ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆ: ಹಾರ್ದಿಕ್ ಪಾಂಡ್ಯ ಔಟ್? ಸಂಜು ಸ್ಯಾಮ್ಸನ್ ಇನ್?

By Naveen Kodase  |  First Published Apr 30, 2024, 1:29 PM IST

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಆಟಗಾರರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಮುಂಬರುವ ಚುಟುಕು ಕ್ರಿಕೆಟ್ ಸಂಗ್ರಾಮಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೇ ಮಾನದಂಡವನ್ನು ಅನುಸರಿಸಿದರೆ ಕೆಲವೊಂದು ಅಚ್ಚರಿಯ ಆಯ್ಕೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.


ಮುಂಬೈ(ಏ.30): ಮುಂಬರುವ ಜೂನ್ 01ರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲು ಬಿರುಸಿನ ತಯಾರಿ ನಡೆಯುತ್ತಿದೆ. ಭಾರತೀಯ ಆಯ್ಕೆ ಸಮಿತಿಯು ಇಂದು ಅಹಮದಾಬಾದ್‌ನಲ್ಲಿ ಸಭೆ ಸೇರಲಿದ್ದು, ಇಂದು ಅಥವಾ ನಾಳೆಯೊಳಗಾಗಿ ತಂಡವನ್ನು ಪ್ರಕಟಿಸುವ ಸಾಧ್ಯತೆಯಿದೆ. ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಲು ಮೇ.01 ಕೊನೆಯ ದಿನಾಂಕವಾಗಿದೆ. 

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿನ ಆಟಗಾರರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ಮುಂಬರುವ ಚುಟುಕು ಕ್ರಿಕೆಟ್ ಸಂಗ್ರಾಮಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದೇ ಮಾನದಂಡವನ್ನು ಅನುಸರಿಸಿದರೆ ಕೆಲವೊಂದು ಅಚ್ಚರಿಯ ಆಯ್ಕೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Tap to resize

Latest Videos

ಟಿ20 ವಿಶ್ವಕಪ್‌ಗೆ ಭಾರತ ತಂಡ ಆಯ್ಕೆ: ಎರಡು ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾದ ರೋಹಿತ್ ಶರ್ಮಾ..!

ಹಾರ್ದಿಕ್ ಪಾಂಡ್ಯ ಕಳಪೆ ಫಾರ್ಮ್:

ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಾಕಷ್ಟು ಬಿಡುವಿನ ಬಳಿಕ ಐಪಿಎಲ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಬಳಿಕ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ತೋರಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಪಾಂಡ್ಯ ಎದುರು ನೋಡುತ್ತಿದ್ದರು. ಆದರೆ ಪಾಂಡ್ಯ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಪಾಂಡ್ಯ 9 ಪಂದ್ಯಗಳನ್ನಾಡಿ ಕೇವಲ 197 ರನ್ ಗಳಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 227 ರನ್ ನೀಡಿ ಕೇವಲ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ಪಾಂಡ್ಯ ಅವರನ್ನು ಆಯ್ಕೆ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲಕ್ಕೆ ಆಯ್ಕೆ ಸಮಿತಿ ಬಿದ್ದಿದೆ. ಕೆಲ ವರದಿಗಳ ಪ್ರಕಾರ ಪಾಂಡ್ಯ, ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ರಾಹುಲ್-ಪಂತ್-ಸಂಜು ಮೂವರ ನಡುವೆ ಫೈಟ್:

ಸದ್ಯ ಟೀಂ ಇಂಡಿಯಾ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್, ಕೆ ಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಮೂವರು ಬ್ಯಾಟರ್‌ಗಳು ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 350+ ರನ್ ಬಾರಿಸಿದ್ದಾರೆ. ಈ ಪೈಕಿ ರಿಷಭ್ ಪಂತ್ ಮೊದಲ ಆಯ್ಕೆ ವಿಕೆಟ್ ಕೀಪರ್ ಹಾಗೂ ಸಂಜು ಸ್ಯಾಮ್ಸನ್ ಎರಡನೇ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಇಬ್ಬರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಆದರೆ ಕೆ ಎಲ್ ರಾಹುಲ್ ಅಗ್ರಕ್ರಮಾಂಕದಲ್ಲಿ ಆಡುತ್ತಿರುವುದರಿಂದ ಸಂಜು ಹಾಗೂ ಪಂತ್ ಚುಟುಕು ವಿಶ್ವಕಪ್‌ಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಟಿ20 ವಿಶ್ವಕಪ್‌ಗೆ ಇಂದು ಭಾರತ ತಂಡ ಪ್ರಕಟ ನಿರೀಕ್ಷೆ: ಮೇ 01 ಡೆಡ್‌ಲೈನ್‌

ಇನ್ನು ಅಚ್ಚರಿಯ ಸಂಗತಿಯೆಂದರೆ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿನಿಶಿಂಗ್ ಮೂಲಕ ಅಬ್ಬರಿಸುತ್ತಿರುವ ಶಿವಂ ದುಬೆ ಹಾಗೂ ರಿಂಕು ಸಿಂಗ್ ಇಬ್ಬರೂ 15 ಆಟಗಾರರ ತಂಡದೊಳಗೆ ಸ್ಥಾನ ಪಡೆಯುತ್ತಾರೋ ಅಥವಾ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯುತ್ತಾರೋ ಎನ್ನುವ ಕುತೂಹಲ ಜೋರಾಗಿದೆ.

ಭಾರತದ ಸಂಭಾವ್ಯರ ಪಟ್ಟಿ

ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಿವಂ ದುಬೆ, ರಿಂಕು ಸಿಂಗ್‌, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಅರ್ಶ್‌ದೀಪ್‌ ಸಿಂಗ್‌, ಆವೇಶ್‌ ಖಾನ್‌/ಮೊಹಮದ್‌ ಸಿರಾಜ್‌.

click me!