
ಮುಂಬೈ (ಮಾ.11): 2026ರ ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದ ಬಳಿಕ ಟೀಮ್ ಇಂಡಿಯಾ ಪ್ಲೇಯರ್ಸ್ ಸಾಮಾನ್ಯವಾಗಿ ಚಾರ್ಟರ್ಡ್ ವಿಮಾನ ಅಥವಾ ಸ್ಪೆಷಲ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಾರೆ. ಆದರೆ, ಆಲ್ ರೌಂಡರ್ ಶಿವಂ ದುಬೆ ಮಾತ್ರ ಅನಿವಾರ್ಯವಾಗಿ ಅತಿ ಸಾಮಾನ್ಯರಂತೆ ರೈಲು ಏರಬೇಕಾಯಿತು. ಅಹಮದಾಬಾದ್‌ನಿಂದ ಮುಂಬೈಗೆ ಯಾವುದೇ ವಿಮಾನದ ಟಿಕೆಟ್‌ಗಳು ಲಭ್ಯವಿಲ್ಲದ ಕಾರಣ, ಅವರು 3ನೇ ಎಸಿ (3rd AC) ರೈಲು ಟಿಕೆಟ್ ಕಾಯ್ದಿರಿಸಿ ಪ್ರಯಾಣ ಬೆಳೆಸಿದರು.
'ದಿ ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿದ 32 ವರ್ಷದ ದುಬೆ, ಈ ಅಪರೂಪದ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ. "ನನಗೆ ಮತ್ತು ನನ್ನ ಕುಟುಂಬಕ್ಕೆ ವಿಮಾನದ ಟಿಕೆಟ್‌ಗಳು ಸಿಗಲೇ ಇಲ್ಲ. ರಸ್ತೆಯ ಮೂಲಕ ಹೋಗುವ ಆಯ್ಕೆಯೂ ಇತ್ತು, ಆದರೆ ಅದಕ್ಕಿಂತ ರೈಲು ಪ್ರಯಾಣವೇ ವೇಗವಾಗಿತ್ತು. ಹಾಗಾಗಿ ಮುಂಜಾನೆಯ ರೈಲು ಹಿಡಿಯಲು ನಿರ್ಧರಿಸಿದೆ," ಎಂದಿದ್ದಾರೆ.
ಶಿವಂ ದುಬೆ ತಮ್ಮ ಪತ್ನಿ ಅಂಜುಂ ಮತ್ತು ಸ್ನೇಹಿತನೊಂದಿಗೆ ರೈಲು ಏರಲು ನಿರ್ಧರಿಸಿದಾಗ ಅವರ ಆಪ್ತ ವಲಯದಲ್ಲಿ ಆತಂಕ ಶುರುವಾಗಿತ್ತು. "ರೈಲಿನಲ್ಲಿ ಯಾರಾದರೂ ನಿಮ್ಮನ್ನು ಗುರುತಿಸಿದರೆ ಏನು ಮಾಡುವುದು? ಎಂದು ಎಲ್ಲರೂ ಕೇಳಿದ್ದರು," ಎಂದು ದುಬೆ ನೆನಪಿಸಿಕೊಂಡಿದ್ದಾರೆ.
ತನ್ನ ಗುರುತು ಸಿಗದಂತೆ ತಡೆಯಲು ದುಬೆ ಅವರು ಕ್ಯಾಪ್, ಮಾಸ್ಕ್ ಮತ್ತು ಉದ್ದನೆಯ ತೋಳಿನ ಟಿ-ಶರ್ಟ್ ಧರಿಸಿದ್ದರು. ಅಷ್ಟೇ ಅಲ್ಲ, ಮುಂಜಾನೆ 5:10ಕ್ಕೆ ಹೊರಡುವ ರೈಲನ್ನು ಆಯ್ದುಕೊಂಡಿದ್ದರು. "ರೈಲು ಹೊರಡುವ 5 ನಿಮಿಷ ಮೊದಲು ಮಾತ್ರ ನಾನು ಕಾರಿನಿಂದ ಇಳಿದು ನೇರವಾಗಿ ಕೋಚ್ ಒಳಗೆ ಓಡುತ್ತೇನೆ ಎಂದು ನನ್ನ ಪತ್ನಿಗೆ ಹೇಳಿದ್ದೆ," ಎಂದು ಶಿವಂ ದುಬೇ ಹೇಳಿದ್ದಾರೆ.
