ಐಸಿಸಿ ಟಿ20 ರ‍್ಯಾಂಕಿಂಗ್: ಅಭಿಷೇಕ್ ಶರ್ಮಾ ನಂ.1, ಜಿಗಿತ ಕಂಡ ಸಂಜು ಸ್ಯಾಮ್ಸನ್; ಟಾಪ್ 10ನಲ್ಲಿ ಭಾರತೀಯರೇ ಬೆಸ್ಟ್!

Published : Mar 11, 2026, 03:38 PM IST
Sanju Samson-Gautam Gambhir

ಸಾರಾಂಶ

ಟಿ20 ವಿಶ್ವಕಪ್ ಬಳಿಕ ಐಸಿಸಿ ಬಿಡುಗಡೆ ಮಾಡಿದ ಹೊಸ ರ‍್ಯಾಂಕಿಂಗ್‌ನಲ್ಲಿ ಸಂಜು ಸ್ಯಾಮ್ಸನ್ 18 ಸ್ಥಾನಗಳ ಏರಿಕೆ ಕಂಡು ತಮ್ಮ ವೃತ್ತಿಜೀವನದ ಶ್ರೇಷ್ಠ 22ನೇ ಸ್ಥಾನಕ್ಕೇರಿದ್ದಾರೆ. ಬ್ಯಾಟಿಂಗ್‌ನಲ್ಲಿ ಅಭಿಷೇಕ್ ಶರ್ಮಾ ನಂ.1 ಸ್ಥಾನ ಉಳಿಸಿಕೊಂಡರೆ, ವರುಣ್ ಚಕ್ರವರ್ತಿ ಅಗ್ರಸ್ಥಾನ ಬಿಟ್ಟುಕೊಟ್ಟಿದ್ದಾರೆ.

ದುಬೈ: ಟಿ-20 ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮಲಯಾಳಿ ಆಟಗಾರ ಸಂಜು ಸ್ಯಾಮ್ಸನ್, ಈಗ ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲೂ ಸಖತ್ ಸದ್ದು ಮಾಡಿದ್ದಾರೆ. ವಿಶ್ವಕಪ್ ಬಳಿಕ ಐಸಿಸಿ ಬಿಡುಗಡೆ ಮಾಡಿದ ಹೊಸ ರ‍್ಯಾಂಕಿಂಗ್ ಪಟ್ಟಿಯಲ್ಲಿ ಸಂಜು 18 ಸ್ಥಾನಗಳ ಏರಿಕೆ ಕಂಡು, ತಮ್ಮ ವೃತ್ತಿಜೀವನದ ಶ್ರೇಷ್ಠ 22ನೇ ರ‍್ಯಾಂಕ್‌ಗೆ ತಲುಪಿದ್ದಾರೆ. ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಸಂಜು 65ನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ, ವಿಶ್ವಕಪ್‌ನ ಅದ್ಭುತ ಆಟದಿಂದಾಗಿ ಒಟ್ಟು 43 ಸ್ಥಾನಗಳ ಏರಿಕೆ ಕಂಡಂತಾಗಿದೆ. ವಿಶ್ವಕಪ್‌ನಲ್ಲಿ ಸತತ ಮೂರು ಅರ್ಧಶತಕ ಸಿಡಿಸಿ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದ ಸಂಜು, ಟಾಪ್ 10 ರೊಳಗೆ ಬರುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.

ವಿಶ್ವಕಪ್‌ನಲ್ಲಿ ನಿರೀಕ್ಷಿತ ಆಟವಾಡದಿದ್ದರೂ, ಫೈನಲ್‌ನಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ಭಾರತದ ಓಪನರ್ ಅಭಿಷೇಕ್ ಶರ್ಮಾ, 875 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು, ವಿಶ್ವಕಪ್‌ನಲ್ಲಿ 317 ರನ್ ಗಳಿಸಿ ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದ ಇಶಾನ್ ಕಿಶನ್, ಎರಡು ಸ್ಥಾನ ಮೇಲೇರಿ 2ನೇ ರ‍್ಯಾಂಕ್‌ಗೆ ಬಂದಿದ್ದಾರೆ. ಇದು ಈ ವಾರದ ಪ್ರಮುಖ ಬದಲಾವಣೆ. ನಂ.1 ಸ್ಥಾನದಲ್ಲಿರುವ ಅಭಿಷೇಕ್‌ಗಿಂತ ಇಶಾನ್ ಕೇವಲ 4 ರೇಟಿಂಗ್ ಪಾಯಿಂಟ್ಸ್ ಮಾತ್ರ ಹಿಂದಿದ್ದಾರೆ.

