
ಬೆಂಗಳೂರು: 21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬ್ಯಾಟರ್ ಯಾರು ಎನ್ನುವ ಪ್ರಶ್ನೆ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಇದೀಗ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ವೇಗಿ ಸ್ಟುವರ್ಟ್ ಬ್ರಾಡ್, ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಇನ್ನು ಅಚ್ಚರಿಯ ಸಂಗತಿಯೆಂದರೇ ಇಂಗ್ಲೆಂಡ್ ಬೌಲರ್ ಆಗಿದ್ದೂ ಸ್ಟುವರ್ಟ್ ಬ್ರಾಡ್, ಈ ಪಟ್ಟಿಯಲ್ಲಿ ಕೇವಲ ಓರ್ವ ಇಂಗ್ಲೆಂಡ್ ಬ್ಯಾಟರ್‌ಗೆ ಮಾತ್ರ ಸ್ಥಾನ ನೀಡಿದ್ದಾರೆ.
ಜೋಸ್ ಬಟ್ಲರ್ ಅವರ ಜತೆಗಿನ ಪಾಡ್‌ಕಾಸ್ಟ್ ವೇಳೆ ಸ್ಟುವರ್ಟ್ ಬ್ರಾಡ್, 21ನೇ ಶತಮಾನ ಕಂಡ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಮೊದಲ ಸ್ಥಾನ ನೀಡಿದ್ದಾರೆ. ಇನ್ನು ಚೇಸ್ ಮಾಸ್ಟರ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಗೆ 10ನೇ ಸ್ಥಾನ ನೀಡಿದ್ದಾರೆ.
ಸ್ಟುವರ್ಟ್ ಬ್ರಾಡ್ ಆಯ್ಕೆ ಮಾಡಿದ 21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಜತೆ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಕೂಡಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂವರು ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 38,439 ರನ್ ಸಿಡಿಸಿದ್ದಾರೆ. 117 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಸದ್ಯ ಈ ಮೂವರು ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.
ಇನ್ನು ಸ್ಟುವರ್ಟ್ ಬ್ರಾಡ್ ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಟೆಸ್ಟ್ ನಾಯಕ ಜೋ ರೂಟ್‌ಗೆ ಸ್ಥಾನ ನೀಡಿದ್ದಾರೆ. ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೇ ಆದ ಹೆಜ್ಜೆಗುರುತು ದಾಖಲಿಸಿದ್ದು, 14,000+ ರನ್ ಬಾರಿಸಿ ಮುನ್ನುಗ್ಗುತ್ತಿದ್ದಾರೆ. ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ಬಳಿಕ ಅತಿಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ರೂಟ್ ಅವರದ್ದು.
ಇನ್ನುಳಿದಂತೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಸ್ಟೀವ್ ಸ್ಮಿತ್ ಕೂಡಾ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್, ಎಬಿ ಡಿವಿಲಿಯರ್ಸ್ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ. ಇದರ ಜತೆಗೆ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರಲ್ಲಿ 400 ರನ್ ಸಿಡಿಸಿ ಇಂದಿಗೂ ಅಚ್ಚರಿಯದ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲಿಸಿರುವ ವಿಂಡೀಸ್ ದಂತಕಥೆ ಬ್ರಿಯನ್ ಲಾರಾ, ಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕರ ಕೂಡಾ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಟುವರ್ಟ್ ಬ್ರಾಡ್ ಆಯ್ಕೆ ಮಾಡಿದ 21ನೇ ಶತಮಾನದ ಸಾರ್ವಕಾಲಿಕ ಶ್ರೇಷ್ಠ ಟಾಪ್ 10 ಟೆಸ್ಟ್ ಬ್ಯಾಟರ್‌ಗಳು ಇವರೇ ನೋಡಿ:
1. ಸಚಿನ್ ತೆಂಡೂಲ್ಕರ್
2. ಬ್ರಿಯನ್ ಲಾರಾ
3. ಸ್ಟೀವ್ ಸ್ಮಿತ್
4. ಜೋ ರೂಟ್
5. ರಿಕಿ ಪಾಂಟಿಂಗ್
6. ಕುಮಾರ ಸಂಗಕ್ಕರ
7. ಜಾಕ್ ಕಾಲಿಸ್
8. ಎಬಿ ಡಿವಿಲಿಯರ್ಸ್
9. ರಾಹುಲ್ ದ್ರಾವಿಡ್
10. ವಿರಾಟ್ ಕೊಹ್ಲಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.