
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸೋತ ಬೆನ್ನಲ್ಲೇ, ಕ್ಯಾಪ್ಟನ್ ಶುಭ್‌ಮನ್ ಗಿಲ್ ವಿರುದ್ಧ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ. ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಮ್ಯಾಚ್‌ನಲ್ಲಿ ಗುಜರಾತ್ ನೀಡಿದ್ದ 206 ರನ್‌ಗಳ ಬೃಹತ್ ಟಾರ್ಗೆಟ್ ಅನ್ನು ಆರ್‌ಸಿಬಿ ಇನ್ನೂ 7 ಎಸೆತ ಬಾಕಿ ಇರುವಂತೆಯೇ ಚೇಸ್ ಮಾಡಿ ಗೆದ್ದಿತ್ತು. ಪಂದ್ಯದ ನಿರ್ಣಾಯಕ ಹಂತಗಳಲ್ಲಿ ಗಿಲ್, ಬೌಲರ್‌ಗಳನ್ನು ಬಳಸಿಕೊಂಡ ರೀತಿ ಸರಿ ಇರಲಿಲ್ಲ ಅಂತ ಸೆಹ್ವಾಗ್ ನೇರವಾಗಿ ಹೇಳಿದ್ದಾರೆ.
ಕೊನೆಯ ಮೂರು ಓವರ್‌ಗಳಲ್ಲಿ 22-25 ರನ್ ಬೇಕಿದ್ದಾಗ, ಮೊಹಮ್ಮದ್ ಸಿರಾಜ್ ಅವರಂತಹ ಬೌಲರ್‌ಗೆ ಬಾಲ್ ಕೊಟ್ಟು ವಿಕೆಟ್ ತೆಗೆದಿದ್ದರೆ, ಪಂದ್ಯ ಕೊನೆಯ ಓವರ್‌ವರೆಗೂ ಹೋಗುತ್ತಿತ್ತು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. "ಆಟ ಕೊನೆ ಓವರ್‌ವರೆಗೂ ಹೋಗಲೇ ಇಲ್ಲ. ಇಲ್ಲಿ ಕ್ಯಾಪ್ಟನ್ ಲೆಕ್ಕಾಚಾರವೇ ತಪ್ಪಾಗಿದೆ. ಪ್ರಸಿದ್ಧ್ ಕೃಷ್ಣ ಮತ್ತು ರಶೀದ್ ಖಾನ್ ದುಬಾರಿಯಾಗಬಹುದು, ಆದರೆ ಅವರನ್ನು ಮತ್ತೆ ಬೌಲಿಂಗ್‌ಗೆ ತರುವುದು ಕ್ಯಾಪ್ಟನ್‌ನ ಜವಾಬ್ದಾರಿ" ಎಂದು ಸೆಹ್ವಾಗ್ ಹೇಳಿದ್ದಾರೆ.
ಅಷ್ಟೇ ಅಲ್ಲ, ಮೊದಲ ಸ್ಪೆಲ್‌ನಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದ ಸಿರಾಜ್‌ರನ್ನು ಸರಿಯಾಗಿ ಬಳಸಿಕೊಳ್ಳದೆ, ಮಾನವ್ ಸುತಾರ್‌ಗೆ ಬಾಲ್ ಕೊಟ್ಟಿದ್ದು ದೊಡ್ಡ ತಪ್ಪಾಯ್ತು ಅಂತಾನೂ ಸೆಹ್ವಾಗ್ ಬೆಟ್ಟು ಮಾಡಿದ್ದಾರೆ. ಆ ಓವರ್‌ನಲ್ಲಿ ಆರ್‌ಸಿಬಿ ಬರೋಬ್ಬರಿ 15 ರನ್ ಚಚ್ಚಿತ್ತು. ಭಾರತ ತಂಡವನ್ನೂ ಮುನ್ನಡೆಸುವ ಶುಭ್‌ಮನ್ ಗಿಲ್, ಒತ್ತಡದ ಸನ್ನಿವೇಶಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ವಿಫಲರಾಗುತ್ತಿದ್ದಾರೆ ಎಂಬ ಟೀಕೆ ಜೋರಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಗುಜರಾತ್ ಬೌಲರ್‌ಗಳು ಕೊನೆಯ ಓವರ್‌ಗಳಲ್ಲಿ 73 ರನ್ ಬಿಟ್ಟುಕೊಟ್ಟಿದ್ದರು. ಇದರಿಂದಾಗಿ ಆ ಮ್ಯಾಚ್‌ನಲ್ಲಿ ಗುಜರಾತ್ 99 ರನ್‌ಗಳ ಹೀನಾಯ ಸೋಲು ಕಂಡಿತ್ತು.
"ಎರಡು ಓವರ್‌ನಲ್ಲಿ 31 ರನ್ ಕೊಟ್ಟರು ಅನ್ನೋ ಕಾರಣಕ್ಕೆ ಒಬ್ಬ ಬೌಲರ್‌ನನ್ನು ಮತ್ತೆ ಬಳಸದೇ ಇರುವುದು ಹೇಡಿತನ. ಇದು ಸೋಲನ್ನು ಒಪ್ಪಿಕೊಂಡ ಹಾಗೆ" ಎಂದು ಖಾರವಾಗಿ ಹೇಳಿದ್ದಾರೆ. ಮಿಡಲ್ ಓವರ್ ಮತ್ತು ಡೆತ್ ಓವರ್‌ಗಳಲ್ಲಿ ವಿಕೆಟ್ ಪಡೆಯಬಲ್ಲ ಬೌಲರ್‌ಗಳಿದ್ದರೂ, ಅವರನ್ನು ಸರಿಯಾಗಿ ಬಳಸಿಕೊಳ್ಳಲು ಆಗದಿರುವುದು ಈ ಸೀಸನ್‌ನಲ್ಲಿ ಗುಜರಾತ್ ತಂಡಕ್ಕೆ ದೊಡ್ಡ ತಲೆನೋವಾಗಿದೆ.
ಆರ್‌ಸಿಬಿ ಎದುರಿನ ಸೋಲಿನೊಂದಿಗೆ ಗುಜರಾತ್ ಟೈಟಾನ್ಸ್ ತಂಡವು ಆಡಿದ ಏಳು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ನಾಲ್ಕು ಸೋಲುಗಳೊಂದಿಗೆ ಆರು ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಳ್ಳಬೇಕಿದ್ದರೇ ಶುಭ್‌ಮನ್ ಗಿಲ್ ಪಡೆಯು ಲೀಗ್ ಹಂತದಲ್ಲಿ ಇನ್ನುಳಿದ ಏಳು ಪಂದ್ಯಗಳ ಪೈಕಿ ಕನಿಷ್ಠ ಐದು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.