T20 World Cup: ಚುಟುಕು ವಿಶ್ವಕಪ್ ಗೆಲ್ಲಲು ಬಲಿಷ್ಠ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟ..! ಐಪಿಎಲ್ ಹೀರೋಗಳಿಗೆ ಅವಕಾಶ

By Naveen KodaseFirst Published Apr 30, 2024, 2:38 PM IST
Highlights

ಅಚ್ಚರಿಯ ರೀತಿಯಲ್ಲಿ ಬರೋಬ್ಬರಿ 9 ತಿಂಗಳ ಬಳಿಕ ವೇಗಿ ಏನ್ರಿಚ್ ನೋಕಿಯ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಏನ್ರಿಚ್ ನೋಕಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಕೇಪ್‌ಟೌನ್(ಏ.30): ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಇದೀಗ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗಿದೆ. ಮುಂಬರುವ ಜೂನ್ 01ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮಕ್ಕೆ ಇದೀಗ 15 ಆಟಗಾರರನ್ನೊಳಗೊಂಡ ಹರಿಣಗಳ ಪಡೆ ಪ್ರಕಟವಾಗಿದ್ದು, ಏಯ್ಡನ್ ಮಾರ್ಕ್‌ರಮ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಇನ್ನು ತುಂಬಾ ಅಚ್ಚರಿಯ ರೀತಿಯಲ್ಲಿ ಬರೋಬ್ಬರಿ 9 ತಿಂಗಳ ಬಳಿಕ ವೇಗಿ ಏನ್ರಿಚ್ ನೋಕಿಯ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಏನ್ರಿಚ್ ನೋಕಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಕಮ್‌ಬ್ಯಾಕ್ ಮಾಡಿರುವ ನೋಕಿಯ ಮಾರಕ ದಾಳಿ ನಡೆಸಲು ವಿಫಲವಾಗಿದ್ದು, ಸಾಕಷ್ಟು ದುಬಾರಿಯಾಗಿದ್ದಾರೆ. ಇನ್ನು SA20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ಆರಂಭಿಕ ಬ್ಯಾಟರ್ ರಿಯಾನ್ ರಿಕೆಲ್ಟನ್ ಹಾಗೂ ವೇಗಿ ಓಟ್ಟಿನೆಲ್ ಬಾರ್ಟ್‌ಮನ್ ಅವರಿಗೆ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆ: ಎರಡು ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾದ ರೋಹಿತ್ ಶರ್ಮಾ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಯಾನ್ ರಿಕೆಲ್ಟನ್, ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಜತೆಗೂಡಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಈ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಕ್ವಿಂಟನ್ ಡಿ ಕಾಕ್ ಅವರ ಪಾಲಿಗೆ ಕಟ್ಟಕಡೆಯ ಅಂತಾರಾಷ್ಟ್ರೀಯ ಸರಣಿ ಆಗುವ ಸಾಧ್ಯತೆಯಿದೆ. ಈಗಾಗಲೇ ಕಳೆದ ವರ್ಷವಷ್ಟೇ ಡಿ ಕಾಕ್, ಏಕದಿನ ಕ್ರಿಕೆಟ್ ಮಾದರಿಗೂ ವಿದಾಯ ಘೋಷಿಸಿದ್ದಾರೆ.

This is your T20 World Cup Proteas Men’s team South Africa! 🌟 Let's rally behind our squad as they aim to conquer the world stage and bring home the gold! 🏆💥

Stay tuned for the out of this world performances! pic.twitter.com/NVwYYsN7cH

— Proteas Men (@ProteasMenCSA)

ಐಪಿಎಲ್‌ ಹೀರೋಗಳಿಗೆ ಮಣೆ: ಇನ್ನು ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಹರಿಣಗಳ ಪಡೆ ಐಪಿಎಲ್‌ನಲ್ಲಿ ಮಿಂಚುತ್ತಿರುವ ಆಟಗಾರರಿಗೆ ಮಣೆ ಹಾಕಿದೆ. ಏಯ್ಡನ್ ಮಾರ್ಕ್‌ರಮ್, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೇನ್, ಟ್ರಿಸ್ಟಿನ್ ಸ್ಟಬ್ಸ್ ಅವರಂತಹ ಹೊಡಿಬಡಿ ಆಟಗಾರರು ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಗೆರಾಲ್ಡ್ ಕೋಟ್ಕೀ, ಕಗಿಸೋ ರಬಾಡ ಸ್ಥಾನ ಪಡೆದಿದ್ದಾರೆ.

ಟಿ20 ವಿಶ್ವಕಪ್‌ಗೆ ಇಂದು ಭಾರತ ತಂಡ ಪ್ರಕಟ ನಿರೀಕ್ಷೆ: ಮೇ 01 ಡೆಡ್‌ಲೈನ್‌

ಇನ್ನು ಫಾಫ್ ಡು ಪ್ಲೆಸಿಸ್ ನಿವೃತ್ತಿ ವಾಪಾಸ್ ಪಡೆದು ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇನ್ನುಳಿದಂತೆ ಕಳೆದ ಆವೃತ್ತಿಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ಮಾಜಿ ನಾಯಕ ತೆಂಬಾ ಬವುಮಾ, ರೀಲೇ ರೂಸ್ಸೌ ಹಾಗೂ ವೇಯ್ನ್ ಪಾರ್ನೆಲ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಹೀಗಿದೆ:

ಏಯ್ಡನ್ ಮಾರ್ಕ್‌ರಮ್(ನಾಯಕ), ಓಟ್ಟಿನೆಲ್ ಬಾರ್ಟ್‌ಮನ್, ಗೆರಾಲ್ಡ್ ಕೋಟ್ಜೀ, ಕ್ವಿಂಟನ್ ಡಿ ಕಾಕ್, ಬೋರ್ನ್ ಫೋರ್ಟಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೇನ್, ಕೇಶವ್ ಮಹರಾಜ್, ಡೇವಿಡ್ ಮಿಲ್ಲರ್, ಏನ್ರಿಚ್ ನೋಕಿಯ, ಕಗಿಸೋ ರಬಾಡ, ರಿಯಾನ್ ರಿಕೆಲ್ಟನ್, ತಬ್ರೀಜ್ ಶಮ್ಸಿ, ಟ್ರಿಸ್ಟಿನ್ ಸ್ಟಬ್ಸ್.

ಮೀಸಲು ಆಟಗಾರರು: ನಂದ್ರೆ ಬರ್ಗರ್ ಹಾಗೂ ಲುಂಗಿ ಎಂಗಿಡಿ

click me!