No bio-bubble ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಗುಡ್‌ ನ್ಯೂಸ್ ನೀಡಿದ ಬಿಸಿಸಿಐ..!

By Naveen KodaseFirst Published May 31, 2022, 12:34 PM IST
Highlights

* ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗೆ ಕ್ಷಣಗಣನೆ

* ಜೂನ್ 09ರಿಂದ ಆಫ್ರಿಕಾ ಎದುರು 5 ಪಂದ್ಯಗಳ ಟಿ20 ಸರಣಿ ಆರಂಭ

* ಬಯೋಬಬಲ್‌ ಇಲ್ಲದೇ ಟಿ20 ಸರಣಿ ಆಯೋಜಿಸಲು ಬಿಸಿಸಿಐ ಸಿದ್ದತೆ

ಅಹಮದಾಬಾದ್(ಮೇ.31)‌: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa T20 Series) ನಡುವಿನ ಟಿ20 ಸರಣಿ ಬಯೋಬಬಲ್‌ ಇಲ್ಲದೆಯೇ ನಡೆಯಲಿದೆ ಎಂದು ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ (Jay Shah) ಖಚಿತಪಡಿಸಿದ್ದಾರೆ. ಹೀಗಾದಲ್ಲಿ ಕೋವಿಡ್ ಬಳಿಕ ನಡೆಯಲಿರುವ ಮೊದಲ ಬಯೋಬಬಲ್ ರಹಿತ (No Bio-Bubble) ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇದಾಗಲಿದೆ. 2020ರಿಂದ ಇದುವರೆಗೂ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಗಳು, ಸರಣಿಗಳು ಬಯೋಬಬಲ್‌ನೊಳಗೆ ನಡೆದಿದ್ದವು. ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿ ಕೂಡಾ ಬಯೋಬಬಲ್‌ನೊಳಗೆ ನಡೆದಿತ್ತು.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಬಯೋಬಬಲ್‌ ವ್ಯವಸ್ಥೆಯನ್ನು ಈ ವರ್ಷದ ಐಪಿಎಲ್‌ನಲ್ಲೇ ಕೊನೆಗೊಳಿಸುತ್ತೇವೆ. ದಕ್ಷಿಣ ಆಫ್ರಿಕಾ ಸರಣಿಯಿಂದ ಆಟಗಾರರಿಗೆ ಎಂದಿನಂತೆ ಕೋವಿಡ್‌ ಪರೀಕ್ಷೆ ನಡೆಸುತ್ತೇವೆ. ಆದರೆ ಬಯೋಬಬಲ್‌ನಲ್ಲಿ ಆಡಿಸುವುದಿಲ್ಲ’ ಎಂದಿದ್ದಾರೆ. ‘ಆಟಗಾರರಿಗೆ ನಿಯಂತ್ರಿತ ವಾತಾವರಣದಲ್ಲಿ ಮುಂದುವರಿಯುವುದು ಕಷ್ಟವಾಗಲಿದೆ. ಆದರೆ ಐಪಿಎಲ್‌ನಲ್ಲಿ ಪ್ರತೀ ತಂಡಕ್ಕೂ ಬೇರೆ ಬೇರೆ ಹೋಟೆಲ್‌ಗಳ ವ್ಯವಸ್ಥೆ ಮಾಡಿದ್ದರಿಂದ ಬಯೋಬಬಲ್‌ನಲ್ಲೂ ಉತ್ತಮ ವಾತಾವರಣವಿತ್ತು’ ಎಂದು ತಿಳಿಸಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 5 ಪಂದ್ಯಗಳ ಟಿ20 ಸರಣಿಯ ಜೂನ್ 09ರಿಂದ ಆರಂಭವಾಗಲಿದೆ. ಉಳಿದ 4 ಪಂದ್ಯಗಳಿಗೆ ಕಟಕ್‌(ಜೂ.12), ವಿಶಾಖಪಟ್ಟಣಂ(ಜೂ.14), ರಾಜ್‌ಕೋಟ್‌(ಜೂ.17), ಬೆಂಗಳೂರು(ಜೂ.19) ಆತಿಥ್ಯ ವಹಿಸಲಿದೆ. ಆಸ್ಟ್ರೇಲಿಯಾದಲ್ಲಿ ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವಭಾವಿ ಸಿದ್ದತೆಗಾಗಿ ಟೀಂ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಸರಣಿಯನ್ನಾಡಲು ಸಜ್ಜಾಗಿದೆ. ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಅವರಂತಹ ತಾರಾ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲಾಗಿದ್ದು, ಕೆ ಎಲ್. ರಾಹುಲ್, ಭಾರತ ಟಿ20 ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಸರಣಿಗೆ ಭಾರತ ಟಿ20 ತಂಡ:

ಕೆ.ಎಲ್‌.ರಾಹುಲ್‌(ನಾಯಕ), ಋುತುರಾಜ್‌, ಇಶಾನ್‌, ದೀಪಕ್‌ ಹೂಡಾ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌(ಉಪನಾಯಕ), ಕಾರ್ತಿಕ್‌, ಹಾರ್ದಿಕ್‌, ವೆಂಕಟೇಶ್‌, ಚಹಲ್‌, ಕುಲ್ದೀಪ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯ್‌, ಭುವನೇಶ್ವರ್‌, ಹರ್ಷಲ್‌, ಆವೇಶ್‌ ಖಾನ್‌, ಅಶ್‌ರ್‍ದೀಪ್‌, ಉಮ್ರಾನ್‌.

ಪರಿಶ್ರಮಕ್ಕೆ ಸಿಕ್ಕ ಬೆಲೆ: ಟೀಂ ಇಂಡಿಯಾಗೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದ ದಿನೇಶ್ ಕಾರ್ತಿಕ್‌...!

ಡಿಸೆಂಬರಲ್ಲಿ ಭಾರತ-ಆಸೀಸ್‌ ಮಹಿಳೆಯರ ಟಿ20 ಸರಣಿ

ಮೆಲ್ಬರ್ನ್‌: ಇದೇ ವರ್ಷಾಂತ್ಯದಲ್ಲಿ ಆಸ್ಪ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಟಿ20 ಸರಣಿ ಆಡಲಿದೆ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಸೋಮವಾರ ಮಾಹಿತಿ ನೀಡಿದೆ. ಈ ಆವೃತ್ತಿಯ ಪುರುಷ ಹಾಗೂ ಮಹಿಳಾ ತಂಡಗಳ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿಯನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ಪ್ರಕಟಿಸಿದ್ದು, ಡಿಸೆಂಬರ್‌ನಲ್ಲಿ ಭಾರತ ವಿರುದ್ಧ ಟಿ20 ಸರಣಿ ಆಡಲಿದೆ ಎಂದು ತಿಳಿಸಿದೆ. ಆದರೆ ಪಂದ್ಯಗಳ ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. ಭಾರತ ಮಹಿಳಾ ತಂಡ ಜುಲೈನಲ್ಲಿ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದು, ಬಳಿಕ ಇಂಗ್ಲೆಂಡ್‌ ವಿರುದ್ಧ ಅವರದೇ ನೆಲದಲ್ಲಿ ತಲಾ 3 ಏಕದಿನ, ಟಿ20 ಪಂದ್ಯಗಳನ್ನಾಡಲಿದೆ.

click me!