IPL ಮಾನದಂಡವಾದರೇ, ಯುವಕರು ರಣಜಿ ಯಾಕೆ ಆಡಬೇಕು? ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆಗೆ ಸನ್ನಿ ಸಿಡಿಮಿಡಿ

By Naveen KodaseFirst Published Jun 24, 2023, 11:45 AM IST
Highlights

ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ
ತಂಡದ ಆಯ್ಕೆಯ ಕುರಿತಂತೆ ಅಸಮಾಧಾನ ಹೊರಹಾಕಿದ ಸುನಿಲ್ ಗವಾಸ್ಕರ್
ಸರ್ಫರಾಜ್ ಖಾನ್ ಕೈಬಿಟ್ಟಿದ್ದಕ್ಕೆ ಕಿಡಿಕಾರಿದ ಸನ್ನಿ

ನವದೆಹಲಿ(ಜೂ.24): ಜುಲೈ 12ರಿಂದ ಆರಂಭವಾಗಿರುವ ವೆಸ್ಟ್ ಇಂಡೀಸ್ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 16 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ತಮ್ಮ ನಾಯಕ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಆದರೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ. ತವರಿನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪೂಜಾರ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಇನ್ನು ಡೆಲ್ಲಿ ಮೂಲದ ವೇಗಿ ನವದೀಪ್ ಸೈನಿ ಅಚ್ಚರಿ ರೂಪದಲ್ಲಿ ಸ್ಥಾನ ಪಡೆದಿದ್ದರೇ, ಮುಂಬೈನ ಪ್ರತಿಭಾನ್ವಿತ ಬ್ಯಾಟರ್ ಸರ್ಫರಾಜ್ ಖಾನ್‌ಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. ಈ ಕುರಿತಂತೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಆಯ್ಕೆ ಸಮಿತಿಯ ಮೇಲೆ ಕಿಡಿಕಾರಿದ್ದಾರೆ.

25 ವರ್ಷದ ಸರ್ಫರಾಜ್ ಖಾನ್ ಕಳೆದ ಮೂರು ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಹೀಗಿದ್ದೂ ಇಲ್ಲಿಯವರೆಗೆ ಸರ್ಫರಾಜ್ ಖಾನ್‌ಗೆ ಭಾರತ ತಂಡದಿಂದ ಬುಲಾವ್ ಬಂದಿಲ್ಲ. ಕಳೆದ ವರ್ಷದ ಬಾಂಗ್ಲಾದೇಶ ಪ್ರವಾಸದ ವೇಳೆ ಭಾರತ ಟೆಸ್ಟ್ ತಂಡದಲ್ಲಿ ಸರ್ಫರಾಜ್‌ಗೆ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿತ್ತು. ಇದಾದ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಸರ್ಫರಾಜ್ ಖಾನ್ ಅವರನ್ನು ಕಡೆಗಣಿಸಲಾಗಿತ್ತು. ಇನ್ನು ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋಲು ಅನುಭವಿಸಿದ ಬಳಿಕವಾದರೂ ಸರ್ಫರಾಜ್ ಖಾನ್‌ಗೆ ಭಾರತ ತಂಡದಲ್ಲಿ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಮತ್ತೆ ಹುಸಿಯಾಗಿದೆ.

ವೆಸ್ಟ್‌ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್‌ ತಂಡ ಪ್ರಕಟ; ಇಬ್ಬರು ತಾರಾ ಆಟಗಾರರಿಗೆ ರೆಸ್ಟ್‌

ಇನ್ನು 2023ರ ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಹಾಗೂ ಮಕೇಶ್‌ ಕುಮಾರ್ ಇದೇ ಮೊದಲ ಬಾರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಐಪಿಎಲ್‌ನಲ್ಲಿ ವಿಫಲವಾಗಿದ್ದ ಸರ್ಫರಾಜ್‌ ಖಾನ್ ಅವರನ್ನು ಕಡೆಗಣಿಸಲಾಗಿದೆ. ಇದೀಗ ಬಲಗೈ ಬ್ಯಾಟರ್ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಸಮಿತಿ ಕಡೆಗಣಿಸಿದ್ದಕ್ಕೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನೀವು ಐಪಿಎಲ್‌ನಲ್ಲಿ ಆಟಗಾರರು ತೋರಿದ ಪ್ರದರ್ಶನವನ್ನು ಗಮನಿಸಿ ತಂಡವನ್ನು ಆಯ್ಕೆ ಮಾಡುವುದೇ ಆದರೆ ರಣಜಿ ಟ್ರೋಫಿ ಆಡುವುದರಲ್ಲಿ ಅರ್ಥವೇ ಇಲ್ಲ ಅಲ್ಲವೇ ಎಂದು ಸನ್ನಿ ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.

