ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕಾನ್ಪುರದಲ್ಲಿ ಸೆಪ್ಟೆಂಬರ್ 27ರಿಂದ ಆರಂಭವಾಗಲಿದೆ. ಈ ಪಿಚ್ ಸ್ಪಿನ್ ಸ್ನೇಹಿಯಾಗಿರುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಕಾನ್ಪುರ: ಭಾರತ ಹಾಗೂ ಬಾಂಗ್ಲಾದೇಶ ನಡುವೆ ಉತ್ತರ ಪ್ರದೇಶದ ಕಾನ್ಪುರ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ 2ನೇ ಟೆಸ್ಟ್ ಪಂದ್ಯಕ್ಕೆ ಸ್ಪಿನ್ ಸ್ನೇಹಿ ಪಿಚ್ ಬಳಸಲಾಗುತ್ತದೆ. ಹೀಗಾಗಿ ಉಭಯ ತಂಡಗಳಿಂದಲೂ ತಲಾ ಮೂವರು ಸ್ಪಿನ್ನರ್‌ಗಳು ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಸರಣಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಚೆನ್ನೈನ ಚೆಪಾಕ್ ಕ್ರೀಡಾಂಗಣದ ಪಿಚ್‌ಗೆ ಕೆಂಪು ಮಣ್ಣು ಮಿಶ್ರಿತ ಪಿಚ್ ಬಳಸಲಾಗಿತ್ತು. ಉಭಯ ತಂಡಗಳೂ ಮೂವರು ತಜ್ಞ ವೇಗಿಗಳನ್ನು ಕಣಕ್ಕಿಳಿಸಿತ್ತು. ಪಂದ್ಯದಲ್ಲಿ ಹೆಚ್ಚಿನ ಬೌನ್ಸರ್‌ಗಳು ಕಂಡುಬಂದಿದ್ದವು. ಆದರೆ ಕಾನ್ಪುರ ಪಂದ್ಯಕ್ಕೆ ಭಿನ್ನವಾದ ಪಿಚ್ ಬಳಸಲಾಗುತ್ತದೆ ಎಂದು ತಿಳಿದುಬಂದಿದೆ.
undefined
2ನೇ ಪಂದ್ಯ ಕಪ್ಪು ಮಣ್ಣಿನ ಪಿಚ್‌ನಲ್ಲಿ ಆಡಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ಬೌನ್ಸರ್‌ಗಳು ಇರುವುದಿಲ್ಲ. ಪಂದ್ಯ ಸಾಗಿದಂತೆ ಪಿಚ್ ನಿಧಾನವಾಗಿ ವರ್ತಿಸಲಿದೆ. ಆರಂಭಿಕ ಪಂದ್ಯದಲ್ಲಿ ಬೌನ್ಸರ್‌ಗಳ ಜೊತೆ ಹೆಚ್ಚಿನ ತಿರುವು ಕೂಡಾ ಇದ್ದ ಕಾರಣ ಸ್ಪಿನ್ನರ್‌ಗಳೂ ನೆರವು ಪಡೆದಿದ್ದರು. ಆದರೆ 2ನೇ ಪಂದ್ಯದಲ್ಲಿ ಪಂದ್ಯ ಸ್ಪಿನ್ನರ್‌ಗಳಿಗೇ ಹೆಚ್ಚಿನ ನೆರವು ಒದಗಿಸುವ ಸಾಧ್ಯತೆಯಿದೆ.
ವಿರಾಟ್ ಕೊಹ್ಲಿ ಯಾಕೆ ಐಪಿಎಲ್ ಹರಾಜಿಗೆ ಬರ್ತಿಲ್ಲ? ಅಷ್ಟಕ್ಕೂ ಆರ್‌ಸಿಬಿಗೂ, ಕೊಹ್ಲಿಗೂ ಏನು ಸಂಬಂಧ?
ಕುಲ್ದೀಪ್/ಅಕ್ಷರ್‌ಗೆ ಸ್ಥಾನ?: ಚೆನ್ನೈನಲ್ಲಿ ವೇಗಿಗಳಾದ ಜಸ್‌ಪ್ರೀತ್ ಬೂಮ್ರಾ, ಮೊಹಮದ್ ಸಿರಾಜ್, ಆಕಾಶ್‌ದೀಪ್ ಜೊತೆಗೆ ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜಾ ಕಣಕ್ಕಿಳಿದಿದ್ದರು. ಆದರೆ 2ನೇ ಟೆಸ್ಟ್‌ನ ಪಿಚ್ ವರ್ತನೆ ಬದಲಾಗಲಿರುವ ಕಾರಣ ತಂಡ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಹೀಗಾದರೆ ಕುಲ್ದೀಪ್ ಯಾದವ್ ಅಥವಾ ಅಕ್ಷರ್ ಪಟೇಲ್‌ಗೆ ಸ್ಥಾನ ಸಿಗಲಿದೆ. ವೇಗಿಗಳಾದ ಸಿರಾಜ್ ಅಥವಾ ಆಕಾಶ್‌ದೀಪ್ ಜಾಗ ಬಿಟ್ಟುಕೊಡಬೇಕಾಗಬಹುದು.