ಕುಸಿದ ಸೂರ್ಯ ಕುಮಾರ್ ಯಾದವ್

ವಿಶ್ವಕಪ್‌ನಲ್ಲಿ ಮಿಂಚಿದ್ದ ಆಲ್‌ರೌಂಡರ್ ಶಿವಂ ದುಬೆ ನಾಲ್ಕು ಸ್ಥಾನ ಮೇಲೇರಿ 27ನೇ ಸ್ಥಾನಕ್ಕೆ ಬಂದರೆ, ತಿಲಕ್ ವರ್ಮಾ ಒಂದು ಸ್ಥಾನ ಕಳೆದುಕೊಂಡು 7ನೇ ಸ್ಥಾನದಲ್ಲಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಎರಡು ಸ್ಥಾನ ಕುಸಿದು 9ನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್, ಕಿಶನ್, ತಿಲಕ್ ಮತ್ತು ಸೂರ್ಯ ಸೇರಿ ಒಟ್ಟು ನಾಲ್ವರು ಭಾರತೀಯ ಆಟಗಾರರು ಬ್ಯಾಟಿಂಗ್ ರ‍್ಯಾಂಕಿಂಗ್‌ನ ಟಾಪ್ 10 ಪಟ್ಟಿಯಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭಾರತದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ನಂಬರ್ 1 ಸ್ಥಾನವನ್ನು ಕಳೆದುಕೊಂಡಿದ್ದಾರೆ. ವಿಶ್ವಕಪ್ ಸೂಪರ್ 8 ಹಂತದಿಂದ ಅವರು ನಿರಾಸೆ ಮೂಡಿಸಿದ್ದರು. ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್, ವರುಣ್ ಅವರನ್ನು ಹಿಂದಿಕ್ಕಿ 753 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. 740 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ವರುಣ್ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿದ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಸುಧಾರಿಸಿಕೊಂಡು 6ನೇ ರ‍್ಯಾಂಕ್‌ಗೆ ತಲುಪಿದ್ದಾರೆ. ಆಲ್‌ರೌಂಡರ್ ಅಕ್ಷರ್ ಪಟೇಲ್ ಆರು ಸ್ಥಾನಗಳ ಜಿಗಿತ ಕಂಡು 17ನೇ ರ‍್ಯಾಂಕ್‌ಗೆ ಬಂದಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಿಂಬಾಬ್ವೆ ನಾಯಕ ಸಿಕಂದರ್ ರಝಾ ಮೊದಲ ಸ್ಥಾನ ಮತ್ತು ಭಾರತದ ಹಾರ್ದಿಕ್ ಪಾಂಡ್ಯ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಬ್ಬರೂ ಈ ವಾರ ತಮ್ಮ ವೃತ್ತಿಜೀವನದ ಗರಿಷ್ಠ ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.

ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 33 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವಕಪ್ ಇತಿಹಾಸದಲ್ಲೇ ಅತಿ ವೇಗದ ಶತಕ ಬಾರಿಸಿದ್ದ ನ್ಯೂಜಿಲೆಂಡ್ ಓಪನರ್ ಫಿನ್ ಅಲೆನ್, ಏಳು ಸ್ಥಾನ ಮೇಲೇರಿ 20ನೇ ರ‍್ಯಾಂಕ್‌ಗೆ ಬಂದಿದ್ದಾರೆ. ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದ ಇಂಗ್ಲೆಂಡ್‌ನ ಜೇಕಬ್ ಬೆಥೆಲ್ 17 ಸ್ಥಾನಗಳ ಜಿಗಿತ ಕಂಡು 16ನೇ ರ‍್ಯಾಂಕ್‌ಗೆ ತಲುಪಿದ್ದಾರೆ. ನ್ಯೂಜಿಲೆಂಡ್‌ನ ಮತ್ತೊಬ್ಬ ಓಪನರ್ ಟಿಮ್ ಸೈಫರ್ಟ್ ನಾಲ್ಕು ಸ್ಥಾನ ಏರಿಕೆ ಕಂಡು 6ನೇ ರ‍್ಯಾಂಕ್‌ಗೆ ಬಂದಿರುವುದು ಇನ್ನೊಂದು ಪ್ರಮುಖ ಬದಲಾವಣೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾಚಿಕೆಯಾಗಬೇಕು...! ಟಿ20 ವಿಶ್ವಕಪ್ ಗೆಲ್ಲಿಸಿದ ಗೌತಮ್ ಗಂಭೀರ್ ಮೇಲೆ ಕಿಡಿಕಾರಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
ಐಪಿಎಲ್ 2026ಕ್ಕೆ ಎದುರಾದ ವಿಘ್ನ, LPG ಗ್ಯಾಸ್ ಸಮಸ್ಯೆಯಿಂದ ಟೂರ್ನಿ ಆರಂಭವೇ ಅನುಮಾನ