
ಲಾಸ್ ಏಂಜಲೀಸ್: ಬಾಲಿವುಡ್ ಕಿಂಗ್ ಖಾನ್ ಖ್ಯಾತಿಯ ಶಾರುಕ್ ಖಾನ್ ಅಧಿಕೃತವಾಗಿ ಲಾಸ್ ಏಂಜಲೀಸ್‌ನಲ್ಲಿ ಹೊಸದಾಗಿ ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ಅನಾವರಣ ಮಾಡಿದ್ದಾರೆ. ಇದು ಈ ಕ್ರೀಡೆಯ ಜಾಗತಿಕ ವಿಸ್ತರಣೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಸ್ಟೇಡಿಯಂ ಅನ್ನು ಕೋಲ್ಕತಾ ನೈಟ್ ರೈಡರ್ಸ್ ಗ್ರೂಪ್, ಮೇಜರ್ ಲೀಗ್ ಕ್ರಿಕೆಟ್(MLC) ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದ ಪೊಮೊನಾ ಎನ್ನುವ ನಗರದಲ್ಲಿ ಈ ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ಕಟ್ಟಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಶಾರುಕ್ ಖಾನ್ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಫ್ರಾಂಚೈಸಿ ಪಾಲ್ಗೊಳ್ಳುತ್ತಾ ಬಂದಿದೆ. ಈ ಸ್ಟೇಡಿಯಂ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಅಧಿಕೃತ ತವರು ಮೈದಾನವಾಗಿದೆ.
ಈ ಸ್ಟೇಡಿಯಂ ಉದ್ಘಾಟಿಸಿ ಮಾತನಾಡಿದ ಶಾರುಕ್ ಖಾನ್, ಈ ಯೋಜನೆಯು ಬಹುಕಾಲದ ಕನಸು ನನಸಾಗುತ್ತಿದೆ ಎಂದು ಬಣ್ಣಿಸಿದ್ದಾರೆ. ಈ ಸ್ಟೇಡಿಯಂ ಕ್ರೀಡೆಯ ಹೊರತಾಗಿ ಮನರಂಜನೆ, ಕುಟುಂಬಗಳ ಮಿಲನ ಹಾಗೂ ಅದ್ಭುತ ಅವಿಸ್ಮರಣೀಯ ನೆನಪುಗಳಿಗೆ ಈ ಸ್ಥಳ ಸಾಕ್ಷಿಯಾಗಲಿದೆ ಎಂದು ಕಿಂಗ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಶಾರುಕ್ ಖಾನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಕನಸಾಗಿ ಆರಂಭವಾಗಿದ್ದು, ಇಂದು ನನಸಾಗಿದೆ. ನಿಮ್ಮೆಲ್ಲರನ್ನು ನೈಟ್ ರೈಡರ್ಸ್ ಕ್ರಿಕೆಟ್ ಮೈದಾನ, ಲಾಸ್ ಏಂಜಲೀಸ್‌ಗೆ ಸ್ವಾಗತಿಸುತ್ತಿದ್ದೇವೆ. ಇದು ಕ್ರೀಡೆಗಳಿಗೆ ಮಾತ್ರವಲ್ಲದೇ ಮನರಂಜನೆ ಮತ್ತು ಕುಟುಂಬಗಳಿಗೆ ಹಾಗೂ ಶಾಶ್ವತವಾಗಿ ನೆನಪುಗಳನ್ನು ಉಳಿಸಲು ನಿರ್ಮಿಸಲಾದ ಸ್ಥಳ. ಈ ಪಯಣದಲ್ಲಿ ಸಹಕಾರ ನೀಡಿದ ಜಯ್ ಶಾ ಅವರಿಗೆ ವಿಶೇಷ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಕೆಲ ಮಾಧ್ಯಮಗಳ ವರದಿಯ ಪ್ರಕಾರ ಯುನೇಟೆಡ್ ಸ್ಟೇಟ್ಸ್‌ನಲ್ಲಿ ಕ್ರಿಕೆಟ್‌ಗೆ ಉತ್ತೇಜನ ನೀಡಲು ಈ ಸ್ಟೇಡಿಯಂ ಹೆಚ್ಚು ನೆರವು ನೀಡುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಇನ್ನು ಈ ಸ್ಟೇಡಿಯಂ ಎಂಎಲ್‌ಸಿ ಮ್ಯಾಚ್‌ಗಳಿಗೆ ಮಾತ್ರವಲ್ಲದೇ, ಮುಂಬರುವ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಟೂರ್ನಿಗೆ ಆತಿಥ್ಯ ವಹಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಶಾರುಕ್ ಖಾನ್, ಜೂಹಿ ಚಾವ್ಲಾ ಮತ್ತು ಜೇ ಮೆಹ್ತಾ ಅವರೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ-ಮಾಲೀಕರಾಗಿದ್ದಾರೆ. ನೈಟ್ ರೈಡರ್ಸ್ ಬ್ರ್ಯಾಂಡ್ ಅನ್ನು ಜಾಗತಿಕವಾಗಿ ಗುರುತಿಸಿಕೊಂಡ ಕ್ರಿಕೆಟ್ ಫ್ರಾಂಚೈಸಿ ಆಗಿ ನಿರ್ಮಿಸುವಲ್ಲಿ ಶಾರುಕ್ ಖಾನ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.