ಅತ್ತ ಬಾಂಗ್ಲಾದೇಶ ಕೂಡಾ ಮೂವರು ತಜ್ಞ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗುತ್ತಿದೆ. ಹಿರಿಯ ಸ್ಪಿನ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆಯಾಗಲಿದೆ. ತಂಡ ವೇಗಿ ನಹೀದ್ ರಾಣಾ ಬದಲು ತೈಜುಲ್ ಇಸ್ಲಾಂರನ್ನು ಆಡಿಸುವ ಸಾಧ್ಯತೆ ಇದೆ. ಒಂದು ವೇಳೆ ಶಕೀಬ್ ಪಂದ್ಯಕ್ಕೆ ಅಲಭ್ಯರಾದರೆ ಹೆಚ್ಚುವರಿ ಸ್ಪಿನ್ನರ್ ಆಗಿ ನಯೀಮ್ ಹಸನ್‌ರನ್ನು ಕಣಕ್ಕಿಳಿಸಬಹುದು.
ಕೈ ಬೆರಳಿಗೆ ಗಾಯ: ಭಾರತ ವಿರುದ್ಧ 2ನೇ ಟೆಸ್ಟ್‌ಗೆ ಈ ಬಾಂಗ್ಲಾ ಆಟಗಾರ ಡೌಟ್!
ದೊಡ್ಡ ಮೊತ್ತದ ನಿರೀಕ್ಷೆ: ಪಿಚ್ ಬೌಲರ್‌ಗಳ ತಲೆನೋವಿಗೆ ಕಾರಣವಾದರೂ, ಬ್ಯಾಟರ್‌ಗಳು ಸದ್ಯ ನಿರಾಳರಾಗಿದ್ದಾರೆ. ಆರಂಭದಲ್ಲಿ ಹೆಚ್ಚಿನ ತಿರುವುಗಳು ಕಂಡುಬರುವ ಸಾಧ್ಯತೆ ಕಡಿಮೆ. ಹೀಗಾಗಿ ರನ್ ಗಳಿಸುವುದು ಬ್ಯಾಟರ್‌ಗಳಿಗೆ ಸುಲಭವಾಗಬಹುದು. ಈ ಕ್ರೀಡಾಂಗಣದ ಕೊನೆ 2 ಟೆಸ್ಟ್ ಪಂದ್ಯಗಳು 5 ದಿನಗಳ ಕಾಲ ನಡೆದಿದ್ದವು.
1983ರಿಂದ ಕಾನ್ಪುರದಲ್ಲಿ ಟೆಸ್ಟ್ ಸೋತಿಲ್ಲ ಭಾರತ!
ಭಾರತ ತಂಡದ ಪಾಲಿಗೆ ಕಾನ್ಪುರ ಭದ್ರಕೋಟೆ ಇದ್ದಂತೆ. ತಂಡ ಇಲ್ಲಿ ಕಳೆದ 41 ವರ್ಷಗಳಿಂದ ಯಾವುದೇ ಟೆಸ್ಟ್ ಪಂದ್ಯದಲ್ಲೂ ಸೋಲನುಭವಿಸಿಲ್ಲ. 1983ರಲ್ಲಿ ಭಾರತ ತಂಡಕ್ಕೆ ವೆಸ್ಟ್‌ಇಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 83 ರನ್‌ಗಳ ಸೋಲು ಎದುರಾಗಿತ್ತು. ಆ ಬಳಿಕ ಟೀಂ ಇಂಡಿಯಾ ಕಾನ್ಪುರದಲ್ಲಿ 9 ಪಂದ್ಯಗಳನ್ನಾಡಿದೆ. ಈ ಪೈಕಿ 5ರಲ್ಲಿ ಗೆದ್ದಿದ್ದರೆ, 4 ಪಂದ್ಯಗಳು ಡ್ರಾಗೊಂಡಿವೆ. ಒಟ್ಟಾರೆ ಭಾರತ ತಂಡ ಈ ವರೆಗೂ ಕಾನ್ಪುರದಲ್ಲಿ ಆಡಿರುವ 23 ಪಂದ್ಯಗಳಲ್ಲಿ 7ರಲ್ಲಿ ಜಯಗಳಿಸಿದೆ. 3ರಲ್ಲಿ ಸೋತಿರುವ ತಂಡ, 13ರಲ್ಲಿ ಡ್ರಾ ಮಾಡಿಕೊಂಡಿವೆ.