WTC Final ಸೋಲಿಗೆ ಕಾರಣ ಬಿಚ್ಚಿಟ್ಟ ಆರ್‌ ಅಶ್ವಿನ್‌..! ಧೋನಿ ನೆನಪಿಸಿಕೊಂಡ ಸ್ಪಿನ್ ಮಾಂತ್ರಿಕ

ಸರ್ಫರಾಜ್ ಖಾನ್ ಕಳೆದ ಮೂರು ರಣಜಿ ಟ್ರೋಫಿ ಟೂರ್ನಿಯಲ್ಲಿ 100ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೇ ಅವರು ಇನ್ನೇನು ಮಾಡಬೇಕು ನೀವೇ ಹೇಳಿ? ಎಂದು ಪ್ರಶ್ನಿಸಿದ್ದಾರೆ. ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಿಲ್ಲದೇ ಇರಬಹುದು, ಕನಿಷ್ಠ ಪಕ್ಷ ಅವರನ್ನು 15 ಆಟಗಾರರನ್ನೊಳಗೊಂಡ ತಂಡದಲ್ಲಾದರೂ ಸ್ಥಾನ ನೀಡಿ ಎಂದು 73 ವರ್ಷದ ಸುನಿಲ್ ಗವಾಸ್ಕರ್ ಇಂಡಿಯಾ ಟುಡೆ ವಾಹಿನಿಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಆತನಿಗೆ ಒಂದು ಸಂಸ್ಥೆಯಾಗಿ ಆತನ ಪ್ರದರ್ಶನದ ಕುರಿತು ಅವರೊಂದಿಗೆ ಮಾತನಾಡಿ. ಇಲ್ಲವೆಂದರೆ, ಇದರಿಂದ ಪ್ರಯೋಜನವಿಲ್ಲ ರಣಜಿ ಟ್ರೋಫಿ ಆಡುವುದನ್ನು ನಿಲ್ಲಿಸುವಂತೆ ಹೇಳಿ. ನೀವು ಐಪಿಎಲ್ ಚೆನ್ನಾಗಿ ಆಡಿದರೆ ರೆಡ್ ಬಾಲ್ ಕ್ರಿಕೆಟ್‌ ಅಡಲು ಅರ್ಹರಾಗುತ್ತೀರಿ ಎಂದು ಯುವ ಕ್ರಿಕೆಟಿಗರಿಗೆ ಹೇಳಿ ಎಂದು ಸುನಿಲ್ ಗವಾಸ್ಕರ್ ವ್ಯಂಗ್ಯವಾಡಿದ್ದಾರೆ. 

 ಸರ್ಫರಾಜ್ ಖಾನ್ 2022-23ರ ರಣಜಿ ಟ್ರೋಫಿ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 92.66ರ ಸರಾಸರಿಯಲ್ಲಿ 556 ರನ್ ಬಾರಿಸಿದ್ದರು. ಇನ್ನು ಇಲ್ಲಿಯವರೆಗೆ 37 ಪ್ರಥಮದರ್ಜೆ ಪಂದ್ಯಗಳನ್ನಾಡಿ 3505 ರನ್ ಬಾರಿಸಿದ್ದಾರೆ. ಇನ್ನು 2021-22ರ ರಣಜಿ ಟ್ರೋಫಿ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿ 122-75ರ ಸರಾಸರಿಯಲ್ಲಿ 982 ರನ್ ಸಿಡಿಸಿದ್ದರು. ಇನ್ನು ಇದಕ್ಕೂ ಮುನ್ನ 2019-20ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಸರ್ಫರಾಜ್ ಖಾನ್ 154.67ರ ಸರಾಸರಿಯಲ್ಲಿ 928 ರನ್ ಬಾರಿಸಿದ್ದರು.

click me!