ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸೋಲುಂಡ ಟೀಂ ಇಂಡಿಯಾ
ಟೀಂ ಇಂಡಿಯಾ ಸೋಲಿನ ವ್ಯಾಖ್ಯಾನ ಮಾಡಿದ ರವಿಚಂದ್ರನ್ ಅಶ್ವಿನ್
ಎಂ ಎಸ್ ಧೋನಿ ನಾಯಕತ್ವ ನೆನಪಿಸಿಕೊಂಡ ಅಶ್ವಿನ್
ನವದೆಹಲಿ(ಜೂ.24): ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಸ್ಟ್ರೇಲಿಯಾ ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದೆ. ಭಾರತ ಕ್ರಿಕೆಟ್ ತಂಡದ ಸೋಲಿಗೆ ಕ್ರಿಕೆಟ್ ಪಂಡಿತರಿಂದ ಹಿಡಿದು ಅಭಿಮಾನಿಗಳವರೆಗೆ ಒಬ್ಬೊಬ್ಬರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ನಡೆಸುತ್ತಿದ್ದಾರೆ. ದಿ ಓವಲ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದ ಸೋಲು ಇನ್ನೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮಾಸಿಲ್ಲ.
ಇನ್ನು ಟೆಸ್ಟ್ ವಿಶ್ವಕಪ್ ಫೈನಲ್‌ಗೆ ತಂಡವನ್ನು ಆಯ್ಕೆ ಮಾಡಿಕೊಂಡ ರೀತಿಗೆ ರೋಹಿತ್ ಶರ್ಮಾ ಇನ್ನೂ ಟೀಕೆಗೆ ಒಳಗಾಗುತ್ತಲೇ ಇದ್ದಾರೆ. ಅದರಲ್ಲೂ ಭಾರತ ಕ್ರಿಕೆಟ್ ತಂಡವು ಟೆಸ್ಟ್ ವಿಶ್ವಕಪ್ ಫೈನಲ್‌ಗೇರಲು ಪ್ರಮುಖ ಪಾತ್ರ ವಹಿಸಿದ್ದ ರವಿಚಂದ್ರನ್ ಅಶ್ವಿನ್ ಅವರನ್ನು ಫೈನಲ್ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಹಲವರು ಟೀಕಿಸಿದ್ದಾರೆ. ಇನ್ನು ಟಾಸ್ ಗೆದ್ದ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ತೀರ್ಮಾನಿಸಿದ ನಿರ್ಧಾರದ ಕುರಿತಂತೆಯೂ ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
undefined
ಇದೀಗ ಟೀಂ ಇಂಡಿಯಾ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಚಾಂಪಿಯನ್ ಪಟ್ಟ ಅಲಂಕರಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇದೇ ವೇಳೆ ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯದಲ್ಲಿದ್ದ ಅನುಕೂಲದ ಕುರಿತಂತೆಯೂ ವಿವರಿಸಿದ್ದಾರೆ.
Ashes 2023: ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತ ಇಂಗ್ಲೆಂಡ್..! ರೋಚಕ ಪಂದ್ಯ ಗೆದ್ದ ಆಸ್ಟ್ರೇಲಿಯಾ
"ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಫೈನಲ್ ಪಂದ್ಯವು ಅದ್ಭುತವಾಗಿತ್ತು, ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲು ಅರ್ಹವಾದ ತಂಡವಾಗಿತ್ತು. ಆಸ್ಟ್ರೇಲಿಯಾ ತಂಡಕ್ಕೆ ಕೆಲವೊಂದು ಅಡ್ವಾನ್‌ಟೇಜ್ ಕೂಡಾ ಇತ್ತು. ಯಾಕೆಂದರೆ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಸೇರಿದಂತೆ ಕೆಲ ಆಟಗಾರರು ಇಲ್ಲಿ ಕೆಲವು ಕೌಂಟಿ ಪಂದ್ಯಗಳನ್ನು ಆಡಿದ್ದರು. ಕಳೆದ ಬಾರಿಯ ಟೆಸ್ಟ್ ವಿಶ್ವಕಪ್ ಫೈನಲ್‌ಗೇರುವ ಅವಕಾಶವನ್ನು ಆಸ್ಟ್ರೇಲಿಯಾ ಕೂದಲೆಳೆ ಅಂತರದಲ್ಲಿ ಕೈಚೆಲ್ಲಿತ್ತು. ಅವರು ಭಾರತ ಕ್ರಿಕೆಟ್ ತಂಡದಂತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದಾರೆ ಎಂದು ರವಿಚಂದ್ರನ್ ಅಶ್ವಿನ್ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ.
