ಸಚಿನ್ ತೆಂಡುಲ್ಕರ್‌ಗೆ ಎಲ್ಲವೂ ಗೊತ್ತಿದೆ, ಆದ್ರೆ ಯಾರಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ: ವಿನೋದ್ ಕಾಂಬ್ಳಿ

By Naveen KodaseFirst Published Aug 17, 2022, 1:38 PM IST
Highlights

* ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ
* 1991ರಿಂದ 2000ದ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿನೋದ್ ಕಾಂಬ್ಳಿ
* ಜೀವನ ನಡೆಸಲು ಬಿಸಿಸಿಐ ಪಿಂಚಣಿ ಅವಲಂಭಿಸಿರುವ ಮಾಜಿ ಕ್ರಿಕೆಟಿಗ

ಮುಂಬೈ(ಆ.17): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ನೀಡುತ್ತಿರುವ ಪಿಂಚಣಿ ಹಣದಲ್ಲಿ ತಾವು ಬದುಕು ಸಾಗಿಸುತ್ತಿದ್ದು, ತಾವು ಕ್ರಿಕೆಟ್ ಸಂಬಂಧಿತ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಹೇಳಿದ್ದಾರೆ.  ಇದೇ ವೇಳೆ ತಾವು ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವುದು ತಮ್ಮ ಗೆಳೆಯ ಸಚಿನ್‌ ತೆಂಡುಲ್ಕರ್‌ಗೆ ಗೊತ್ತಿದೆ, ಆದರೆ ತಾವು ಯಾರಿಂದ ಏನನ್ನೂ ನಿರೀಕ್ಷಿಸುವುದಿಲ್ಲ ಎಂದು ಕಾಂಬ್ಳಿ ಹೇಳಿದ್ದಾರೆ.

50 ವರ್ಷದ ವಿನೋದ್ ಕಾಂಬ್ಳಿ, 2019ರಲ್ಲಿ ನಡೆದ ಮುಂಬೈ ಟಿ20 ಲೀಗ್‌ನಲ್ಲಿ ಕೊನೆಯ ಬಾರಿಗೆ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕೋವಿಡ್‌ ಲಗ್ಗೆಯಿಟ್ಟಿದ್ದರಿಂದಾಗಿ ಕೆಲ ಕಾಲ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾದವು. ತಾವೀಗ ಬಿಸಿಸಿಐ ನೀಡುವ 30,000 ಪಿಂಚಣಿ ಹಣದಿಂದ ಜೀವನ ಸಾಗಿಸುತ್ತಿರುವುದಾಗಿ ವಿನೋದ್ ಕಾಂಬ್ಳಿ ತಿಳಿಸಿದ್ದಾರೆ. ನೆರೂಲ್‌ನಲ್ಲಿರುವ ತೆಂಡುಲ್ಕರ್ ಮಿಡಲೆಸೆಕ್ಸ್‌ ಗ್ಲೋಬಲ್ ಅಕಾಡೆಮಿಯಲ್ಲಿ ಯುವ ಕ್ರಿಕೆಟಿಗರಿಗೆ ಮೆಂಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ತಾವಿರುವ ಸ್ಥಳದಿಂದ ನೆರೂಲ್‌ಗೆ ಸಾಕಷ್ಟು ದೂರ ಪ್ರಯಾಣ ನಡೆಸಬೇಕಿದೆ ಎಂದು ಹೇಳಿದ್ದಾರೆ.

ನಾನು ಬೆಳಗ್ಗೆ 5 ಗಂಟೆಗೆ ಎದ್ದು, ಕ್ಯಾಬ್ ನಲ್ಲಿ ಡಿವೈ ಪಾಟೀಲ್‌ ಸ್ಟೇಡಿಯಂಗೆ ಹೋಗುತ್ತಿದ್ದೆ. ಇದು ತುಂಬಾ ಒತ್ತಡವನ್ನುಂಟು ಮಾಡುತ್ತಿತ್ತು. ಇದಾದ ಬಳಿಕ ಸಂಜೆ BKC ಮೈದಾನದಲ್ಲಿ ಕೋಚಿಂಗ್ ಮಾಡುತ್ತಿದ್ದೆ. ನಾನೀಗ ಓರ್ವ ನಿವೃತ್ತ ಕ್ರಿಕೆಟಿಗ, ಸದ್ಯಕ್ಕಂತೂ ನಾನು ಬಿಸಿಸಿಐ ನೀಡುವ ಪಿಂಚಣೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದೇನೆ. ಬಿಸಿಸಿಐ ನನ್ನ ಪ್ರಮುಖ ಆದಾಯದ ಮೂಲ ಎನಿಸಿದೆ. ಹೀಗಾಗಿ ನಾನು ಬಿಸಿಸಿಐಗೆ ಕೃತಜ್ಞನಾಗಿದ್ದೇನೆ ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದರಿಂದಲೇ ನಮ್ಮ ಕುಟುಂಬ ನಿರ್ವಹಣೆ ಸಾಧ್ಯವಾಗಿದೆ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.

ಶ್ರೀಶಾಂತ್‌ - ವಿನೋದ್ ಕಾಂಬ್ಳಿ: ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ಕ್ರಿಕೆಟರ್ಸ್‌!

ನಿಮ್ಮ ಆರ್ಥಿಕ ಪರಿಸ್ಥಿಯ ಬಗ್ಗೆ ತಮ್ಮ ಬಾಲ್ಯದ ಗೆಳೆಯ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರಿಗೆ ಮಾಹಿತಿಯಿಲ್ಲವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾಂಬ್ಳಿ, ಅವರಿಗೆ ಎಲ್ಲವೂ ತಿಳಿದಿದೆ. ಆದರೆ ನಾನು ಅವರಿಂದ ಏನನ್ನೂ ನಿರೀಕ್ಷಿಸುತ್ತಿಲ್ಲ. ಮಿಡಲೆಸೆಕ್ಸ್‌ ಗ್ಲೋಬಲ್ ಅಕಾಡೆಮಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಈ ವಿಷಯದಲ್ಲಿ ನನಗೆ ಸಂತೋಷವಿದೆ. ಅವರು ನನ್ನ ಆತ್ಮೀಯ ಸ್ನೇಹಿತ. ಅವರು ಯಾವಾಗಲೂ ನನ್ನ ಜತೆಗಿದ್ದಾರೆ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.

ವಿನೋದ್ ಕಾಂಬ್ಳಿ ಭಾರತ ಕ್ರಿಕೆಟ್ ತಂಡದ ಪರ ಒಟ್ಟು 104 ಏಕದಿನ ಹಾಗೂ 17 ಟೆಸ್ಟ್ ಪಂದ್ಯಗಳನ್ನಾಡಿದ್ದು, ಒಟ್ಟಾರೆ 3,561 ರನ್ ಬಾರಿಸಿದ್ದಾರೆ. 1991ರಿಂದ 2000ದ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ವಿನೋದ್ ಕಾಂಬ್ಳಿ 4 ಟೆಸ್ಟ್ ಶತಕ ಹಾಗೂ 2 ಏಕದಿನ ಶತಕಗಳನ್ನು ಸಿಡಿಸಿದ್ದರು.

click me!