ರೈಲಿನಲ್ಲಿ ಹೆಚ್ಚು ಜನರಿಗೆ ಕಾಣಿಸಬಾರದು ಎಂದು ದುಬೆ ಅವರು ತಮಗೆ ನೀಡಲಾಗಿದ್ದ ಟಾಪ್ ಬರ್ತ್ (ಮೇಲಿನ ಸೀಟು) ಏರಿ ಮಲಗಿದ್ದರು. ಆದರೆ ಈ ನಡುವೆ ಒಂದು ಸಣ್ಣ ಹೈಡ್ರಾಮಾ ಕೂಡ ನಡೆದಿದೆ. ಟಿಕೆಟ್ ಕಲೆಕ್ಟರ್ ಬಂದಾಗ "ಶಿವಂ ದುಬೆ? ಯಾರವರು, ಕ್ರಿಕೆಟಿಗನಾ?" ಎಂದು ಕೇಳಿದ್ದಾರೆ. ತಕ್ಷಣ ಪರಿಸ್ಥಿತಿಯನ್ನು ನಿಭಾಯಿಸಿದ ದುಬೆ ಪತ್ನಿ ಅಂಜುಂ, "ಇಲ್ಲ, ಇಲ್ಲ.. ಅವರು ಯಾಕೆ ರೈಲಲ್ಲಿ ಪ್ರಯಾಣ ಮಾಡ್ತಾರೆ?" ಎಂದು ಹೇಳಿ ಗುರುರು ಸಿಗದಂತೆ ನೋಡಿಕೊಂಡಿದ್ದರು. ಟಿಟಿ ಕೂಡ ಅಷ್ಟಕ್ಕೇ ಸುಮ್ಮನಾಗಿ ಮುಂದೆ ಹೋಗಿದ್ದರು.
ಒಂದು ವೇಳೆ ಜನರ ಗುಂಪು ದುಬೆಯನ್ನು ಗುರುತಿಸಿದರೆ ಸಂಭವಿಸಬಹುದಾದ ಗೊಂದಲವನ್ನು ತಡೆಯಲು ಅವರೊಂದಿಗೆ ಒಬ್ಬ ಪೊಲೀಸ್ ಅಧಿಕಾರಿಯೂ ಇದ್ದರು. "ರಾತ್ರಿ ಶೌಚಾಲಯಕ್ಕೆ ಹೋಗಲು ಕೆಳಗೆ ಇಳಿದಾಗಲೂ ಯಾರೂ ನನ್ನನ್ನು ಗುರುತಿಸಲಿಲ್ಲ. ಆದರೆ ಮುಂಬೈನ ಬೊರಿವಲಿ ನಿಲ್ದಾಣದಲ್ಲಿ ಹಗಲಿನಲ್ಲಿ ಇಳಿಯುವಾಗ ಜನರ ಗಮನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಆತಂಕವಿತ್ತು," ಎಂದು ದುಬೆ ಹೇಳಿದ್ದಾರೆ.
ಸಾಮಾನ್ಯವಾಗಿ ವಿಮಾನ ನಿಲ್ದಾಣಕ್ಕೆ ಬರುತ್ತಾರೆ ಎಂದು ನಿರೀಕ್ಷಿಸಿದ್ದ ಅಧಿಕಾರಿಗಳಿಗೆ ದುಬೆ ಅವರ ರೈಲು ಪ್ರಯಾಣ ಅಚ್ಚರಿ ಮೂಡಿಸಿತ್ತು. ಆದರೆ ಬೊರಿವಲಿ ನಿಲ್ದಾಣಕ್ಕೆ ಪೊಲೀಸ್ ರಕ್ಷಣೆ ಒದಗಿಸಿದ್ದರಿಂದ ಅವರು ಸುರಕ್ಷಿತವಾಗಿ ಮನೆ ತಲುಪಲು ಸಾಧ್ಯವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.