
ಬೆಂಗಳೂರು: ಐಪಿಎಲ್ ಆರೆಂಜ್ ಕ್ಯಾಪ್ ಮತ್ತೆ 'ಕಿಂಗ್' ವಿರಾಟ್ ಕೊಹ್ಲಿ ಮುಡಿಗೇರಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತಾರಾ ಆಟಗಾರ ಕೊಹ್ಲಿ, ಏಳು ಪಂದ್ಯಗಳಿಂದ 328 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ನಿನ್ನೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 44 ಎಸೆತಗಳಲ್ಲಿ 81 ರನ್ ಚಚ್ಚಿದ್ದರು. ನಾಲ್ಕು ಸಿಕ್ಸರ್ ಮತ್ತು ಎಂಟು ಬೌಂಡರಿಗಳನ್ನು ಒಳಗೊಂಡ ಈ ಇನ್ನಿಂಗ್ಸ್‌ಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈವರೆಗೆ ಮೂರು ಅರ್ಧಶತಕಗಳನ್ನು ಬಾರಿಸಿರುವ ಕೊಹ್ಲಿ, 54.66ರ ಸರಾಸರಿ ಮತ್ತು 163.18ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಕೊಹ್ಲಿ ಅಗ್ರಸ್ಥಾನಕ್ಕೇರಿದ್ದರಿಂದ, ಸನ್‌ರೈಸರ್ಸ್ ಹೈದರಾಬಾದ್‌ನ ಓಪನರ್ ಅಭಿಷೇಕ್ ಶರ್ಮಾ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಅಭಿಷೇಕ್ ಏಳು ಪಂದ್ಯಗಳಲ್ಲಿ 323 ರನ್ ಗಳಿಸಿದ್ದಾರೆ. ಅಜೇಯ 135 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಅವರ ಖಾತೆಯಲ್ಲಿ ಒಂದು ಶತಕ ಮತ್ತು ಎರಡು ಅರ್ಧಶತಕಗಳಿವೆ. ಅಭಿಷೇಕ್ 53.83ರ ಸರಾಸರಿ ಮತ್ತು 215.33ರ ಸ್ಪೋಟಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಹೈದರಾಬಾದ್‌ಗೆ ಪಂದ್ಯವಿದ್ದು, ಅಭಿಷೇಕ್ ಮತ್ತೆ ಮೊದಲ ಸ್ಥಾನಕ್ಕೇರುವ ಅವಕಾಶವಿದೆ. ಹೈದರಾಬಾದ್ ತಂಡದ ಹೆನ್ರಿಚ್ ಕ್ಲಾಸೆನ್ 320 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕ್ಲಾಸೆನ್ 53.33ರ ಸರಾಸರಿ ಮತ್ತು 153.11ರ ಸ್ಟ್ರೈಕ್ ರೇಟ್ ಹೊಂದಿದ್ದು, ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. 62 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.
ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭ್‌ಮನ್ ಗಿಲ್ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದಾರೆ. ಕೇವಲ ಆರು ಪಂದ್ಯಗಳನ್ನಾಡಿರುವ ಗಿಲ್, ಇದುವರೆಗೆ 297 ರನ್ ಗಳಿಸಿದ್ದಾರೆ. 86 ಅವರ ಗರಿಷ್ಠ ಸ್ಕೋರ್. ಗಿಲ್ 49.50ರ ಸರಾಸರಿ ಮತ್ತು 149.24ರ ಸ್ಟ್ರೈಕ್ ರೇಟ್ ಹೊಂದಿದ್ದು, ಮೂರು ಅರ್ಧಶತಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿನ್ನೆ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಿಲ್ 24 ಎಸೆತಗಳಲ್ಲಿ 32 ರನ್ ಗಳಿಸಿದ್ದರು. ಕೊಹ್ಲಿ ಮತ್ತು ಗಿಲ್ ಅವರ ಏರಿಕೆಯಿಂದಾಗಿ, ಚೆನ್ನೈ ಸೂಪರ್ ಕಿಂಗ್ಸ್ ಓಪನರ್ ಸಂಜು ಸ್ಯಾಮ್ಸನ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಸಂಜು ಏಳು ಪಂದ್ಯಗಳಲ್ಲಿ 293 ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಜೇಯ 115 ರನ್ ಗಳಿಸಿದ್ದು ಅವರ ಗರಿಷ್ಠ ಸ್ಕೋರ್ ಆಗಿದೆ
ಪಟ್ಟಿಯಲ್ಲಿ ರಾಜಸ್ಥಾನ ರಾಯಲ್ಸ್‌ನ ವೈಭವ್ ಸೂರ್ಯವಂಶಿ (254), ಯಶಸ್ವಿ ಜೈಸ್ವಾಲ್ (245), ಆರ್‌ಸಿಬಿಯ ರಜತ್ ಪಾಟಿದಾರ್ (238), ಹೈದರಾಬಾದ್‌ನ ಇಶಾನ್ ಕಿಶನ್ (238), ಗುಜರಾತ್‌ನ ಸಾಯಿ ಸುದರ್ಶನ್ (235), ಮತ್ತು ಜೋಸ್ ಬಟ್ಲರ್ (231) ಕ್ರಮವಾಗಿ ಆರರಿಂದ ಹತ್ತನೇ ಸ್ಥಾನಗಳಲ್ಲಿದ್ದಾರೆ.
ಇನ್ನು ಗರಿಷ್ಠ ವಿಕೆಟ್ ಕಬಳಿಸಿದವರೆಗೆ ನೀಡಲಾಗುವ ಆರೆಂಜ್ ಕ್ಯಾಪ್ ಪೈಪೋಟಿ ಕೂಡಾ ಸಾಕಷ್ಟು ಜೋರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನ್ಸೂಲ್ ಕಂಬೋಜ್ 7 ಪಂದ್ಯಗಳಿಂದ 14 ವಿಕೆಟ್ ಕಬಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಲಖನೌ ಸೂಪರ್ ಜೈಂಟ್ಸ್‌ನ ಪ್ರತಿಭಾನ್ವಿತ ವೇಗಿ ಪ್ರಿನ್ಸ್ ಯಾದವ್ 13 ವಿಕೆಟ್ ಕಬಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದು ಕಂಬೋಕ್‌ಗೆ ಭಾರೀ ಪೈಪೋಟಿ ನೀಡುತ್ತಿದ್ದಾರೆ. ಇನ್ನುಳಿದಂತೆ ಇಶಾನ್ ಮಾಲಿಂಗ ಹಾಗೂ ಪ್ರಸಿದ್ದ್ ಕೃಷ್ಣ ತಲಾ 12 ವಿಕೆಟ್ ಕಬಳಿಸುವ ಮೂಲಕ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ಜೋಫ್ರಾ ಆರ್ಚರ್, ಭುವನೇಶ್ವರ್ ಕುಮಾರ್ ಹಾಗೂ ರವಿ ಬಿಷ್ಣೋಯ್ ತಲಾ 11 ವಿಕೆಟ್ ಕಬಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.