ಭಾರತ ಟೆಸ್ಟ್ ವಿಶ್ವಕಪ್ ಸೋಲುವುದರ ಜತೆಗೆ ಬರೋಬ್ಬರಿ 10 ವರ್ಷಗಳಿಂದ ಅನುಭವಿಸುತ್ತಾ ಬಂದಿದ್ದ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವ ಸುವರ್ಣಾವಕಾಶವನ್ನು ಕೈಚೆಲ್ಲಿತ್ತು. ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಿತ್ತು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, 2013ರಲ್ಲಿ ಇಂಗ್ಲೆಂಡ್‌ನಲ್ಲೇ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಭಾರತ ತಂಡವು ಐಸಿಸಿ ಟ್ರೋಫಿ ಗೆಲ್ಲಲು ಪದೇ ಪದೇ ವಿಫಲವಾಗುತ್ತಲೇ ಬಂದಿದೆ.
" ಕಳೆದ 10 ವರ್ಷಗಳಿಂದ ಭಾರತ ತಂಡವು ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಲೇ ಬಂದಿರುವುದರ ಕಷ್ಟ ನಮಗೆಲ್ಲರಿಗೂ ಗೊತ್ತಿದೆ. ನಮ್ಮ ಭಾರತ ತಂಡದ ಅಭಿಮಾನಿಗಳ ಬಗ್ಗೆ ನನಗೆ ಸಹಾನುಭೂತಿಯಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ಆಟಗಾರನನ್ನು ಸೇರಿಸಿಕೊಳ್ಳಬೇಕಿತ್ತು, ಆ ಆಟಗಾರನನ್ನು ಕೈಬಿಡಬೇಕಿತ್ತು ಎಂಬೆಲ್ಲಾ ಚರ್ಚೆಗಳು ನಡೆಯುತ್ತಿವೆ. ಆದರೆ ಒಂದಂತೂ ಸತ್ಯ ದಿನಬೆಳಗಾಗುವುದರೊಳಗಾಗಿ ಒಬ್ಬ ಗುಣಮಟ್ಟದ ಆಟಗಾರನನ್ನು ರೆಡಿ ಮಾಡಲು ಸಾಧ್ಯವಿಲ್ಲ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಅವರೇನು ಮಾಡಿದ್ದರು ಹೇಳಿ? ಎಲ್ಲವನ್ನೂ ಸಿಂಪಲ್ ಆಗಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಅವರ ನಾಯಕತ್ವದಡಿಯಲ್ಲಿ ನಾನೂ ಕೂಡಾ ಆಡಿದ್ದೇನೆ. ಅವರು 15 ಆಟಗಾರರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡುತ್ತಿದ್ದರು. ಆ 15 ಆಟಗಾರರ ಪೈಕಿ 11 ಆಟಗಾರರು ವರ್ಷವಿಡೀ ಆಡುತ್ತಿದ್ದರು. ಆಟಗಾರರಲ್ಲಿ ಆ ರೀತಿಯ ಭದ್ರತೆ ಭಾವನೆಯನ್ನು ತಂಡದಲ್ಲಿ ನಿರ್ಮಾಣ ಮಾಡಬೇಕಿದೆ" ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.