಿಸಲು ಸಿದ್ಧರಿರಲಿಲ್ಲ. ಬದಲಾಗಿ, ವೇದಿಕೆ ಮೇಲಿದ್ದ ಬೇರೆ ಯಾವುದೇ ಗಣ್ಯರಿಂದ ಟ್ರೋಫಿ ಸ್ವೀಕರಿಸಲು ಭಾರತ ತಯಾರಿತ್ತು. ಒಂದು ಹಂತದಲ್ಲಿ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಖಾಲಿದ್ ಅಲ್ ಝರೂನಿ ಟ್ರೋಫಿ ನೀಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಟ್ರೋಫಿಯನ್ನು ಖಾಲಿದ್ ವಿತರಿಸುವುದಕ್ಕೆ ನಖ್ವಿ ಒಪ್ಪಲಿಲ್ಲ. ಭಾರತೀಯರು ವೇದಿಕೆ ಕಡೆಗೆ ಸುಳಿಯದೆ,ವೇದಿಕೆಯಿಂದ20 ಅಡಿ ದೂರದಲ್ಲಿ ಮೊಬೈಲ್ ನೋಡುತ್ತಾ, ರೀಲ್ಸ್ ಮಾಡುತ್ತಾ, ಆರಾಮಾಗಿ ಮಾತನಾಡುತ್ತಿದ್ದರು. ಒಂದು ವೇಳೆ ನಖ್ವಿ ಬಲವಂತವಾಗಿ ಭಾರತೀಯರಿಗೆ ಟ್ರೋಫಿ ಕೊಡಲು ಬಂದಿದ್ದರೆ, ಭಾರತೀಯರು ಪ್ರತಿಭಟಿಸಿ ಐಸಿಸಿಗೆ ದೂರು ನೀಡಲು ಸಹ ಸಿದ್ದರಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕೆಲ ಸಮಯ ಕಾದ ಬಳಿಕ ನಖ್ವಿ ವೇದಿಕೆಯಿಂದ ಇಳಿದು ಹೊರಟರು. ಸಿಬ್ಬಂದಿ ಟ್ರೋಫಿ ಹಾಗೂ ಪದಕಗಳನ್ನು ಹೊತ್ತು ನಖ್ವಿಯನ್ನು ಹಿಂಬಾಲಿಸಿದರು. ನಖ್ವಿ ಕ್ರೀಡಾಂಗಣದಿಂದ ಕಾಲ್ಕಿತ್ತ ಬಳಿಕ ಭಾರತೀಯ ಆಟಗಾರರು ವೇದಿಕೆ ಮೇಲೇರಿ ತಮ್ಮ ಕೈಯಲ್ಲಿ ಟ್ರೋಫಿ ಇರುವಂತೆ ಭಾವಿಸಿ ಸಂಭ್ರಮಿಸಿದರು. ಟ್ರೋಫಿ ದುಬೈನಲ್ಲಿರುವ ಎಸಿಸಿ ಕೇಂದ್ರ ಕಚೇರಿಯಲ್ಲೇ ಇದೆ ಎಂದು ತಿಳಿದುಬಂದಿದ್ದು, ಅದನ್ನು ಯಾವಾಗ ಭಾರತ ತಂಡಕ್ಕೆ ನೀಡಲಾಗುತ್ತದೆ ಎಂಬ ಬಗ್ಗೆ ಇನ್ನೂ ಯಾರೂ ಮಾತಾಡುತ್ತಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.