Rajat Patidar Birthday ಹುಟ್ಟುಹಬ್ಬದ ಸಂಭ್ರಮದಲ್ಲಿ ರೈಸಿಂಗ್ ಸ್ಟಾರ್ ರಜತ್ ಪಾಟಿದಾರ್

By Santosh NaikFirst Published Jun 1, 2022, 1:10 PM IST
Highlights

ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತದಲ್ಲಿ ಒಂದು ಮೆಟ್ಟಿಲು ಮೇಲೇರಲು ಕಾರಣವಾಗಿದ್ದು ರೈಸಿಂಗ್ ಸ್ಟಾರ್ ರಜತ್ ಪಾಟಿದಾರ್. ಇಂದು 29ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಆರ್ ಸಿಬಿ ತಂಡದ ಭವಿಷ್ಯದ ತಾರೆಯ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು.
 

ಬೆಂಗಳೂರು (ಜೂ.1): ಈ ಬಾರಿಯ ಐಪಿಎಲ್ ನ ಎಲಿಮಿನೇಟರ್ (2022 IPL Eliminator) ಪಂದ್ಯದಲ್ಲಿ ಆರ್ ಸಿಬಿ (RCB) ತಂಡದ ಪಾಲಿಗೆ ಆಧಾರವಾಗಿ ನಿಂತಿದ್ದು ರಜತ್ ಪಾಟಿದಾರ್ (Rajat Patidar). ಬುಧವಾರ ತಮ್ಮ 29ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಧ್ಯಪ್ರದೇಶದ (Madhya Pradesh)ಬ್ಯಾಟ್ಸ್ ಮನ್ ಈಗ ತಮ್ಮ ಆಟದ ಶೈಲಿಯ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೇವಲ 54 ಎಸೆತ ಎದುರಿಸಿದ ರಜತ್ ಪಾಟಿದಾರ್ 12 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ ಮೂಲಕ 112 ರನ್ ಸಿಡಿಸಿದ್ದರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿ, ಕೊನೇ ಹಂತದಲ್ಲಿ ಸಿಕ್ಕಿದ ಎಸೆತಗಳೆಲ್ಲವನ್ನೂ ಬೌಂಡರಿ, ಸಿಕ್ಸರ್ ಗ ಅಟ್ಟುವ ಛಾತಿಯಿಂದ ರಜತ್ ಪಾಟಿದಾರ್ ಗಮನ ಸೆಳೆದಿದ್ದಾರೆ. ಬಾಲ್ಯದಿಂದಲೂ ಸಮರ್ಪಣೆ ಹಾಗೂ ಶಿಸ್ತಿನ ಆಟವನ್ನು ಅಳವಡಿಸಿಕೊಂಡಿದ್ದ ರಜತ್ ಪಾಟಿದಾರ್ ಕ್ರಿಕೆಟ್ ಜೀವನದ ಬಗ್ಗೆ ಕುತೂಹಲಕಾರಿ ಅಂಶಗಳಿವೆ.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ರಜತ್ ಪಾಟಿದಾರ್ ಅವರನ್ನು ಯಾವ ತಂಡ ಕೂಡ ಖರೀದಿ ಮಾಡಿರಲಿಲ್ಲ. ಕಳೆದ ವರ್ಷ ತನ್ನ ತಂಡದಲ್ಲೇ ಇದ್ದಿದ್ದರೂ ಆರ್ ಸಿಬಿ ಕೂಡ ಇವರನ್ನು ಖರೀದಿ ಮಾಡುವ ಮನಸ್ಸು ಮಾಡಿರಲಿಲ್ಲ. ಕೊನೆಗೆ ಬದಲಿ ಆಟಗಾರನಾಗಿ ರಜತ್ ಪಾಟಿದಾರ್ ಆರ್ ಸಿಬಿ ತಂಡಕ್ಕೆ ಸೇರಿದ್ದರು. ಆದರೆ, ಐಪಿಎಲ್ ನ ಎಲಿಮಿನೇಟರ್ ನಲ್ಲಿ ಆಡಿದ ಇನ್ನಿಂಗ್ಸ್ ರಜತ್ ಅವರ ಅದೃಷ್ಟವನ್ನೇ ಬದಲಿಸಿದೆ.

ರಜತ್ ಅವರ ತಂದೆ ಮನೋಹರ್ ಪಾಟಿದಾರ್ ಅವರು ಮಧ್ಯಪ್ರದೇಶದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಇಂದೋರ್ ನಗರದ ಜನನಿಬಿಡ ಮಹಾರಾಣಿ ರಸ್ತೆ ಮಾರುಕಟ್ಟೆಯಲ್ಲಿ ಮೋಟಾರ್‌ಪಂಪ್ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಮಗನ ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದ ಅವರು, ಆತ ಅರ್ಧಶತಕ ಬಾರಿಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಶತಕ ಬಾರಿಸಿದ್ದಲ್ಲದೆ, ಅಜೇಯವಾಗಿ ಉಳಿದುಕೊಳ್ಳುವ ಮೂಲಕ ನಮಗೆಲ್ಲ ಅಚ್ಚರಿ ನೀಡಿದ ಎಂದಿದ್ದರು.

