ಭಾರತ 297, ಬಾಂಗ್ಲಾದೇಶ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್‌!

By Kannadaprabha News  |  First Published Oct 13, 2024, 10:22 AM IST

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕ್ಲೀನ್‌ಸ್ವೀಪ್ ಮಾಡಿದೆ. ಮೂರನೇ ಪಂದ್ಯದಲ್ಲಿ ಭಾರತ ಅಕ್ಷರಶಃ ರನ್ ಮಳೆಯನ್ನೇ ಹರಿಸಿದೆ


ಹೈದರಾಬಾದ್‌: ಅಕ್ಷರಶಃ ರನ್‌ ಮಳೆ ಸುರಿಸಿದ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 3ನೇ ಟಿ20 ಪಂದ್ಯದಲ್ಲಿ ಹಲವು ವಿಶ್ವ ದಾಖಲೆಗಳನ್ನು ಮುರಿದು, 133 ರನ್‌ ಭರ್ಜರಿ ಗೆಲುವು ಸಾಧಿಸಿದೆ. ಜೊತೆಗೆ 3 ಪಂದ್ಯಗಳ ಸರಣಿಯನ್ನು 3-0 ಕೈವಶಪಡಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 6 ವಿಕೆಟ್‌ಗೆ ಕಲೆಹಾಕಿದ್ದು 297 ರನ್‌. ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌, ಹಾರ್ದಿಕ್‌ ಪಾಂಡ್ಯ, ರಿಯಾನ್‌ ಪರಾಗ್‌ ಟಿ20ಯಲ್ಲಿ ಭಾರತ ಗರಿಷ್ಠ ಸ್ಕೋರ್‌ ದಾಖಲಿಸಲು ಕಾರಣರಾದರು. ಸಂಜು ಕೇವಲ 47 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ 111 ರನ್‌ ಸಿಡಿಸಿದರು. ಸೂರ್ಯಕುಮಾರ್‌ 35 ಎಸೆತಗಳಲ್ಲಿ 8 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 75, ಹಾರ್ದಿಕ್‌ ಪಾಂಡ್ಯ 18 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 47 ರನ್‌ ಬಾರಿಸಿದರು. ರಿಯಾನ್‌ ಪರಾಗ್‌ 13 ಎಸೆತಗಳಲ್ಲಿ 34 ರನ್‌ ಸಿಡಿಸಿ ತಂಡವನ್ನು 300ರ ಸನಿಹಕ್ಕೆ ತಲುಪಿಸಿದರು. ಬಾಂಗ್ಲಾದ ನಾಲ್ವರು ಬೌಲರ್‌ಗಳು ತಲಾ 50+ ರನ್‌ ಬಿಟ್ಟುಕೊಟ್ಟರು.

Tap to resize

Latest Videos

undefined

ಟಿ20 ಪಂದ್ಯದಲ್ಲಿ ಭಾರತದ ಗರಿಷ್ಠ ರನ್ ದಾಖಲೆ, ಬಾಂಗ್ಲಾ ವಿರುದ್ದ ಸಿಕ್ಸರ್ ಸುರಿಮಳೆಗೆ 297 ರನ್!

ಬೃಹತ್‌ ಗುರಿ ಬೆನ್ನತ್ತಿದ ಬಾಂಗ್ಲಾ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹೋರಾಟ ನಡೆಸಿದರೂ, ಗೆಲುವು ಸಿಗಲಿಲ್ಲ. ತಂಡ 07 ವಿಕೆಟ್‌ ನಷ್ಟದಲ್ಲಿ 164 ರನ್‌ ಕಲೆಹಾಕಿತು. ಲಿಟನ್‌ ದಾಸ್‌ 42, ತೌಹೀದ್‌ ಹೃದೊಯ್‌ ಅಜೇಯ 63 ರನ್‌ ಗಳಿಸಿದರು. ರವಿ ಬಿಷ್ಣೋಯ್‌ 3 ವಿಕೆಟ್‌ ಕಿತ್ತರು.