ತಂದೆಯ ಪ್ರಕಾರ, ಅವರ ಕುಟುಂಬವು ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಲು ರಜತ್ ಅವರೇ ಕಾರಣ. ರಜತ್‌ಗೆ ಬಾಲ್ಯದಿಂದಲೂ ಕ್ರಿಕೆಟ್‌ ಹುಚ್ಚಿತ್ತು ಮತ್ತು ಆಟದ ಕಡೆಗೆ ಅವರ ಆಳವಾದ ಒಲವನ್ನು ಕಂಡು ನಾವು ಅವರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದೆವು ಎಂದು ಪಾಟಿದಾರ್ ಹೇಳಿದ್ದಾರೆ. ರಜತ್ ಅವರು 8 ನೇ ವಯಸ್ಸಿನಲ್ಲಿ ಇಂದೋರ್‌ನ ಕ್ರಿಕೆಟ್ ಕ್ಲಬ್‌ಗೆ ಸೇರಿದ್ದರು ಮತ್ತು ಅವರು 10 ನೇ ವಯಸ್ಸಿನಲ್ಲಿ, ಅವರು ತಮ್ಮ ವಯಸ್ಸಿಗಿಂತ ಹಿರಿಯ ವಯಸ್ಸಿನ ಹುಡುಗರೊಂದಿಗೆ ಪಂದ್ಯಗಳನ್ನು ಆಡಲು ಆರಂಭಿಸಿದ್ದರು ಎಂದು ಪಾಟಿದಾರ್ ನೆನಪಿಸಿಕೊಳ್ಳುತ್ತಾರೆ, 'ಶಾಲಾ ಸಮಯವನ್ನು ಹೊರತುಪಡಿಸಿ, ರಜತ್ ಪ್ರತಿ ಕ್ರೀಡಾಋತುವಿನಲ್ಲಿ ಮನೆಯಿಂದ ಕ್ಲಬ್‌ಗೆ ಮತ್ತು ಕ್ಲಬ್‌ನಿಂದ ಮನೆ-ಮನೆಗೆ ಒಂದೇ ದಿನಚರಿಯನ್ನು ಹೊಂದಿದ್ದರು. ಇದೇ ಕಾರಣಕ್ಕಾಗಿ ಅವನಿಗೆ ಸ್ನೇಹಿತರು ಕೂಡ ಕಡಿಮೆಯಾದರು' ಎನ್ನುತ್ತಾರೆ.

Rajat Patidar Century 49 ಎಸೆತದಲ್ಲಿ ಸೆಂಚುರಿ, ಯಾರು ಈ ರಜತ್ ಪಾಟಿದಾರ್!

ಕ್ರಿಕೆಟ್‌ ಗೆ ಒಂಚೂರು ಬಿಡುವು ಇರದ ಕಾರಣ ರಜತ್ 12 ನೇ ತರಗತಿಯವರೆಗೆ ಮಾತ್ರ ಓದಲು ಸಾಧ್ಯವಾಯಿತು ಎಂದು ಪಾಟಿದಾರ್ ಹೇಳುತ್ತಾರೆ. "ನಾನು ರಜತ್‌ನನ್ನು ಸ್ಥಳೀಯ ಕಾಲೇಜಿಗೆ ಸೇರಿಸಿದೆ, ಆದರೆ ರಣಜಿ ಟ್ರೋಫಿ ಪಂದ್ಯಾವಳಿಗಳು ಮತ್ತು ಇತರ ನಗರಗಳಲ್ಲಿ ಇತರ ಪ್ರಮುಖ ಕ್ರಿಕೆಟ್ ಟೂರ್ನಿಗಳ ಕಾರಣ ಪರೀಕ್ಷೆಯ ಸಮಯದಲ್ಲಿ ಗಮನ ನೀಡಲು ಸಾಧ್ಯವಾಗಲಿಲ್ಲ. ಕ್ರಿಕೆಟ್‌ನಲ್ಲಿ ಅವರ ಉತ್ತಮ ಪ್ರದರ್ಶನ ಕಂಡು ನಾನಂತೂ ಅವರ ಕಾಲೇಜು ವ್ಯಾಸಂಗಕ್ಕೆ ಹೆಚ್ಚು ಒತ್ತು ನೀಡಲಿಲ್ಲ' ಎನ್ನುತ್ತಾರೆ.

IPL 2022 ಪಾಟಿದಾರ್ ಸೆಂಚುರಿಯಿಂದ ಅಬ್ಬರಿಸಿದ ಆರ್‌ಸಿಬಿ, ಲಖನೌಗೆ ಬೃಹತ್ ಟಾರ್ಗೆಟ್!

ತನ್ನ ಮಗನ ಕ್ರಿಕೆಟ್ ಪ್ರತಿಭೆ ದೇವರ ಕೊಡುಗೆ. ಅವನು ತನ್ನದೇ ಆದ ರೀತಿಯಲ್ಲಿ ಆಟವನ್ನು ಆನಂದಿಸುತ್ತಾನೆ ಎಂದು ಪಾಟಿದಾರ್ ಹೇಳುತ್ತಾರೆ. ನಾವು ಅತ್ಯಂತ ಸರಳ ಜೀವನ ನಡೆಸುತ್ತಿದ್ದು, ಉತ್ತಮ ಪ್ರದರ್ಶನ ನೀಡುವ ಒತ್ತಡದಿಂದ ರಜತ್ ಅವರನ್ನು ಸದಾ ಮುಕ್ತವಾಗಿರಿಸುತ್ತೇವೆ ಎಂದರು. ಅವರು ಪಂದ್ಯದ ಆರಂಭದಲ್ಲಿಯೇ ಔಟಾದರೂ, ಚಿಂತಿಸುವ ಅಗತ್ಯವಿಲ್ಲ ಎಂದು ನಾನು ಆತನಿಗೆ ಹೇಳುತ್ತಿರುತ್ತೇನೆ ಎಂದಿದ್ದಾರೆ.

click me!