ಸಂಕ್ಷಿಪ್ತ ಸ್ಕೋರ್: 
ಭಾರತ 297/6 (ಸಂಜು 111, ಸೂರ್ಯ 75, ಹಾರ್ದಿಕ್‌ 47, ರಿಯಾನ್‌ 34, ತಂಜೀಮ್‌ 3-66), ಬಾಂಗ್ಲಾದೇಶ 164/7 (ಲಿಟನ್‌ 42, ತೌಹೀದ್‌ 63*, ರವಿ 30/3)

297: ಪೂರ್ಣ ಸದಸ್ಯ ದೇಶದ ಗರಿಷ್ಠ ಸ್ಕೋರ್

ಭಾರತ ಸಿಡಿಸಿದ 297 ರನ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಐಸಿಸಿ ಪೂರ್ಣ ಸದಸ್ಯ ದೇಶವೊಂದು ಗಳಿಸಿದ ಗರಿಷ್ಠ ರನ್‌. 2019ರಲ್ಲಿ ಐರ್ಲೆಂಡ್‌ ವಿರುದ್ಧ ಅಫ್ಘಾನಿಸ್ತಾನ 278/3 ರನ್‌ ಗಳಿಸಿದ್ದು ಈ ವರೆಗಿನ ದಾಖಲೆ. ಒಟ್ಟಾರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಸ್ಕೋರ್‌ ದಾಖಲೆ ಇರುವುದು ನೇಪಾಳ ಹೆಸರಲ್ಲಿ. 2023ರ ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌ನಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 3 ವಿಕೆಟ್‌ಗೆ 314 ರನ್‌ ಗಳಿಸಿತ್ತು.

ಇಂಟ್ರೆಸ್ಟಿಂಗ್ ಅಂಕಿ-ಅಂಶ:

47 ಬೌಂಡರಿ: ಭಾರತ ಇನ್ನಿಂಗ್ಸ್‌ನಲ್ಲಿ ಒಟ್ಟು 47 ಫೋರ್‌, ಸಿಕ್ಸರ್‌ಗಳಿದ್ದವು. ಇದು ಅಂ.ರಾ. ಟಿ20ಯಲ್ಲಿ ತಂಡವೊಂದರ ಗರಿಷ್ಠ.

40 ಎಸೆತ: ಸಂಜು 40 ಎಸೆತದಲ್ಲಿ ಶತಕ ಪೂರ್ಣಗೊಳಿಸಿದರು. ಇದು ಅಂ.ರಾ. ಟಿ20ಯಲ್ಲೇ 4ನೇ ವೇಗದ ಶತಕ.

22 ಸಿಕ್ಸರ್‌: ಭಾರತ 22 ಸಿಕ್ಸರ್‌ ಸಿಡಿಸಿತು. ಇದು ಟಿ20ಯಲ್ಲಿ ಜಂಟಿ 3ನೇ ಗರಿಷ್ಠ.

200 ರನ್‌: ಭಾರತ 14 ಓವರ್‌ಗಳಲ್ಲಿ 200 ರನ್‌ ಪೂರ್ಣಗೊಳಿಸಿತು. ಇದು ಟಿ20ಯಲ್ಲಿ ತಂಡವೊಂದರ 2ನೇ ವೇಗದ 200. ಕಳೆದ ವರ್ಷ ವಿಂಡೀಸ್‌ ವಿರುದ್ಧ ದ.ಆಫ್ರಿಕಾ 13.5 ಓವರಲ್ಲಿ 200 ರನ್‌ ಗಳಿಸಿತ್ತು.

01 ಶತಕ: ಸಂಜು ಭಾರತದ ಪರ ಟಿ20ಯಲ್ಲಿ ಶತಕ ಬಾರಿಸಿದ ಮೊದಲ ವಿಕೆಟ್‌ ಕೀಪರ್‌ ಬ್ಯಾಟರ್‌.

ಭಾರತದ ವೇಗದ 100, 200 ರನ್‌: ಭಾರತ ಟಿ20ಯಲ್ಲಿ ವೇಗದ 100 ಹಾಗೂ 200 ರನ್‌ ದಾಖಲಿಸಿತು. 7.2 ಓವರ್‌ಗಳಲ್ಲಿ 100 ರನ್‌ ಪೂರ್ಣಗೊಳಿಸಿ ತಂಡ, 14 ಓವರ್‌ಗಳಲ್ಲಿ 200 ರನ್‌ ಗುರಿ ತಲುಪಿತು.

click me!